ಹಾಸನ : ಹಾಸನ ತಾಲ್ಲೂಕಿನ ಗೊರೂರು ಬಳಿ ಬಸ್ ಕಂಡಕ್ಟರ್ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ 9 ಜನರ ಮೇಲೆ ಪ್ರಕರಣ ದಾಖಲಾಗಿದೆ.ಗುರುವಾರ ನಡೆದ ಈ ಘಟನೆಯ ಬಗ್ಗೆ ನಿರ್ವಾಹಕ ಬಸವರಾಜು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ವನಿತಾ, ಲಕ್ಷ್ಮೀ, ಕುಮಾರ, ತಿಮ್ಮೇಗೌಡ, ಶೇಖರ್ ಪೂಜಾರಿ, ಸಂದೀಪ, ರವಿಕುಮಾರ, ಗಿಡ್ಡೇಗೌಡ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.ಹಾಸನ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಬೇರೊಂದು ಬಸ್ ನಲ್ಲಿ ಪ್ರಯಾಣಿಸುವಂತೆ ಕಂಡಕ್ಟರ್ ಸೂಚಿಸಿದ್ದರು. ಈ ಸಂಬಂಧ ವಿದ್ಯಾರ್ಥಿನಿಯೊಂದಿಗೆ ಕಂಡಕ್ಟರ್ ವಾಗ್ವಾದ ನಡೆಸಿದ್ದರು. ಈ ಬಗ್ಗೆ ಆಕೆ ದೂರವಾಣಿ ಕರೆ ಮಾಡಿ ಕಂಡಕ್ಟರ್ ಜತೆ ಜಗಳವಾಗಿರುವ ವಿಷಯ ತಿಳಿಸಿದ್ದರು. ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಅಡ್ಡಗಟ್ಟಿದ್ದ ಆಕೆಯ ಪೋಷಕರು ಹಾಗೂ ಗ್ರಾಮಸ್ಥರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.