Home ರಾಜ್ಯ ಸಮೀಕ್ಷೆ ಬಹಿಷ್ಕರಿಸುವ ಬಿಜೆಪಿ ಮಾತಿಗೆ ಕಿವಿಗೊಡಬೇಡಿ: ಸಿಎಂ ಸಿದ್ದರಾಮಯ್ಯ ಮನವಿ

ಸಮೀಕ್ಷೆ ಬಹಿಷ್ಕರಿಸುವ ಬಿಜೆಪಿ ಮಾತಿಗೆ ಕಿವಿಗೊಡಬೇಡಿ: ಸಿಎಂ ಸಿದ್ದರಾಮಯ್ಯ ಮನವಿ

0

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಮೀಕ್ಷೆಯು ಯಾವುದೇ ಒಂದು ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಯಾರ ವಿರುದ್ಧವೂ ಅಲ್ಲ, ಬದಲಿಗೆ ಎಲ್ಲರ ಪರವಾಗಿರುವ ಸಮೀಕ್ಷೆ ಎಂದು ಅವರು ತಿಳಿಸಿದ್ದಾರೆ.

ಈ ಸಮೀಕ್ಷೆಯ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವುದು ಎಂದು ಸಿಎಂ ವಿವರಿಸಿದ್ದಾರೆ.

ಜಾತಿ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಬಿಜೆಪಿ ನಾಯಕರು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಾಧ್ಯಮ ಪ್ರಕಟಣೆ ನೀಡಿದ್ದಾರೆ. “ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಎಲ್ಲವೂ ಯಥಾಸ್ಥಿತಿಯಲ್ಲಿಯೇ ಇರಬೇಕು. ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದವರು ಹಿಂದೆಯೇ ಉಳಿಯಬೇಕು… ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ,” ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಿಜೆಪಿಯ ನಾಯಕರ ಅಂತರಂಗದಲ್ಲಿ ಇದೇ ಮನುವಾದಿ ಮನಸ್ಥಿತಿ ಅಡಗಿದೆ. ನಮ್ಮ ಸರ್ಕಾರ ಸಮೀಕ್ಷೆ ಪ್ರಾರಂಭಿಸುತ್ತಿದ್ದಂತೆಯೇ “ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌” ಎಂದು ಕೂಗುತ್ತಿರುವವರ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರು ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆ ನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾಕ ಸಮುದಾಯಗಳ ಸ್ಥಿತಿ ಮಾತ್ರವಲ್ಲದೆ, ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ತಿಳಿದುಬರುತ್ತದೆ. ಈ ವಾಸ್ತವಸ್ಥಿತಿ ಹೊರಬೀಳುವುದು ಬಿಜೆಪಿಯವರಿಗೆ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಅವರದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಮೀಕ್ಷೆ ನಡೆಸಿದೆ. ತೆಲಂಗಾಣದಲ್ಲಿಯೂ ಇದೇ ರೀತಿ ನಡೆದಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ. “ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ,” ಎಂದು ಸಿಎಂ ಸವಾಲೆಸೆದಿದ್ದಾರೆ.

ಅಂತಿಮವಾಗಿ, ಬಿಜೆಪಿ ನಾಯಕರ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅವರ ರಾಜಕೀಯ ಪ್ರೇರಿತ ಹೇಳಿಕೆಗಳನ್ನು “ಮನೆಯ ಕಸದ ಬುಟ್ಟಿಗೆ ಎಸೆದು” ಎಲ್ಲರೂ ಈಗ ನಡೆಯುತ್ತಿರುವ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ಈ ಮೂಲಕ ನಾವೆಲ್ಲರೂ ಸೇರಿ ಸಮ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡೋಣ ಎಂದು ಅವರು ಕರೆ ನೀಡಿದ್ದಾರೆ.

You cannot copy content of this page

Exit mobile version