Monday, June 17, 2024

ಸತ್ಯ | ನ್ಯಾಯ |ಧರ್ಮ

ಸೈದ್ಧಾಂತಿಕ ವಿರೋದಿಗಳ ಕಾರ್ಯಕ್ರಮಕ್ಕೆ ಹೋಗಬೇಡಿ: ಸಿದ್ದರಾಮಯ್ಯ ಅಭಿಮಾನಿಗಳ ಅಭಿಯಾನ

ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಕರಾಗಿ ಹೋಗುತ್ತಿರುವ ಬಗ್ಗೆ ಸಿದ್ದರಾಮಯ್ಯ ಅಭಿಮಾನಿಗಳು ಅಪಸ್ವರ ಎತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಿದ್ದರಾಮಯ್ಯನವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗದಿರುವಂತೆ ಅಭಿಯಾನಕ್ಕೆ ಮುಂದಾಗಿದ್ದಾರೆ.

ಜುಲೈ 22, 2023 ರಂದು ವಿಶ್ವವಾಣಿ ಪುಸ್ತಕ ಪ್ರಕಾಶನದ ಅಡಿಯಲ್ಲಿ 6 ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮ ನಿಗದಿಯಾಗಿದೆ. ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಸಭಾಭವನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪತ್ರಕರ್ತ ವಿಶ್ವೇಶ್ವರ ಭಟ್ ಆಹ್ವಾನಿಸಿದ್ದಾರೆ. ಇದರ ಪತ್ರಿಕೆ ವಿಶ್ವೇಶ್ವರ ಭಟ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡ ಬೆನ್ನಲ್ಲೇ ಈ ಬಗ್ಗೆ ವಿರೋಧ ಕೇಳಿ ಬಂದಿದೆ.

ಮೂಲದಿಂದ ಸಿದ್ದರಾಮಯ್ಯ ತಾನೊಬ್ಬ ಜಾತ್ಯತೀತವಾದಿ, ಸಮಾಜವಾದಿ ಎಂದೇ ಹೇಳಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸೈದ್ಧಾಂತಿಕವಾಗಿ ಕೋಮುವಾದಿ ಮನಸ್ಥಿತಿ ಹೊಂದಿರುವ, ತನ್ನ ವೃತ್ತಿ ಜೀವನದುದ್ದಕ್ಕೂ, ಸಮಾಜವಾದಿಗಳು ಹಾಗೂ ಜಾತ್ಯತೀತರ ತೆಗಳುತ್ತಲೇ ಬಂದಂತಹ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕರೆದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೋಗಿದ್ದೇ ಆದರೆ ಅದು ಸಮಾಜಕ್ಕೆ ಬೇರೆಯದೇ ಸಂದೇಶ ಕೊಟ್ಟಂತಾಗುತ್ತದೆ ಎನ್ನುವ ಮೂಲಕ ಅಭಿಮಾನಿಗಳು ಸಿದ್ದರಾಮಯ್ಯನವರನ್ನು ವಿಶ್ವೇಶ್ವರ ಭಟ್ಟರ ಕಾರ್ಯಕ್ರಮಕ್ಕೆ ಹೋಗದಿರುವಂತೆ ಒತ್ತಡ ಹಾಕುತ್ತಿದ್ದಾರೆ.

ಸೈದ್ಧಾಂತಿಕವಾಗಿ ವಿಶ್ವೇಶ್ವರ ಭಟ್ಟರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದ ವಿಚಾರ ಏನಿಲ್ಲ. ಈ ಹಿಂದೆ ಸಿದ್ದರಾಮಯ್ಯರ ಆಪ್ತ ಬಳಗದವರಾಗಿದ್ದರು ಗೌರಿ ಲಂಕೇಶ್ ಹತ್ಯೆಯಾದಾಗಲೂ, ಗೌರಿ ಲಂಕೇಶ್ ಬಗ್ಗೆಯೇ ತುಚ್ಛವಾಗಿ ಬರೆದಿದ್ದರು. ವಿಶ್ವವಾಣಿ ಪತ್ರಿಕೆಯ ತಮ್ಮ ಕಾಲಂಗಳಲ್ಲಿ ಸಹ ವಿಶ್ವೇಶ್ವರ ಭಟ್ಟರು ಕಾಂಗ್ರೆಸ್ಸಿಗರು, ಜಾತ್ಯತೀತರು, ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಬಲಪಂಥೀಯ ವಾದದ ಹೊರತಾಗಿರುವ ಎಲ್ಲರ ಬಗ್ಗೆಯೂ ಕೆಟ್ಟದಾಗಿ ಬಿಂಬಿಸುವಂತೆಯೇ ಬರೆದುಕೊಂಡು ಬಂದಿದ್ದಾರೆ.

ಆಡಳಿತಾತ್ಮಕ ಏನೇ ಟೀಕೆಗಳು ಇದ್ದರೂ ಪತ್ರಿಕಾ ಸ್ವಾತಂತ್ರ್ಯದ ಅಡಿಯಲ್ಲಿ ಬರೆಯುವುದು ತಪ್ಪೇ ಅಲ್ಲ. ಆದರೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ತಮ್ಮ ವೈಯಕ್ತಿಕ ವಿರೋಧಗಳನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುವುದು, ಅವಮಾನಕರವಾಗಿ ಬರೆಯುವುದು ವಿಶ್ವೇಶ್ವರ ಭಟ್ಟರು ಹಿಂದಿನಿಂದಲೂ ಬಂದ ದಾರಿ. ಇಂತಹ ವ್ಯಕ್ತಿಗಳು ಬರೆದ ಪುಸ್ತಕ ಇಂತಹ ಒಳ್ಳೆಯ ವಿಚಾರಗಳು ಇರಬಹುದು ಎಂಬುದು ಸಿದ್ದರಾಮಯ್ಯ ಅಭಿಮಾನಿಗಳ ಕರೆಯಾಗಿದೆ

“ನೆಹರೂ ಅವರು ಸ್ವಿಟ್ಜರ್‌ಲ್ಯಾಂಡ್‌ನಿಂದ ಭಾರತಕ್ಕೆ ಬರುವಾಗ ರೋಮ್ ಏರ್‌ಪೋರ್ಟ್‌ನಲ್ಲಿ ಇಳಿದು ಪ್ರಯಾಣ ಮುಂದುವರಿಸಬೇಕಾಗಿತ್ತು. ಆ ಸಂದರ್ಭದಲ್ಲಿ ಇಟಲಿಯ ಫ್ಯಾಸಿಸ್ಟ್ ಮುಸಲೋನಿ ಭೇಟಿಯಾಗಲು ಬಯಸಿದರು. ನೆಹರೂ ಅವರು ಒಪ್ಪಲಿಲ್ಲ. ಬರೀ ಕೈ ಕುಲುಕುಗಳು ಬರುತ್ತವೆ ಎಂದು ಹೇಳಿ ಕಳುಹಿಸಿದರು. ನೆಹರೂ ಅದಕ್ಕೂ ಒಪ್ಪಲಿಲ್ಲ. ಅವರಿಗೆ ಇತ್ತು” ಎಂದು ಚಿಂತಕ ರಮ್ಜಾನ್ ದರ್ಗಾ ಅವರು ಪುಸ್ತಕ ಬಿಡುಗಡೆಯ ವಿಚಾರವನ್ನೂ ಪ್ರಸ್ತಾಪಿಸಿ ಮಾರ್ಮಿಕವಾಗಿ ತಮ್ಮ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಚಿಂತಕರು, ವ್ಯಂಗ್ಯಚಿತ್ರಕಾರರೂ ಆದ ದಿನೇಶ್ ಕುಕ್ಕುಜಡ್ಕರವರು, “ಸಿದ್ಧರಾಮಯ್ಯನವರೇ, ಗೆದ್ದ ಮೇಲೆ ಊರಾಳುಗಳ ಹಂಗ್ಯಾಕೆ ಅನ್ನುವ ಅಟಿಟ್ಯೂಡ್ ಬಿಟ್ಟುಬಿಡಿ. ಇಂಥ ಅಪವಿತ್ರ ಒಳವ್ಯವಹಾರಗಳು ನಿಮ್ಮನ್ನು ಗೆಲ್ಲಿಸಿಲ್ಲ. ತೀರಾ ತೀರಾ ನಗಣ್ಯವೆನಿಸುವ ಪುಟ್ಟ ಪುಟ್ಟ ಫೇಸ್‌ಬುಕ್‌ ಅಳಿಲುಗಳ ಪ್ರಯತ್ನಗಳು ಕೂಡಾ ನಿಮ್ಮ ಗೆಲುವಿನ ಹಿಂದಿದೆ ಅನ್ನುವುದನ್ನು ಮರೆಯಬಾರದು. ನಿಮ್ಮ ಗೆಲುವಿನ ಕನಸು ಹೊತ್ತಿದ್ದ ಇದೇ ‘ಫೇಸ್‌ಬುಕ್‌ ಜಾಣ’ರೆಲ್ಲ ಈಗ ಕಾಲದ ಕಸದಬುಟ್ಟಿಯ ನಿಷ್ಪ್ರಯೋಜಕ ಸೊತ್ತುಗಳನ್ನಿಸಿಕೊಳ್ಳುವುದು ನಿಮಗೆ ಮುಂದೆ ದುಬಾರಿಯಾದೀತು. ನಿಮ್ಮ ಸುತ್ತಮುತ್ತಲಿನ ಕೊಂಬು ಕೋಡುಗಳ ಬುದ್ಧಿವಂತರ, ಬು.ಜೀ.ವೇಷದ ಪುಢಾರಿಗಳ ನೆತ್ತಿಗಣ್ಣುಗಳು ನಿಮ್ಮ ಪಾದದಡಿಯ ಹಸುರು ಹೂವುಗಳನ್ನು ಗಮನಿಸದಂತೆ ದಾರಿತಪ್ಪಿಸುತ್ತವೆ. ನಮಗೆ ನಿಮ್ಮ ಸರಕಾರದ ಯಾವ ಪ್ರಯೋಜನಗಳೂ ಬೇಡ. ವಿಚಾರಬದ್ಧತೆಯ ಸಾತ್ವಿಕ ಸಿಟ್ಟಿನ ಜೆಂಟಲ್ ಮ್ಯಾನ್ ನಡಿಗೆ ಬೇಕಷ್ಟೆ. ಅಷ್ಟೇ ಅಷ್ಟೇ!” ಎಂದು ತಮ್ಮ ಜಾಲತಾಣದಲ್ಲಿ ಬರೆದಿದ್ದಾರೆ.

ಸೈದ್ಧಾಂತಿಕವಾಗಿ ಬದ್ಧತೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುವ ನನ್ನಂಥವರಿಗೆ ಬಹಳ ನೋವನ್ನು ಕೊಟ್ಟಂತಹ ಸಂಗತಿ ಇದು. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಅತ್ಯಂತ ಭರವಸೆಯನ್ನು ಇಟ್ಟ ನಾವು ಇವತ್ತು ತುಂಬಾ ನೊಂದು ಕೊಂಡಿದ್ದೇವೆ. ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದ ರಣದೀಪ್ ಸಿಂಗ್ ಸುರ್ಜಿವಾಲ ವಿಶ್ವೇಶ್ವರ ಭಟ್ಟರನ್ನು ಮನೆಯಲ್ಲಿ ಭೇಟಿ ಮಾಡಿದ ಒಂದೆರಡು ದಿನಗಳಲ್ಲಿಯೇ ರಾಹುಲ್ ಗಾಂಧಿಯ ಬಗ್ಗೆ ಹೀನಾಯವಾಗಿ ಬರೆದ ಇವ್ರು ಸಮಯ ಸಿಕ್ಕಾಗಲೆಲ್ಲ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬದ್ಧತೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ಬಗ್ಗೆ ಕೇವಲವಾಗಿ ತನ್ನ ಬರಹದಲ್ಲಿ ದಾಖಲಿಸುತ್ತಾರೆ. ಇಂತಹ ವ್ಯಕ್ತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗುವಲ್ಲಿ ಮುಖ್ಯಮಂತ್ರಿಗಳು ಆಲೋಚನೆಯನ್ನು ಮಾಡಬೇಕಿತ್ತು ಅಂತ ನನ್ನ ಭಾವನೆ.” ಎಂದು ಚಿಂತಕರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಬರೆದಿದ್ದಾರೆ.

ಅರಿವು ಇದ್ದೋ ಇಲ್ಲದೆಯೋ ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿದ್ದಾರೆ. ಆದರೆ ಅಭಿಮಾನಿಗಳ ಒತ್ತಾಯಕ್ಕಾದರೂ ವಸ್ತುಸ್ಥಿತಿ ಅರಿತು ಇದರಿಂದ ಹಿಂದೆ ಸರಿಯುವುದು ಒಳಿತು ಎಂದು ಸಿದ್ದರಾಮಯ್ಯ ಅಭಿಮಾನಿಗಳು, ಸಮಾನ ಮನಸ್ಕರು ಸಿದ್ದರಾಮಯ್ಯನವರಿಗೆ ಜಾಲತಾಣಗಳ ಮೂಲಕ ಒತ್ತಡ ಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು