Home ಅಂಕಣ ಡಿ ಕೆ ಶಿವಕುಮಾರ್ ಅವರ ತುಳುನಾಡಿನ ಕುರಿತಾದ ಕಾಳಜಿಯು, ಜನಸಾಮಾನ್ಯರಲ್ಲಿ ಮೂಡಿರುವ ಆತಂಕಗಳೂ..!

ಡಿ ಕೆ ಶಿವಕುಮಾರ್ ಅವರ ತುಳುನಾಡಿನ ಕುರಿತಾದ ಕಾಳಜಿಯು, ಜನಸಾಮಾನ್ಯರಲ್ಲಿ ಮೂಡಿರುವ ಆತಂಕಗಳೂ..!

0

“..ತುಳುನಾಡಿನ ಹಿಂದುಳಿದಿರುವಿಕೆ, ಅಭಿವೃದ್ದಿಯ ಕುರಿತು ಉಪ ಮುಖ್ಯಮಂತ್ರಿಗಳು ಹಾಗು ಜಿಲ್ಲೆಯ ಜನಪ್ರತಿನಿಧಿಗಳ ಕಾಳಜಿಗೆ ಧನ್ಯವಾದಗಳನ್ನು ಸಲ್ಲಿಸುತ್ತಲೇ ಕೆಲವೊಂದು ಸಂದೇಹ, ಪ್ರಶ್ನೆಗಳನ್ನು ಅವರುಗಳ ಮುಂದೆ ಇಡಬೇಕಿದೆ..” ಮುನೀರ್ ಕಾಟಿಪಳ್ಳ ಅವರ ಬರಹದಲ್ಲಿ

ಮಂಗಳೂರಿನಲ್ಲಿ ಇಂದು ‘ಪ್ರವಾಸೋದ್ಯಮ ಸಮಾವೇಶ’ ನಡೆದಿದೆ. ಇತ್ತೀಚಿಗಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳ, ಸಮಸ್ಯೆ, ಅಭಿವೃದ್ದಿಯ ಕುರಿತು ಪದೇ ಪದೆ ಬಹಳ ಕಾಳಜಿಯಿಂದ ಮಾತಾಡುತ್ತಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಸಮಾವೇಶದಲ್ಲಿ  ಮತ್ತೆ ಕರಾವಳಿಯ ಹಿಂದುಳಿಯುವಿಕೆಯ ಕುರಿತು ಮಹತ್ವದ ಅಂಶಗಳನ್ನು ಎತ್ತಿ ಮಾತಾಡಿದ್ದಾರೆ. ಪ್ರವಾಸೋದ್ಯಮದ ಮೂಲಕ ಅಭಿವೃದ್ದಿಯ ಹೊಸ ಶಕೆ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಬಹಳ ಪ್ರಮುಖವಾಗಿ ತುಳುನಾಡಿನ ಪ್ರತಿಭಾವಂತ ಯುವಜನತೆ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವುದನ್ನು ಉಲ್ಲೇಖಿಸಿದ್ದಾರೆ. ಇಲ್ಲಿನ 300 ಕಿ ಮೀ ಸಮುದ್ರ ತೀರವನ್ನು ದೊಡ್ಡ ಮಟ್ಟದಲ್ಲಿ ಉದ್ಯಮ, ಹೂಡಿಕೆಗೆ ಬಳಸುವುದು, ಜಿಲ್ಲೆಯಲ್ಲಿ ಪಂಚತಾರಾ ಹೊಟೇಲ್ ಗಳನ್ನು ತೆರೆಯುವುದು ಮುಂತಾದ ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಸ್ಥಳೀಯ ಯುವಜನತೆ ತಮ್ಮ ತಾಯ್ನೆಲದಲ್ಲೆ ಉದ್ಯೋಗ ಪಡೆಯಲು, ಗಲ್ಪ್ ಸಹಿತ ಬೆಂಗಳೂರು, ಮುಂಬೈನಲ್ಲಿ ನೆಲೆಸಿರುವ ತುಳುನಾಡಿನವರು ಮರಳಿ ತಾಯ್ನೆಲಕ್ಕೆ ಮರಳುವುದು, ಹೂಡಿಕೆ ಮಾಡುವುದು, ಉದ್ಯೋಗ ಪಡೆಯುವುದು ಸಾಧ್ಯ ಆಗುತ್ತದೆ. ಎಂದು ಹೇಳಿದ್ದಾರೆ.

ಈ ಮಾತುಗಳನ್ನು ಸಭೆಯಲ್ಲಿದ್ದ ಜಿಲ್ಲೆಯ ಶಾಸಕರು, ಸಂಸದರುಗಳು ಪಕ್ಷಾತೀತವಾಗಿ ಅನುಮೋದಿಸಿದ್ದಾರೆ.‌ ತುಳುನಾಡಿನ ಹಿಂದುಳಿದಿರುವಿಕೆ, ಅಭಿವೃದ್ದಿಯ ಕುರಿತು ಉಪ ಮುಖ್ಯಮಂತ್ರಿಗಳು ಹಾಗು ಜಿಲ್ಲೆಯ ಜನಪ್ರತಿನಿಧಿಗಳ ಕಾಳಜಿಗೆ ಧನ್ಯವಾದಗಳನ್ನು ಸಲ್ಲಿಸುತ್ತಲೇ ಕೆಲವೊಂದು ಸಂದೇಹ, ಪ್ರಶ್ನೆಗಳನ್ನು ಅವರುಗಳ ಮುಂದೆ ಇಡಬೇಕಿದೆ.

ಪ್ರಧಾನವಾಗಿ ಡಿಕೆ ಶಿವಕುಮಾರ್ ರಲ್ಲಿ ಕೇಳಲಿರುವುದು, ಸಮಾವೇಶ ಮುಂದಿಟ್ಟಿರುವ ಪ್ರವಾಸೋದ್ಯಮ ಯೋಜನೆಯಲ್ಲಿ ಸ್ಥಳೀಯರ ಪಾಲುದಾರಿಕೆ, ಅವಕಾಶಗಳು ಹೇಗಿರುತ್ತವೆ, ಸೃಷ್ಟಿಯಾಗುವ ಉದ್ಯೋಗವಕಾಶಗಳು ಎಷ್ಟು, ಅದರಲ್ಲಿ ಸ್ಥಳೀಯ ಯುವ ಜನತೆಯ ಪಾಲೆಷ್ಟು ? ಸ್ಥಳೀಯರಿಗೆ ಉದ್ಯೋಗ, ಪಾಲುದಾರಿಕೆ ಒದಗಿಸಲು ನಿಯಮಗಳನ್ನೇನಾದರು ರೂಪಿಸುತ್ತೀರಾ ? ಅಥವಾ ನಮ್ಮ ಸಮುದ್ರ ದಂಡೆ, ಅರಣ್ಯ, ಪರಿಸರಗಳು ಮುಂಬೈ, ಡೆಲ್ಲಿವಾಲಾಗಳು ಸಹಿತ  ಬಂಡವಾಳಶಾಹಿಗಳು ಹರಿದು ಮುಕ್ಕುವುದನ್ನು, ಸಂಪತ್ತು ದೋಚುವುದನ್ನು ಅಸಹಾಯಕರಾಗಿ ವೀಕ್ಷಿಸುವುದಷ್ಟೆ ನಮ್ಮ‌ವರಿಗೆ ದೊರಕುವ ಭಾಗ್ಯವೆ ?

ಈಗಾಗಲೆ ಕರಾವಳಿಯ ಸಮುದ್ರ ದ‌ಂಡೆಗಳು ಮೀನುಗಾರ ಬಂಧುಗಳಿಂದ ಕೈ ತಪ್ಪತೊಡಗಿದೆ. ಸಮುದ್ರಕ್ಕೆ ಮುಖ ಮಾಡಿರುವ  ಬಹುತೇಕ ಜಮೀನುಗಳನ್ನು ಮೀನುಗಾರರಿಂದ ದೊಡ್ಡ ಉದ್ಯಮಿಗಳು ಖರೀದಿಸಿ ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಸಿಆರ್ ಝಡ್ ಕಾಯ್ದೆ ಬಲವಾಗಿರುವಾಗಲೆ ಬೇಕಾದಷ್ಟು ಉಲ್ಲಂಘನೆಗಳನ್ನು ಮಾಡಲಾಗಿದೆ.  ದೊಡ್ಡ ದೊಡ್ಡ ಬಂಗಲೆಗಳು, ಅತಿಥಿ ಗೃಹಗಳು ತಲೆ ಎತ್ತಿವೆ. ಸಿಆರ್ ಝಡ್ ನಿಯಮಗಳು ಕೆಲವೆಡೆ ಸಡಿಲಗೊಳಿಸಿದ ತಕ್ಷಣವೆ ಕಡಲ ದಂಡೆ ಪೂರ್ಣವಾಗಿ ಮೀನುಗಾರ ಸಮುದಾಯದಿಂದ ಕೈ ತಪ್ಪತೊಡಗಿದೆ, ಅವರ ಸಾಂಪ್ರದಾಯಿಕ ಮೀನುಗಾರಿಕೆಗೂ ಈ ಶ್ರೀಮಂತ ಉದ್ಯಮಿಗಳಿಂದ ಸಮಸ್ಯೆಗಳು ಎದುರಾಗ ತೊಡಗಿದೆ.

ಉದಾಹರಣೆಗೆ, ಪಡುಬಿದ್ರೆಯಿಂದ ಕಾಪು ವರಗಿನ ಸಮುದ್ರ ತೀರದಲ್ಲಿ‌ ಒಂದು ಸಲ ತಿರುಗಾಡಿ ನೋಡಿ. ಸಮುದ್ರಕ್ಕೆ ಮುಖಮಾಡಿರುವ ಜಮೀನು ಮೀನುಗಾರ ರಿಂದ ಪೂರ್ತಿಯಾಗಿ ಖಾಸಗಿ ಉದ್ಯಮಿಗಳು, ಶ್ರೀಮಂತರು ಖರೀದಿಸಿದ್ದಾರೆ. (ಇದರಲ್ಲಿ ಸ್ಥಳೀಯರು, ಮುಂಬೈ, ಬೆಂಗಳೂರು, ದುಬೈ ವಾಸಿಗಳೂ ಸೇರಿದ್ದಾರೆ) ಮೀನುಗಾರರು ‘ಅನಿವಾರ್ಯವಾಗಿ ಜಮೀನು ಮಾರಿ  ಸಮುದ್ರ ತೀರದಿಂದ ಒಳಭಾಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಉದ್ಯಮಿಗಳ ಕೈ ಸೇರಿದ ಸಮುದ್ರ ತೀರದ ಜಮೀನುಗಳಲ್ಲಿ ಹೊಟೇಲ್, ಹೋಂ ಸ್ಟೇ, ಐಷಾರಾಮಿ ಗೆಸ್ಟ್ ಹೌಸ್, ರೆಸಾರ್ಟ್ ಗಳು ಒಂದಕ್ಕೊಂದು ತಾಗಿ ಕೊಂಡು ಉದ್ದಕ್ಕೂ ತಲೆ ಎತ್ತಿ ನಿಂತಿವೆ. (ಕೆಲವು ಸಮುದ್ರ ದಂಡೆಯ ನಿಯಮಗಳನ್ನು ಮುರಿದಿರವುದೂ ಕಣ್ಣಿಗೆ ರಾಚುತ್ತವೆ.) ತಮ್ಮ ನಿರ್ಮಾಣ (ಉದ್ಯಮ) ದ ಮುಂಭಾಗದಲ್ಲಿ ನಾಡದೋಣಿ ಮೀನುಗಾರರ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಲು ಯತ್ನಿಸುತ್ತಿವೆ. ತಮ್ಮ (ಪ್ರವಾಸಿ) ಉದ್ಯಮಗಳಲ್ಲಿ ಒರಿಸ್ಸಾ, ಜಾರ್ಖಂಡ್, ಅಸ್ಸಾಂ, ಬೆಂಗಾಳದ ಅಗ್ಗದ ಕಾರ್ಮಿಕರನ್ನು ಕರೆತಂದು ದುಡಿಸಿಕೊಳ್ಳುತ್ತಿವೆ.

ಇದು ಉಪ ಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ಹಾಗು ತುಳುನಾಡಿನ ಸಂಸದ, ಶಾಸಕರು ಗಳು ಇಂದು ಘೋಷಿಸಿರುವ ‘ಪ್ರವಾಸೋದ್ಯಮ ನೀತಿ’ ಯ ಟ್ರೈಲರ್ ನಂತೆ ಭಾಸವಾಗುತ್ತದೆ. ಪ್ರವಾಸೋದ್ಯಮ ನೀತಿ ಘೋಷಣೆ ಯ ಮುಂಚಿನ ಸ್ಥಿತಿ ಹೀಗಿರುವಾಗ, ನೀತಿ ಜಾರಿಗೆ ಬಂದ ತರುವಾಯ ಹೇಗಿರಬಹುದು ? ತಣ್ಣೀರು ಬಾವಿ ಸಮುದ್ರ ದಂಡೆಗೆ ತಾಗಿಕೊಂಡಿರುವ ತೋಟ, ಕಸ್ಬಾ, ಕುದ್ರೋಳಿ, ಬೊಕ್ಕಪಟ್ನ ಬೆಂಗ್ರೆಗಳು, ತಣ್ಣೀರು ಬಾವಿ ನಿವಾಸಿಗಳ ಕತೆ ಏನಾಗಬಹುದು ? ಈ ಹಿಂದೆಯೆ ಸಾವಿರಾರು ಸಂಖ್ಯೆಯಲ್ಲಿರುವ ಇಲ್ಲಿಯ ನಿವಾಸಿಗಳನ್ನು ಅತಿಕ್ರಮಣದಾರರು ಎಂದು ಗುರುತಿಸಲಾಗಿತ್ತು. ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಈ ಆಯಕಟ್ಟಿನ ಸಮುದ್ರ ದಂಡೆ  ಪ್ರದೇಶಗಳು “ರಾಜಾಶ್ರಯ” ಹೊಂದಿರುವ ಉದ್ಯಮಪತಿಗಳ ಕಣ್ಣಿಗೆ ದಶಕದ ಹಿಂದೆಯೆ ಬಿದ್ದಿತ್ತು.

ಮಂಗಳೂರಿನಿಂದ ಕಾರವಾರದ ತನಕದ ಮೀನುಗಾರರ ಗ್ರಾಮಗಳ  ಸ್ಥಿತಿ ಮುಂದಕ್ಕೆ ಏನಾಗಬಹುದು ? ದುಡ್ಡಿನ ಸುರಿಮಳೆಯ ಅಬ್ಬರಕ್ಕೆ ತಮ್ಮ ನೆಲವನ್ನು ಮಾರಾಟ ಮಾಡಿ ಮೀನುಗಾರ ಕುಟುಂಬಗಳು ಹೊರ ನಡೆಯುವಂತಾದರೆ ಅದು ಕರಾವಳಿ ಜಿಲ್ಲೆಗಳ ನೈಜ ಅಭಿವೃದ್ದಿ,  ತುಳುನಾಡಿನ ವಿದ್ಯಾವಂತ ಯುವಜನರ ವಲಸೆ ತಪ್ಪಿಸುವ ಜನಪರ ಕಾರ್ಯಕ್ರಮ ಅಂತ ಭಾವಿಸಲು ಸಾಧ್ಯ ವಾಗುತ್ತದೆಯೆ ?

ನೀವು ಮುಂದಿಟ್ಟಿರುವ ಪ್ರವಾಸೋದ್ಯಮ ನೀತಿಯಲ್ಲಿ ಸ್ಥಳೀಯ ಜನತೆಯ ಒಳಗೊಳ್ಳುವಿಕೆ ಹೇಗಿರುತ್ತದೆ ? ಸಮುದ್ರ, ನದಿ ದಂಡೆಯಲ್ಲಿ ವಾಸ ಇರುವವರು ತಮ್ಮ ಸ್ವಂತ ಜಮೀನು, ತಮ್ಮ ಕೇರಿಯ ಸಮುದ್ರ, ನದಿ ತೀರದಲ್ಲಿ ಪ್ರವಾಸಿಗಳಿಗಾಗಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಸರಕಾರದ ಕರಾವಳಿ ಪ್ರವಾಸೋದ್ಯಮ ನೀತಿಯಲ್ಲಿ ಅವಕಾಶ, ಪ್ರೋತ್ಸಾಹ ಇದೆಯೆ ? ಉದ್ಯಮಿಗಳು ತೆರೆಯುವ  ಮನೋರಂಜನಾ ಕೇಂದ್ರ, ಹೊಟೇಲ್, ರೆಸಾರ್ಟ್ ಸಹಿತ ಪ್ರವಾಸಿ ಯೋಜನೆಗಳಲ್ಲಿ ಉತ್ತರ ಭಾರತದ ಅಗ್ಗದ ಕಾರ್ಮಿಕರನ್ನು ಪೂರ್ಣಪ್ರಮಾಣದಲ್ಲಿ ನೇಮಿಸಿಕೊಳ್ಳದಂತೆ ಕಡಿವಾಣ ಹಾಕುವ, ಸ್ಥಳೀಯ ಯುವಜನರಿಗೆ  ಉದ್ಯೋಗ ಒದಗಿಸುವಂತೆ ನಿಯಮಗಳನ್ನು ರೂಪಿಸಿದ್ದೀರಾ ? ಹಾಗಲ್ಲದಿದ್ದರೆ, ದುಬೈ, ಸೌದಿ, ಬೆಂಗಳೂರು, ಮುಂಬೈಗೆ ವಲಸೆ ಹೋಗಿರುವ, ಹೋಗಲು ಸಿದ್ದರಾಗಿರುವ ಯುವಜನರ ಭವಿಷ್ಯವನ್ನು ತಾಯ್ನೆಲದಲ್ಲೆ ಬೆಳಗುವ ನಿಮ್ಮ ಕಾಳಜಿಯ ಮಾತುಗಳು ಜನಸಾಮಾನ್ಯರನ್ನು ಮರಳು‌ಮಾಡಿ, ಬಂಡವಾಳಶಾಹಿಗಳನ್ನು ಮತ್ತಷ್ಟು ಕೊಬ್ಬಿಸುವ, ನಮ್ಮ ಸುಂದರ, ಅಷ್ಟೆ ಸೂಕ್ಷ್ಮವಾದ ಪ್ರಕೃತಿಯನ್ನು ನುಂಗಿ ಹಾಳುಗೆಡಹುವ, ತುಳುನಾಡಿನ ಮಣ್ಣಿನ ಮಕ್ಕಳನ್ನು ಮತ್ತಷ್ಟು ಅಸಹಾಯಕತೆಗೆ ತಳ್ಳುವ ಬಣ್ಣದ ಮಾತುಗಳ ಮಾತ್ರ ಆಗಿ ಉಳಿಯುವುದಿಲ್ಲವೆ?

You cannot copy content of this page

Exit mobile version