ವಿವಾದಕ್ಕೆ ಕಾರಣವಾಗಿದ್ದ ಐಎಎಸ್ ಶ್ರೇಣಿಯ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಯುಪಿಎಸ್‌ಸಿ ನಿರ್ದೇಶಕರಿಗೆ ಪತ್ರ ಬರೆದಿದೆ.
ಇದರೊಂದಿಗೆ ಈ ವಿಷಯದಲ್ಲಿ ಕೇಂದ್ರ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಸೇರಿದಂತೆ ಹಲವು ವಿಪಕ್ಷಗಳ ನೇತಾರರು ಈ ನಿರ್ಧಾರದ ಕುರಿತು ಭಿನ್ನಾಭಿಪ್ರಾಯ ತೋರಿಸಿದ್ದರು. ಜೊತೆಗೆ ಎನ್‌ಡಿಎ ಕೂಟದ ನಾಯಕರಾದ ಚಿರಾಗ್ ಪಾಸ್ವಾನ್ ಹಾಗೂ ನಿತೇಶ ಕುಮಾರ್ ಸಹ ನೇರ ನೇಮಕಾತಿ ಕುರಿತು ವಿರೋಧ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಲ್ಯಾಟರಲ್ ಎಂಟ್ರಿಯ ಮೂಲಕ ಬಿಜೆಪಿ ಮೀಸಲಾತಿಯನ್ನು ವಿರೂಪಗೊಳಿಸಲು ನೋಡುತ್ತಿದೆ ಎಂದು ಆರೋಪಿಸಿದ್ದರು. ಇದರೊಂದಿಗೆ ಕೇಂದ್ರವು RSS ಹಿನ್ನೆಲೆಯ ವ್ಯಕ್ತಿಗಳನ್ನು ಆಯಕಟ್ಟಿನ ಜಾಗೆಗಳಲ್ಲಿ ಕೂರಿಸಲು ಈ ತಂತ್ರ ನಡೆಸುತ್ತಿದೆ ಎನ್ನುವ ಕೂಗೂ ಕೇಳಿಬಂದಿತ್ತು.
ಈ ನಡುವೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಉಸ್ತುವಾರಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಂಗಳವಾರ ಕೇಂದ್ರ ಲೋಕಸೇವಾ ಆಯೋಗದ (UPSC) ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಪತ್ರ ಬರೆದು, 45 ತಜ್ಞರ ಲ್ಯಾಟರಲ್ ಎಂಟ್ರಿ ಕೋರಿ ನೀಡಲಾಗಿದ್ದ ಜಾಹೀರಾತು ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ.