ಪುತ್ತೂರು ಕ್ಷೇತ್ರದ ಬಿಜೆಪಿ ನಾಯಕ ಜಗನ್ನಿವಾಸ್ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ತನ್ನ ಕಾಲೇಜು ಸಹಪಾಠಿ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭಿಣಿಯಾದ ಬಳಿಕ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಡಿಎನ್ಎ ಪರೀಕ್ಷೆಯ ವರದಿ ಬಹಿರಂಗವಾಗಿದೆ. ವರದಿಯಂತೆ ಪ್ರಕರಣದ ಆರೋಪಿ ಶ್ರೀಕೃಷ್ಣನೇ ಮಗುವಿನ ತಂದೆ ಎಂದು ದೃಢಪಟ್ಟಿದೆ.
ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಶ್ರೀಕೃಷ್ಣನೇ ಮಗುವಿನ ತಂದೆ ಎಂದು ಡಿಎನ್ಎ ವರದಿಯಲ್ಲಿ ಬಹಿರಂಗವಾಗಿದೆ, ಹಾಗೂ ಈ ವರದಿ ಶುಕ್ರವಾರವೇ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ ಎಂದು ಹೇಳಿದರು.
ಸಮಾಜದ ಬಡ ಹೆಣ್ಣುಮಗಳ ವಿರುದ್ಧ ಅನ್ಯಾಯ ನಡೆದಿದೆ. ಹಿಂದಿನ ಕಾಲದಲ್ಲಿ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆದಿತ್ತು. ಇಂದಿನ ಕಾಲದಲ್ಲಿ ಡಿಎನ್‌ಎ ಪರೀಕ್ಷೆಯೇ ಅಂತಿಮ ಸತ್ಯ. ಈ ಪ್ರಕರಣದಲ್ಲೂ ಅದು ಸಾಬೀತಾಗಿದೆ. ಹಾಗೆಯೇ ವರದಿಯನ್ನು ಕುಟುಂಬಸ್ಥರಿಗೂ ತಿಳಿಸಿ ಆಗಿದೆ ಮತ್ತು ನ್ಯಾಯಾಲಯಕ್ಕೂ ಸಲ್ಲಿಕೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೆಪಿ ನಂಜುಂಡಿ ಹೇಳಿದ್ದಾರೆ.
ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯೊಂದಿಗೆ ವಿವಾಹವಾಗುವುದು ನಮ್ಮ ಒತ್ತಾಯವಾಗಿದೆ. ಮದುವೆಯಾಗುವುದು ಇಬ್ಬರಿಗೂ ಉತ್ತಮ. ನಮಗೆ ಕೋರ್ಟ್ ಪ್ರಕ್ರಿಯೆ ಬೇಕಾಗಿಲ್ಲ. ಆದರೆ ಆರೋಪಿ ಇಷ್ಟೆಲ್ಲಾ ಹಿಂದೇಟು ಹಾಕಿದ ಪರಿಣಾಮ ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ ಎಂದು ಹೇಳಿದ್ದಾರೆ.
ಆರೆಸ್ಸೆಸ್ , ಬಜರಂಗದಳ, ಶ್ರೀ ರಾಮ ಸೇನೆಗಳು ಹಾಗೂ ಹಿಂದುತ್ವ ಮುಖಂಡರು ಅನ್ನಿಸಿಕೊಂಡ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಿಂದು ಸಮುದಾಯದ ಹೆಣ್ಣು ಮಗಳಿಗೆ ಆದ ಅನ್ಯಾಯದ ಬಗ್ಗೆ ದನಿ ಎತ್ತಬೇಕು. ಸಂತ್ರಸ್ತ ಯುವತಿಯ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.