ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಿಢೀರನೆ ದೆಹಲಿಗೆ ಹೋಗಿರುವ ಬಗ್ಗೆ ಮಾಧ್ಯಮಗಳಲ್ಲಿ ನಾನಾ ರೀತಿಯ ಪ್ರತಿಕ್ರಿಯೆ ಬರುತ್ತಿರುವ ನಡುವೆಯೇ ದೆಹಲಿ ಬುಲಾವ್ ಬಗ್ಗೆ ಡಿಕೆ ಶಿವಕುಮಾರ್ ಹೊಸ ಮಾಹಿತಿ ಹೊರಬಿಟ್ಟಿದ್ದಾರೆ. ಎಐಸಿಸಿ ಕರೆದಿರುವ ಈ ಭೇಟಿ ಕಾಂಗ್ರೆಸ್ ಪಕ್ಷವನ್ನು ಬಲಡಿಸಲು ಎಐಸಿಸಿ (AICC) ತೆಗೆದುಕೊಂಡಿರುವ ಕ್ರಮಗಳನ್ನು ಸ್ವಾಗತಿಸುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನ ಎಲ್ಲಾ ಜಿಲ್ಲಾ ಅಧ್ಯಕ್ಷರ ಒಡಗೂಡಿ ದೆಹಲಿ ಭೇಟಿಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಪ್ರಸ್ತಾಪವಾಗಿದೆ. ಈ ಭೇಟಿ ಅಥವಾ ಸಭೆಯಿಂದ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರಿಗೆ ನೇರ ಹೈಕಮಾಂಡ್ ಇಂದಲೇ ಮಾರ್ಗದರ್ಶನ ನೀಡಿದಂತಾಗಿದೆ ಎಂದು ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೊತೆಗೆ ಪಕ್ಷವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಎಐಸಿಸಿ ತರಬೇತಿ ಶಿಬಿರವನ್ನು ಏರ್ಪಡಿಸಿತ್ತು, ಮಾಧ್ಯಮದವರ ಜೊತೆ ಹೇಗೆ ವರ್ತಿಸಬೇಕು, ಸಾಮಾಜಿಕ ಜಾಲತಾಣಗಳನ್ನು ಹೇಗೆ ನಿರ್ವಹಿಸಬೇಕು, ಪಕ್ಷದ ಆಸ್ತಿಗಳನ್ನು ಹೇಗೆ ಕಾಯ್ದುಕೊಳ್ಳಬೇಕು ಮತ್ತು ಸದಸ್ಯರ ಸಂಖ್ಯೆಯನ್ನು ಹೇಗೆ ಹೆಚ್ಚಿಸಬೇಕು ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಯಿತು ಎಂದು ಶಿವಕುಮಾರ್ ಹೇಳಿದರು.