ಅಣ್ಣನನ್ನು ಒಂದು ಬಾರಿಯಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂದು ಮಹತ್ವದ ಕನಸು ಹೊತ್ತು ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿರುವ ಡಿಕೆ ಸುರೇಶ್ ಅವರ ಹೆಸರು, ಮುಂದಿನ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಮೊದಲ ಹೆಸರಾಗಿ ನಿಂತಿದೆ. ಇನ್ನೇನು ಎರಡನೇ ಅವಧಿಯ ತಮ್ಮ ಅಧ್ಯಕ್ಷ ಹುದ್ದೆ ಮುಗಿಯುತ್ತಿರುವ ಹಂತದಲ್ಲಿ ಪಕ್ಷಕ್ಕೆ ಡಿಕೆ ಶಿವಕುಮಾರ್ ನಂತರಕ್ಕೆ ಯಾರಾಗಲಿದ್ದಾರೆ ಎಂಬ ಪ್ರಶ್ನೆಯ ನಡುವೆ ಹೀಗೊಂದು ಲೆಕ್ಕಾಚಾರ ಕಾಂಗ್ರೆಸ್ ಪಾಳೆಯದಲ್ಲಿ ಶುರುವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮತ್ತು ಮೂರು ಕ್ಷೇತ್ರಗಳ ಉಪಚುನಾಣೆಗಳ ಸತತ ಯಶಸ್ಸಿನ ನಂತರ ಒಬ್ಬ ಸಮರ್ಥ ನಾಯಕತ್ವಕ್ಕೆ ಕಾಂಗ್ರೆಸ್ ಹುಡುಕಾಟ ನಡೆಸಿದ್ದು, ಹಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಅವುಗಳಲ್ಲಿ ಅತ್ಯಂತ ಅಗ್ರಪಂಕ್ತಿಯಲ್ಲಿ ಡಿಕೆ ಸುರೇಶ್ ಹೆಸರು ಕೇಳಿ ಬಂದಿದೆ.
ಇತ್ತ ಅಧ್ಯಕ್ಷ ಸ್ಥಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಯಿಂದಲೂ ಒಂದಷ್ಟು ಹೆಸರುಗಳು ಕೇಳಿ ಬಂದರೆ, ಡಿ ಕೆ ಶಿವಕುಮಾರ್ ಅವರ ಕಡೆಯಿಂದಲೂ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ ಡಿಕೆ ಶಿವಕುಮಾರ್ ಕಡೆಯಿಂದ ಬಂದ ಏಕಮಾತ್ರ ಹೆಸರು ಡಿಕೆ ಸುರೇಶ್ ಆಗಿದ್ದು, ಡಿಕೆ ಸುರೇಶ್ ಇತ್ತ ಸಿದ್ದರಾಮಯ್ಯನವರಿಗೂ ಆಪ್ತರಾಗಿದ್ದು, ಅವರ ಹೆಸರನ್ನು ಇತರೆ ನಾಯಕರು ಅಷ್ಟು ಸುಲಭಕ್ಕೆ ತಗೆದು ಹಾಕಲಾರರು ಎಂಬ ವಿಶ್ವಾಸ ಡಿಕೆ ಶಿವಕುಮಾರ್ ಕಡೆಯಿಂದ ಮೂಡಿದೆ. ಸಂಕ್ರಾಂತಿ ಹಬ್ಬದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಸ್ಥಾನದ ಬಗ್ಗೆಯೂ ನಿಗಾ ಇಟ್ಟಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ತಮ್ಮ ನಂತರ ಈ ಕೆಪಿಸಿಸಿ ಅಧಿಕಾರ ಬೇರೆಯವರಿಗೆ ಹೋದರೆ ಸಮಸ್ಯೆಯಾಗಬಹುದು ಎಂದು ಅವಲೋಕಿಸಿ, ತನ್ನ ಸಹೋದರ ಡಿ.ಕೆ.ಸುರೇಶ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಕೊಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಭಾರಿ ಮಹತ್ವದ ಕುರ್ಚಿ ಆಗಿರುವುದರಿಂದ ಇದು ಕೈತಪ್ಪಿದರೆ ಮುಂದಿನ ರಾಜಕೀಯ ಹಾದಿಗೆ ಕಷ್ಟವಾಗಬಹುದು ಎಂದು ಹೇಳಲಾಗಿದೆ.
ಇತ್ತ ಸಿದ್ದರಾಮಯ್ಯ ಕಡೆಯಿಂದ ಒಂದಷ್ಟು ಹೆಸರುಗಳು ಕೇಳಿ ಬಂದಿದ್ದು, ಸತೀಶ್ ಜಾರಕಿಹೊಳಿ ಹೆಸರು ಪ್ರಬಲವಾಗಿ ಕೇಳಿ ಬಂದಿದೆ.. ಇದರ ಜೊತೆ ಜೊತೆಗೇ ಈಶ್ವರ್ ಖಂಡ್ರೆ, ಕೆಎನ್ ರಾಜಣ್ಣ, ದಿನೇಶ್ ಗುಂಡೂರಾವ್ ಹೆಸರುಗಳೂ ಕೇಳಿ ಬಂದಿದೆ.