ಎಸ್ಐಟಿ ವಿಚಾರಣೆಯ ಬಳಿಕ ಇದೇ ಮೊದಲ ಬಾರಿಗೆ ಯೂಟ್ಯೂಬರ್ ಸಮೀರ್ ಎಂಡಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಎಸ್ಐಟಿ ಅಧಿಕಾರಿಗಳು ಸಮೀರ್ ನನ್ನು ಕರೆಸಿ ವಿಚಾರಣೆ ನಡೆಸಿದ ಬಳಿಕ ಈ ವಿಡಿಯೋ ಬಂದಿದೆ.
ಸಮೀರ್ ಎಂ.ಡಿ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರದ ಆರೋಪಕ್ಕೆ ಸಂಬಂಧಿಸಿದಂತೆ ವಿದೇಶದಿಂದ ತಮಗೆ ಧನಸಹಾಯ ಆಗಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ತಮ್ಮ ಎರಡು ಬ್ಯಾಂಕ್ ಖಾತೆಗಳಿಗೆ ಯಾವುದೇ ವಿದೇಶಿ ಹಣ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ವಿಡಿಯೋದಲ್ಲಿ, ಸಮೀರ್ ತಮ್ಮ ಬ್ಯಾಂಕ್ ಖಾತೆಯ ವಿವರಗಳು, ಹಣಕಾಸಿನ ವಹಿವಾಟಿನ ಇತಿಹಾಸವನ್ನು ವಿವರಿಸಿದ್ದು, ಈ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
‘ನಾನು ಎಲ್ಲಾ ದಾಖಲೆಗಳನ್ನು ಎಸ್‌ಐಟಿಗೆ ಸಲ್ಲಿಸಿದ್ದೇನೆ. ನನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ,’ ಎಂದು ಸಮೀರ್ ಎಂ.ಡಿ. ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋದ ಮೂಲಕ ತಮ್ಮ ವಿರುದ್ಧದ ಆರೋಪಗಳಿಗೆ ಸಮೀರ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಸಧ್ಯ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿರುವ ಸಮೀರ್ ನನಗೆ ಮನೆ ಬಾಡಿಗೆ ಕೊಡಲು ಯಾರೂ ಮುಂದಾಗುತ್ತಿಲ್ಲ. ನಮ್ಮನ್ನು ಯಾವುದೋ ದೊಡ್ಡ ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವವರಂತೆ ನೋಡುತ್ತಿದ್ದಾರೆ. ಇದು ನಮಗೆ ತೀವ್ರ ಸಂಕಷ್ಟ ತಂದಿದೆ ಎಂದು ಸಮೀರ್ ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.