ಫಾರಿನ್ ಟೂರು, ಶಂಕು ಸ್ಥಾಪನೆ, ಉದ್ಘಾಟನೆ, ಚುನಾವಣೆ ಪ್ರಚಾರ, ರೋಡ್ ಶೋ ಇತ್ಯಾದಿ ದೇಶೋದ್ಧಾರದ ಕೆಲಸಗಳ ನಡುವೆ, ಸಾಮ್ರಾಟ್ ನಮೋ ಡಿಗ್ರಿ ಸರ್ಟಿಫಿಕೇಟ್ ಬಗ್ಗೆ ವಿಡಂಬನಾತ್ಮಕ ಬರಹ.. ಚಂದ್ರಪ್ರಭ ಕಠಾರಿ ಅವರ ‘ಕಠಾರಿ ಅಂಚು’ನಲ್ಲಿ
ಫಾರಿನ್ ಟೂರು, ಶಂಕು ಸ್ಥಾಪನೆ, ಉದ್ಘಾಟನೆ, ಚುನಾವಣೆ ಪ್ರಚಾರ, ರೋಡ್ ಶೋ ಇತ್ಯಾದಿ ದೇಶೋದ್ಧಾರದ ಯಾವುದೇ ಕೆಲಸಗಳು ಇಲ್ಲದಿದ್ದರಿಂದ, ಆ ದಿನ ಸಾಮ್ರಾಟ ನಮೋ ಸ್ವಲ್ಪ ನಿರಾಳವಾಗಿದ್ದ. ಆದರೆ, ದೇಶದ ಪ್ರಗತಿ ಬಗ್ಗೆ ಚಿಂತನ ಮಂಥನ ನಿರಂತರ ಸಾಗಿತ್ತು.
ಬೆಳಿಗ್ಗೆ ಎದ್ದಾಗಿಂದ ಅರಮನೆ ಕಚೇರಿಯಲ್ಲಿನ ಮಾಯಾಕನ್ನಡಿಯ ಮುಂದೆ ಕುಳಿತು, ತನ್ನ ಜನಪರ (ಸನಾತನ ಧರ್ಮ) ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯುತ್ತಲಿದ್ದ. ತೊಡೆಕೂಸು ಮಾಧ್ಯಮಗಳು, ಕೇಸರಿ ಐಟಿ ಸೆಲ್ ಪ್ರಾಪಗಂಡ ಆರ್ಮಿ, ಸಾಮಾಜಿಕ ಜಾಲತಾಣಗಳಲ್ಲಿನ ಟುರುಪೀಸ್ ಟ್ರೋಲ್ ಕೂಲಿಗಳು – ದೇಶದಲ್ಲಿನ ಆಗುಹೋಗುಗಳ ಬಗ್ಗೆ ಪ್ರಶ್ನಿಸುತ್ತಿದ್ದವರನ್ನು (ಹರಕು ಬಾಯಿಯಿಂದ) ಉಸಿರೆತ್ತದಂತೆ ಮಾಡುತ್ತಿದ್ದ ಕ್ಷಣಕ್ಷಣದ ಕ್ರಿಯೆ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದ. ಜಗತ್ತಿನಾದ್ಯಂತ ಹೆಚ್ಚಿದ ತನ್ನ ಹಿರಿಮೆಗರಿಮೆಗಳ ಸುದ್ದಿ, ಭಕ್ತರ ಭೋಪರಾಕ್ ಗಳು ಅವನನ್ನು ಆನಂದದಲ್ಲಿ ತೇಲಾಡಿಸುತ್ತಿತ್ತು.
ಮಧ್ಯರಾತ್ರಿ ಹೊತ್ತಿಗೆ, ದಿನದ ಹದಿನೆಂಟು ಗಂಟೆಗಳ ಕೆಲಸ ಮುಗಿಯಲು ಇನ್ನು ಅರ್ಧತಾಸು ಬಾಕಿ ಇದ್ದು, ತೂಕಡಿಕೆ ಬಂದು ಮಲಗಿದರೆ ಸಾಕು ಅನಿಸುತ್ತಿತ್ತು. ಅಷ್ಟೊತ್ತಿಗೆ ಅದೇನಾಯಿತೊ, ದೇಶದ ಎಲ್ಲಾ ಕಂಪ್ಯೂಟರ್ ಗಳನ್ನು ಒಟ್ಟಿಗೆ ತೋರುತ್ತಿದ್ದ ಮಾಯಾಕನ್ನಡಿಯಲ್ಲಿ ಅಡ್ಡಾಡ್ಡ ಉದ್ದುದ್ದ ಗೆರೆಗಳು ಮೂಡ ತೊಡಗಿದವು. ಎಷ್ಟು ಎಸ್ಕೇಪ್ ಕೀ ಒತ್ತಿದರೂ ಪರದೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಏನಾಗಿರಬಹುದೆಂದು ತಿಳಿಯದೆ ನಮೋ ಆತಂಕಕ್ಕೊಳಗಾದ. ಕೂಡುತ್ತಿದ್ದ ಕಣ್ರೆಪ್ಪೆಗಳಲ್ಲಿದ್ದ ನಿದ್ದೆ ಹಾರಿ ಹೋಯಿತು.
“ಯಾರಲ್ಲಿ?”
ಟೇಬಲ್ಲಿನ ಮೇಲಿದ್ದ ಜಾಗಟೆಯನ್ನು ನಮೋ ಬಾರಿಸುವುದೇ ತಡ, “ ಸಾಮ್ರಾಟರಿಗೆ ಜಯವಾಗಲಿ…. ಅಪ್ಪಣೆಯಾಗಬೇಕು” ಎಂದು ಡೊಗ್ಗು ಸಲಾಮ್ ಮಾಡುತ್ತ ಪರ್ಸನಲ್ ಸೆಕ್ರೆಟರಿ ಬಂದ.
“ಈ ದರಿದ್ರ ಮಾಯಾಕನ್ನಡಿಗೆ ಏನಾಗಿದೆ ಸ್ವಲ್ಪ ನೋಡಯ್ಯ!”
“ಒಮ್ಮೆ ರೀಸ್ಟರ್ಟ್ ಮಾಡಿ ಮಹಾಪ್ರಭುಗಳೇ…ಸರಿಹೋಗುತ್ತೆ”
“ನೀನೇನು ದನ ಕಾಯೋಕ ಇರೋದು… ರೀಸ್ಟಾರ್ಟೊ…ಕಿಕ್ ಸ್ಟಾರ್ಟೊ… ನೀನೇ ಬೇಗ ಮಾಡು”
ಮಾಯಾಕನ್ನಡಿಯನ್ನು ಒಮ್ಮೆ ಸ್ಪರ್ಶಿಸಿ ಮೂಷಕವನ್ನು ಅತ್ತಿತ್ತ ಪ. ಸೆ. ಆಡಿಸಿದ. ಇದ್ದಕ್ಕಿದಂತೆ ಮಾಯಾಕನ್ನಡಿಯಲ್ಲಿ ನೂರಾರು ಪಟಗಳು ಒಂದರ ಮೇಲೊಂದರಂತೆ ಮೂಡ ತೊಡಗಿತು. ಗಾಬರಿಗೊಂಡ ಪ.ಸೆ. ಮತ್ತಷ್ಟು ಮೂಷಕವನ್ನು ಆಡಿಸಿದರೆ ಪಟಗಳು ಬೀಳುವುದು ಮತ್ತಷ್ಟು ಹೆಚ್ಚಾಯಿತು. ಒಂದೇ ತೆರನಾದ ಪಟಗಳನ್ನು ಜೂಮ್ ಮಾಡಿ ನೋಡಿದ ಪ ಸೆ ಯ ಮುಖದಲ್ಲಿ ಬೆವರು ಹನಿಗಳು ಮೂಡಿ ಬಾಯಲ್ಲಿ ಪಸೆ ಆರಿತು.
“ಮಾಯಾಕನ್ನಡಿ ಹೀಗೇಕೆ ಆಡುತ್ತಿದೆ? ಏನದು ಪಟಗಳು? ಯಾಕೆ ಸಾವಿರಾರು ಬಂದು ಬೀಳುತ್ತಿವೆ? ಅದಿರಲಿ…ನೀನೇಕೆ ಭಯಭೀತನಾಗಿದ್ದೀಯ?” ಸಹನೆಗೆಟ್ಟ ಸಾಮ್ರಾಟ ಒಂದೇ ಸಮನೆ ಕೂಗಾಡ ತೊಡಗಿದ.
“ಮಹಾಪ್ರಭುಗಳೇ…ಅದು…ಅದು…ನಿಮ್ಮ ಡಿಗ್ರಿ ಸರ್ಟಿಫಿಕೇಟು! ದೇಶದೆಲ್ಲೆಡೆ ವೈರಲ್ ಆಗಿ ಪ್ರಜೆಗಳೆಲ್ಲರೂ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ” ಎಂದು ಪ.ಸೆ. ತಡವರಿಸಿದ.
ಡಿಗ್ರಿ ಸರ್ಟಿಫಿಕೇಟು ಅಂದದ್ದೇ, ಸಾಮ್ರಾಟನ ಮುಖವರಳಿತು. “ಓಹ್…ಹೌದಾ! ಇದರಲ್ಲಿ ಆತಂಕ ಪಡುವುದೇನಿದೆ? ಪ್ರಜೆಗಳೆಲ್ಲರೂ ಅಭಿಮಾನದಿಂದ ನಮ್ಮ ಡಿಗ್ರಿ ಸರ್ಟಿಫಿಕೇಟನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದು ಸಂತೋಷದ ಸಮಾಚಾರ. ವಾಹ್…ನಮೋ…ವಾಹ್” ಎಂದು ಖುಷಿಯಿಂದ ತನ್ನ ಬೆನ್ನನ್ನು ತಾನೇ ಚಪ್ಪರಿಸಿ, ಚಪ್ಪಾಳೆ ತಟ್ಟಿದ.
“ಮಹಾಸ್ವಾಮಿಗಳೇ…ಅದು ಆಗಲ್ಲ…” ಎಂದು ಏನೋ ಹೇಳಲು ಹೊರಟ ಪ.ಸೆ. ಯ ಮಾತನ್ನು ಸಾಮ್ರಾಟ ತುಂಡರಿಸಿದ. “ಇಗೋ…ನಿನಗಿದು ಭಕ್ಷಿಸು” ಎಂದು ಕೊರಳಲ್ಲಿದ್ದ ಕಂಠೀಹಾರವನ್ನು ಅವನತ್ತ ಎಸೆದು “ನೀನಿನ್ನು ಹೊರಡು. ಈ ಸಮಯ ಆನಂದಮಯ…ನಮೋ ಬಾಳಿಗೆ ಶುಭೋದಯ” ಎಂದು ಹಾಡಲು ಆರಂಭಿಸಿದಾಗ ಪ.ಸೆ. ಕಂಠೀಹಾರವನ್ನು ಜೇಬಿಗೆ ತುರುಕಿ, ಹಣೆ ಚಚ್ಚಿಕೊಳ್ಳುತ್ತ ಅಲ್ಲಿಂದ ಕಾಲ್ತೆಗೆದ.
ಯಾರೋ ದಡಬಡ ಬಾಗಿಲು ಬಡಿಯುತ್ತಿದ್ದ ಶಬ್ದಕ್ಕೆ ರಾತ್ರಿ ಆನಂದೋತ್ಸಾಹದಲ್ಲಿ ತಡವಾಗಿ ಮಲಗಿದ್ದ ಸಾಮ್ರಾಟನಿಗೆ ಎಚ್ಚರವಾಯಿತು. “ಯಾವನೋ ಅವ್ನು ಬಡ್ಡಿಮಗ ಬಾಗಿಲು ಮುರಿಯುವ ಹಾಗೆ ಬಡೀತಿರೋದು” ಎಂದು ಕದ ತೆರೆದರೆ, ಹೊರಗೆ ಅಪರಿಮಿತ ಕುತಂತ್ರಿ ಮಂತ್ರಿಯೊಂದಿಗೆ ಪ.ಸೆ. ಮತ್ತು ಒಂದಿಬ್ಬರು ಮಾ.ಕೃ.ಕುಟೀರದ ಚಡ್ಡಿಧಾರಿ ವಟುಗಳು ನಿಂತಿದ್ದರು. ಸಿಟ್ಟಾಗಿದ್ದ ಅ.ಕು.ಮಂತ್ರಿಯ ಮೂಗಿನ ಹೊಳ್ಳೆ, ಕಿವಿಗಳಿಂದ ಹೊಗೆ ಬರುತ್ತಿದ್ದನ್ನು ಗಮನಿಸಿದ ನಮೋಗೆ ಏನೋ ಎಡವಟ್ಟಾಗಿದೆ ಅನಿಸಿತು. ತನ್ನ ಜೊತೆಗೆ ಉಳಿದವರು ಒಳ ಬರಲು ಯತ್ನಿಸಿದಾಗ ತಡೆದು “ಸಾಮ್ರಾಟರ ಜೊತೆ ನಾವು ದೇಶದ ಬಹುಮುಖ್ಯ ಸಮಸ್ಯೆಯ ಬಗ್ಗೆ ಚರ್ಚಿಸಬೇಕಿದೆ. ನೀವು ಹೊರಡಿ” ಎಂದು ಅ.ಕು. ಮಂತ್ರಿ ಅವರನ್ನು ಸಾಗ ಹಾಕಿದ.
ಬಾಗಿಲಿಗೆ ಅಗುಳಿ ಇಟ್ಟ ಅ.ಕು. ಮಂತ್ರಿ “ನಿನಗೆ ತಲೆ ಇದೆ. ಒಳಗೆ ಮೆದುಳು ಏನಾದರೂ ಇದೆಯಾ?” ಎಂದು ಸಾಮ್ರಾಟನ ಮೇಲೆ ಏಕಾಏಕಿ ಬಿದ್ದ. “ಏನಯ್ಯ ಆಯ್ತು? ಬೆಳಬೆಳಗ್ಗೆನೇ ಮೈಮೇಲೆ ಬೀಳ್ತಿದ್ದೀಯ?” ಎಂದು ಸಾಮ್ರಾಟ ನಮೋ ನಾಲಿಗೆಯಿಂದ ತುಟಿ ಸವರಿಕೊಂಡ.
“ಏನೆಲ್ಲಾ ವಿಚಿತ್ರ ಬಟ್ಟೆ ತೊಟ್ಟು ಫಾರಿನ್ ಟೂರ್ ಹೊಡ್ಕೊಂಡ್ ಮಜಾ ಮಾಡ್ತೀರೊ ನಿಂಗೆ ಗ್ರಾಜುಯೇಟ್ ಶೋಕಿ ಯಾಕಪ್ಪ ಬೇಕಿತ್ತು? ಈಗ ನೋಡು… ನಮೋ ಡಿಗ್ರಿ ಸರ್ಟಿಫಿಕೇಟ್ ಫೇಕು. ಅಸಲಿ ಇದ್ರೆ ತೋರಿಸಲಿ ಅಂತ ಯಾವನೋ ಕೇಸ್ ಹಾಕಿದ್ದಾನೆ. ಫೇಕ್ ಮಾಸ್ಟರ್ಸ್ ಡಿಗ್ರಿ…ಫೇಕ್ ಪಿಎಚ್ ಡಿ ಹೋಲ್ಡರ್ ಅಂತ ಆಡಿಕೊಂಡು ಜನ ಗೇಲಿ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಒರಿಜಿನಲ್ ಡಿಗ್ರಿ ಸರ್ಟಿಫಿಕೇಟ್ ಹಾಕಿ ‘ಹೆಬ್ಬೆಟ್ ಸಾಮ್ರಾಟ…ನಿನ್ನ ಡಿಗ್ರಿ ಸರ್ಟಿಫಿಕೇಟ್ ಇದ್ರೆ ತೋರಿಸು’ ಅನ್ನೋ ಪೋಸ್ಟ್ ಗಳು ವೈರಲ್ ಆಗಿದೆ. ಅದಕ್ಕೆ ಮಾ.ಕೃ.ಕುಟೀರದ ಪೂಜಾರಿ ಸಿಟ್ಟಾಗಿ ವಟುಗಳನ್ನು ಎನ್ ಕ್ವೈರಿ ಅಂತ ಕಳಿಸಿದ್ದಾನೆ”
“ಯಾವನೋ ಅವ್ನು ದೇಶದ್ರೋಹಿ…ಸಾಮ್ರಾಟನ ಡಿಗ್ರಿ ಸರ್ಟಿಫಿಕೇಟು ಕೇಳುವಷ್ಟು ಧೈರ್ಯ? ಅವನ ರುಂಡವನ್ನು ಚೆಂಡಾಡುವೆ…” ಎಂದು ನಮೋ ಸಿಟ್ಟಿನಿಂದ ಒರೆಯಲ್ಲಿದ್ದ ಕತ್ತಿಯನ್ನು ಎಳೆಯಲು ಹೋದರೆ ಅದು ಆಚೆ ಬರದೆ ತಿಣುಕಾಡುತ್ತಿರುವಾಗ…
“ಸಾಕು, ನಿಲ್ಸಯ್ಯ ನಿನ್ನ ಹಾರಾಟ! ನಾವು ನಿನ್ನನ್ನು ಸಾಮ್ರಾಟ ಅಂತ ಕರೆದಿರೋದು. ದೇಶದ ಕಾನೂನು ಅಲ್ಲ….ನೆನಪಿರಲಿ”
“ನಿನಗೂ ನೆನಪಿರಲಿ. ಹೌದು…ನಾನೇನೊ ಕುಟೀರದ ಗೌರವಕ್ಕೆ ಕುಂದು ಬರದೇ ಇರಲಿ ಎಂದು ಡಿಗ್ರಿ ಮಾತ್ರ ಕೇಳಿದ್ದೆ. ಆದರೆ, ಕುಟೀರದ ಪೂರ್ವನಿವಾಸಿ ಯೂನಿವರ್ಸಿಟಿ ಕುಲಪತಿಗೆ ಹೇಳಿ ಪಿಎಚ್ ಡಿ ಕೊಡಿಸಿದ್ದು ನೀನೇ ತಾನೇ?” ಎಂದ ನಮೋ, ಸನಾತನ ವಿದ್ಯುನ್ಮಾನ ಯಂತ್ರದ ಗುಂಡಿಗಳನ್ನು ಒತ್ತಿದ. ತಟ್ಟನೆ ಮಾಯಾಕನ್ನಡಿಯ ಬೃಹತ್ ಪರದೆಯಲ್ಲಿ, ಕಮಲೀ ಪಕ್ಷದಿಂದ ದೇಶಕ್ಕೆ ಪ್ರಧಾನಮಂತ್ರಿ ಉಮೇದುವಾರನಾಗಿ ನಮೋ ಆಯ್ಕೆಯಾಗಿದ್ದ ಸಂದರ್ಭದ, ದಶಕದ ಹಿಂದಿನ ಚಲಿಸುವ ಚಿತ್ರಗಳು ಮೂಡ ತೊಡಗಿತು.
ಭಾರೀ ಜನಸ್ತೋಮ ಜಯಕಾರ ಹಾಕುತ್ತ ಮೆರವಣಿಗೆ ಹೊರಟಿತ್ತು. ಉತ್ಸವ ಮೂರ್ತಿಯಾಗಿ ನಮೋ ಎಲ್ಲರೆಡೆಗೆ ಗಾಳಿಯಲ್ಲಿ ಎರಡು ಕೈ ಬೀಸುತ್ತಲ್ಲಿದ್ದ. ಮೆರವಣಿಗೆ ಚುನಾವಣಾ ಕಚೇರಿಯ ಗೇಟಿಗೆ ಬರುವಾಗ, ನಮೋ ಮತ್ತು ಅ.ಕು.ಮಂತ್ರಿಯಿದ್ದ ಕಾರನ್ನು ಮಾತ್ರ ಒಳಬಿಡಲಾಯಿತು.
ಕಚೇರಿಯ ಒಳಗಡೆ ನಾಮಪತ್ರವನ್ನು ನಮೋ ಪರಿಶೀಲಿಸುತ್ತಲಿದ್ದ. ತಟ್ಟನೆ ಅವನ ಮುಖ ಕಿವುಚಿದ ಹುಣಸೇ ಹಣ್ಣಾಯಿತು. ವಿದ್ಯಾರ್ಹತೆ ಕಾಲಮ್ಮಿನಲ್ಲಿ ʼಹೆಬ್ಬೆಟ್ಟುʼ ಎಂದು ಬರೆದಿತ್ತು.
“ಇದೇನು ಚಡ್ಡಿದೋಸ್ತ್…ಹೆಬ್ಬೆಟ್ಟು ಎಂದು ಬರೆದಿದ್ದೀಯ!”
“ಇನ್ನೇನು ಬರೀಬೇಕಿತ್ತು! ಹಾರ್ವಡ್ ಯೂನಿವರ್ಸಿಟಿಯಲ್ಲಿ ಓದೋದು ಹೆಚ್ಚುಗಾರಿಕೆಯಲ್ಲ. ಹೌದು…ನಾನು ಅನ್ ಪಡ್. ಆದರೆ, ಮಾಧವ ಕೃಪಾಕಟಾಕ್ಷ ಕುಟೀರದ ಹಾರ್ಡ್ ವರ್ಕ್ ಯೂನಿವರ್ಸಿಟಿಯಲ್ಲಿ ಓದಿರೋದು ಅಂತ ಮೀಡಿಯಾಗಳ ಮುಂದೆ ಪ್ರಚಾರ ಮಾಡಿದ್ದೀಯಲ್ಲ?”
“ಅಯ್ಯೋ…ಅದು ಹಳೇ ಮಾತು. ದೇಶವಾಳಿದ ರಾಜಕುಮಾರನ ಮಗಳು, ಮೊಮ್ಮಗ ಎಲ್ಲರೂ ಡಬ್ಬಲ್, ತ್ರಿಬ್ಬಲ್ ಡಿಗ್ರಿ ಹೋಲ್ಡರ್. ನಾನು ಹೆಬ್ಬೆಟ್ಟು ಅಂದ್ರೆ…ಕುಟೀರದ ಗೌರವಕ್ಕೆ ಏನಾಗಬೇಡ?”
“ಹು…ನೀನು ಹೇಳೋದು ಸರಿಯಿದೆ. ತಾಳು….ಹೇಗಿದ್ರು ನೀನು ಕುಟೀರದ ದ ಬೆಸ್ಟ್ ಆಕ್ಟರ್. ನಿನಗೆ ಹೊಂದುವಂಥ ಡಿಗ್ರಿ ಬರೆಯೋಣ” ಎಂದು ಅಪರಿಮಿತ ಕುತಂತ್ರಿ ಮಂತ್ರಿ ಇಂಕ್ ರಬ್ಬರಲ್ಲಿ ʼಹೆಬ್ಬೆಟ್ʼ ಎಂದು ಬರೆದಿದ್ದನ್ನು ಅಳಿಸಿ – Phd in Entire Entertainment Political Science ಎಂದು ತಿದ್ದುವುದು ಕಾಣಿಸಿತು.
ಮಾಯಾ ಪರದೆಯಲ್ಲಿ ಭೂತಕಾಲದ ದೃಶ್ಯಗಳನ್ನು ವೀಕ್ಷಿಸಿದ ನಮೋ, ಅ.ಕು.ಮಂತ್ರಿ – ವರ್ತಮಾನ ಕಾಲದಲ್ಲಿ ಹೊಸತಾಗಿ ಉದ್ಭವಿಸಿದ ಸಂದಿಗ್ಧತೆಯಿಂದ ಹೇಗೆ ಪಾರಾಗುವುದೆಂದು ಚಿಂತಿಸುತ್ತ ಬೆನ್ನಿಗೆ ಬೆನ್ನುಹಾಕಿ ಕೂತರು.
ಅಷ್ಟರಲ್ಲಿ ಬಾಗಿಲು ದೂಡಿ ಒಳಬಂದ ಪರ್ಸನಲ್ ಸೆಕ್ರೆಟರಿ “ಮಹಾಸ್ವಾಮಿಗಳು ಕ್ಷಮಿಸಬೇಕು. ಕುಟೀರದ ಪೂಜಾರಿ ಅವರಿಂದ ತುರ್ತುಕರೆ ಬಂದಿದೆ. ತುಂಬಾ ರಾಂಗ್ ಆಗಿದ್ದಾರೆ” ಎಂದ.
“ಏನ್ರೋ ನಿಮ್ಮ ಡಿಗ್ರಿ ಅವಾಂತರ! ಕುಟೀರದ ಮಿಥ್ಯನಿಷ್ಠೆ ಏನಿದ್ದರೂ ಸನಾತನಧರ್ಮ ಪುನರ್ ಪ್ರತಿಷ್ಠಾಪಿಸಲು ಮಾತ್ರ. ಡಿಗ್ರಿ ಅಂತ ಕ್ಷುಲ್ಲಕ ವಿಚಾರಗಳಿಗೆ ಬಳಸಿಕೊಂಡು ಕುಟೀರದ ಸತ್ಯನಿಷ್ಠೆಗೆ ಮಸಿ ಬಳೀತಿದ್ದೀರ…ಅಡ್ನಾಡಿಗಳ!” ಫೋನಿನಲ್ಲಿ ಪೂಜಾರಿಯ ಗರಮ್ ಮಾತುಗಳನ್ನು ಕೇಳಿದ ಅ.ಕು.ಮಂತ್ರಿಗೆ ಜ್ವರ ಬಂದ ಹಾಗಾಯಿತು.
“ಕೋಪ ಬೇಡ…ಪೂಜಾರಿಗಳೇ. ಏನೋ…ಉಪ್ಪು ತಿಂದಾಗಿದೆ. ಕ್ಷಮೆ ಇರಲಿ. ನೀವೇ ನೀರು ಕುಡಿಸಬೇಕು” ಭಯ ಪಡುತ್ತಲೇ ಅ.ಕು. ಮಂತ್ರಿ ಪಿಸುಗುಟ್ಟಿದ.
“ಆಗಲಿ…ಆಗಲಿ…ಕುಟೀರದ ಪೂರ್ವನಿವಾಸಿ ಜಡ್ಜ್ ಇರೋ ಬೆಂಚ್ ಗೆ ಅಪೀಲ್ ಮಾಡಿಕೊಳ್ಳಿ. ಕೇಸ್ ಡಿಸ್ ಮಿಸ್ ಮಾಡೋಕೆ ಹೇಳ್ತೀನಿ”
ಶೋಕಿಲಾಲನನ್ನು ಗದ್ದುಗೆ ಮೇಲೆ ಕೂರಿಸಿದ ತಪ್ಪಿಗೆ ಇಂತಹ ಮುಜುಗರವನ್ನು ಅನುಭವಿಸಲೇ ಬೇಕು ಎಂದು ಗೊಣಗುತ್ತ ಪೂಜಾರಿ ಫೋನು ಕುಕ್ಕಿದ.
ಪೂಜಾರಿಯ ಹುಕುಮ್ಮಿನಂತೆ ನ್ಯಾಯಾಲಯ “ಸಾಮ್ರಾಟ ನಮೋ ಡಿಗ್ರಿ ಸರ್ಟಿಫಿಕೇಟನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಅಗತ್ಯವಿಲ್ಲ. ಅದು ಪ್ರತಿ ಪ್ರಜೆಯ ಖಾಸಗಿ ಹಕ್ಕು” ಎಂದು ತೀರ್ಪು ನೀಡಿ ಕೇಸನ್ನು ರದ್ದು ಮಾಡಿತು. ಅಲ್ಲಿಗೆ ನಮೋ ಡಿಗ್ರಿ ಪುರಾಣಕ್ಕೆ ತೆರೆ ಬಿದ್ದು ನಮೋ, ಅ.ಕು. ಮಂತ್ರಿ ನಿಟ್ಟುಸಿರು ಬಿಟ್ಟರು.
ಆದರೆ – ಪ್ರಜ್ಞಾವಂತ ಪ್ರಜೆಗಳು ನ್ಯಾಯಾಲಯದ ತೀರ್ಪಿಗೆ ಅಸಮಾಧಾನಗೊಂಡು, “ ಇದರಲ್ಲಿ ಖಾಸಗಿತನ ಎಲ್ಲಿಂದ ಬಂತು? ನಾವು ತೋರಿಸಿ ಅಂದದ್ದು ಸಾಮ್ರಾಟ ನಮೋನ ಡಿಗ್ರಿ ಸರ್ಟಿಫಿಕೇಟ್. ಅವನ ಸನಾತನ ಒಳಚಡ್ಡಿಯಲ್ಲ” ಎಂದು ಲೇವಡಿ ಮಾಡ ತೊಡಗಿದ್ದು ಭರತಖಂಡದ ಇತಿಹಾಸದಲ್ಲಿ ದಾಖಲಾಗಿ ಹೋಯಿತು.