ಬೆಂಗಳೂರು: ಮನೆಯಲ್ಲಿ ಕೆಲಸ ಮಾಡುವ ಮಧ್ಯವಯಸ್ಕ ಮಹಿಳೆಯ ಮೇಲೆ ಪುನರಾವರ್ತಿತವಾಗಿ ಅತ್ಯಾಚಾರವೆಸಗಿದ ಕೃತ್ಯದಲ್ಲಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿದ ಜೀವಾವಧಿ ಕಠಿಣ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್‌ಗೆ ಅಪೀಲ್ (Criminal Appeal) ದಾಖಲಿಸಿದ್ದಾರೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ನೀಡಿದ ತೀರ್ಪು ತಪ್ಪು ಆದೇಶ, ಕಾನೂನುಬಾಹಿರ ಹಾಗೂ ಪ್ರಕರಣ ದಾಖಲೆಗಳಲ್ಲಿನ ನಿಜಾಂಶಗಳಿಗೆ ವಿರುದ್ಧವಾದ ತೀರ್ಮಾನಗಳನ್ನು ಒಳಗೊಂಡಿದೆ ಎಂದು ಪ್ರಜ್ವಲ್ ತಮ್ಮ ಮೇಲ್ಮನವಿಯಲ್ಲಿ ದೂರಿದ್ದಾರೆ.
ಹೊಳೆನರಸೀಪುರದ ಗನ್ನಿಗಢ ಮತ್ತು ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ಮನೆಗೆಲಸದಾಕೆಯ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ವಿಶೇಷ ನ್ಯಾಯಾಲಯವು ತೀರ್ಮಾನಿಸಿ, ಆಗಸ್ಟ್ 2 ರಂದು ಜೀವನಪರ್ಯಂತ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ವಜಾಗೊಳಿಸುವಂತೆ ಕೋರಿ ಪ್ರಜ್ವಲ್ ಅವರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದು, ಸಿಐಡಿಯ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಪ್ರತಿವಾದಿಯನ್ನಾಗಿಸಿದ್ದಾರೆ. ಈ ಮೇಲ್ಮನವಿ ಇನ್ನೂ ವಿಚಾರಣೆಗೆ ಬಾಕಿಯಿದೆ.
ರಾಜಕೀಯ ಕುತಂತ್ರದ ಆರೋಪ ಮತ್ತು ಸಾಕ್ಷ್ಯಗಳ ಪ್ರಶ್ನೆ
ರಾಜಕೀಯ ದುರುದ್ದೇಶದಿಂದ ಸಂತ್ರಸ್ತ ಮಹಿಳೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿ ತಮ್ಮ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗಿದೆ ಎಂದು ಪ್ರಜ್ವಲ್ ವಾದಿಸಿದ್ದಾರೆ. ಸಂತ್ರಸ್ತೆಯು 2023ರಲ್ಲಿ ತಮ್ಮ ಫಾರ್ಮ್ ಹೌಸ್‌ನ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದರು. ಒಂದು ವೇಳೆ ನಾನು ಅತ್ಯಾಚಾರ ಎಸಗಿದ್ದರೆ, ಆಕೆ ಏಕೆ ಸಮಾರಂಭಕ್ಕೆ ಬರುತ್ತಿದ್ದರು ಎಂದು ಪ್ರಜ್ವಲ್ ಮೇಲ್ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಪೊಲೀಸರು ಮಹಿಳೆಯಿಂದ ಮೂರು ವರ್ಷಗಳ ವಿಳಂಬದ ನಂತರ ದೂರನ್ನು ಸ್ವೀಕರಿಸಿದ್ದಾರೆ. ಜೊತೆಗೆ ಗಾಢ ಕಾರಣಗಳಿಲ್ಲದ ಸಾಕ್ಷ್ಯಗಳನ್ನು ನ್ಯಾಯಾಲಯವು ಪರಿಗಣಿಸಿದೆ ಎಂದು ಪ್ರಜ್ವಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಟೋರ್ ರೂಮಿನಲ್ಲಿ ದೊರೆತ ಬಟ್ಟೆ ಮತ್ತು ಕೂದಲಿದ್ದ ಬ್ಯಾಗ್ ಅನ್ನು ಮಹಿಳೆ ಗುರುತಿಸಿಲ್ಲ. ಬ್ಯಾಟರಿ ಮತ್ತು ಬಣ್ಣಗಳಿದ್ದ ರೂಮಿನಲ್ಲಿ ಮಹಿಳೆಯ ಉಡುಪು ಸಿಕ್ಕಿತು ಎಂದು ಹೇಳಲಾಗಿದೆ. ಬಿಗಿಯಾಗಿ ಬೀಗ ಹಾಕಿದ್ದ ಕೋಣೆಯಲ್ಲಿ ವೀರ್ಯಾಣು ಲೇಪಿತ ಬಟ್ಟೆ ಸಿಗಲು ಸಾಧ್ಯವೇ ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಕಾನೂನು ಲೋಪ ಮತ್ತು ತೀರ್ಪಿನ ಪ್ರಭಾವ
ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ. ಇದು ಅಪರಾಧಿಕ ನ್ಯಾಯಶಾಸ್ತ್ರದ ಮೂಲಭೂತ ತತ್ವಗಳಿಗೆ ಅಪಚಾರ ಎಂದು ಅವರು ವಾದಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಛಾಯಾಚಿತ್ರಗಳು ಮತ್ತು ವೀಡಿಯೊಗಳಿಂದ ಪ್ರಭಾವಿತರಾಗಿ ತಮ್ಮ ವಿರುದ್ಧ ಈ ತೀರ್ಪು ಬರೆಯಲಾಗಿದೆ. ಅತ್ಯಾಚಾರದ ವಿಡಿಯೋ ಇತ್ತು ಎಂದು ಆರೋಪಿಸಲಾದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಲ್ಲೂ ಸಾಕಷ್ಟು ವ್ಯತಿರಿಕ್ತ ಅಂಶಗಳಿವೆ. ಆದ್ದರಿಂದ, ತಮಗೆ ವಿಧಿಸಲಾಗಿರುವ ಶಿಕ್ಷೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಪ್ರಜ್ವಲ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.