ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಖರೀದಿಸುವುದನ್ನು ಮುಂದುವರಿಸುತ್ತಿರುವ ಬಗ್ಗೆ ಅಮೆರಿಕ ತನ್ನ ಎಚ್ಚರಿಕೆಯನ್ನು ಪುನರುಚ್ಚರಿಸಿದೆ. ಮಾಸ್ಕೋದಿಂದ ಕಚ್ಚಾ ತೈಲ ಖರೀದಿಸುವುದನ್ನು ಭಾರತ ನಿಲ್ಲಿಸಬೇಕು ಎಂದು ಅಮೆರಿಕದ ಸಲಹೆಗಾರ ನವಾರೊ ಹೇಳಿದ್ದಾರೆ.
ಉಕ್ರೇನ್ ಜೊತೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತದ ತೈಲ ಖರೀದಿಯಿಂದ ಬರುವ ಹಣವೇ ಹೆಚ್ಚಾಗಿ ಉಪಯೋಗವಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೊ ತಿಳಿಸಿದ್ದಾರೆ. ಹೊಸದಿಲ್ಲಿ ಈಗ ರಷ್ಯಾ ಮತ್ತು ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ದೂರಿದ್ದಾರೆ. ಅಮೆರಿಕದ ಕಾರ್ಯತಂತ್ರದ ಪಾಲುದಾರನಾಗಿ ಭಾರತವನ್ನು ಪರಿಗಣಿಸಬೇಕೆಂದರೆ, ರಷ್ಯಾ ಮತ್ತು ಚೀನಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಪರೋಕ್ಷವಾಗಿ ಸೂಚಿಸಿದ್ದಾರೆ.
ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವ ಕಾರಣಕ್ಕೆ, ಅಮೆರಿಕಕ್ಕೆ ಭಾರತ ಒಂದು ಗುರಿಯಾಗಿದೆ. ರಷ್ಯಾದಿಂದ ತೈಲ ಖರೀದಿ ಮುಂದುವರಿಸುತ್ತಿರುವ ಕಾರಣಕ್ಕೆ ಭಾರತದ ವಸ್ತುಗಳ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಇತ್ತೀಚೆಗೆ ನಿರ್ಧರಿಸಿದ್ದಾರೆ. ಇದರಿಂದ ಭಾರತದ ಮೇಲೆ ಒಟ್ಟು ಸುಂಕದ ಪ್ರಮಾಣ ಶೇ. 50ಕ್ಕೆ ಏರಲಿದೆ.
“ಭಾರತವು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಮಾಸ್ಕೋಗೆ ಅಗತ್ಯವಿರುವ ಡಾಲರ್‌ಗಳನ್ನು ಒದಗಿಸುತ್ತಿದೆ. ರಷ್ಯಾ ಮತ್ತು ಚೀನಾದೊಂದಿಗೆ ಭಾರತ ನಿಕಟ ಸಂಬಂಧ ಇಟ್ಟುಕೊಂಡಿದ್ದರೆ, ಅಮೆರಿಕದ ಅತ್ಯಾಧುನಿಕ ಮಿಲಿಟರಿ ಸಾಮರ್ಥ್ಯಗಳನ್ನು ಭಾರತಕ್ಕೆ ವರ್ಗಾಯಿಸುವುದು ಅಪಾಯಕಾರಿ ಎಂದು ನಾವು ಭಾವಿಸುತ್ತೇವೆ,” ಎಂದು ನವಾರೊ ಹೇಳಿದ್ದಾರೆ.