ರಾಜ್ಯದಲ್ಲಿ ಕಂಡು ಕೇಳರಿಯದ ಬರ ಪರಿಸ್ಥಿತಿ ಆವರಿಸಿದೆ. ಇಂತಹ ಬರಗಾಲದ ಹಿನ್ನಲೆಯಲ್ಲಿ ಅಧ್ಯಯನಕ್ಕಾಗಿ ಕೇಂದ್ರದ 3 ತಂಡಗಳು ರಾಜ್ಯಕ್ಕೆ ಇಂದು ಆಗಮಿಸಲಿದ್ದಾವೆ. ಈ ತಂಡವು 13 ಜಿಲ್ಲೆಗಳಲ್ಲಿನ ಬರ ಪರಿಸ್ಥಿತಿಯನ್ನು ನಾಲ್ಕು ದಿನಗಳ ಕಾಲ ಪರಿಶೀಲನೆ ನಡೆಸಲಿದೆ.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದೆ. 195 ತಾಲೂಕುಗಳು ಬರಗಾಲ ಪೀಡಿತ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಇಂದು ಕೇಂದ್ರ ಸರ್ಕಾರದ ಬರ ಅಧ್ಯಯನದ 3 ತಂಡಗಳು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾವೆ. ಇಂದಿನಿಂದ ನಾಲ್ಕು ದಿಗನಳ ಕಾಲ ವಿವಿಧ ಬರ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪರಿಶೀಲನೆ ನಡೆಸಲಿವೆ.
ಕೇಂದ್ರ ತಂಡಗಳು 10 ಸದಸ್ಯರನ್ನ ಒಳಗೊಂಡಿದ್ದು, ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ರಾಜ್ಯದ ಸುಮಾರು 13 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಬರ ಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ, ಮಳೆ ಕೊರತೆ, ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಲಿದೆ.
ಇದಕ್ಕೂ ಮುನ್ನ ಕೇಂದ್ರದ ಬರ ಅಧ್ಯಯನದ ಮೂರು ತಂಡಗಳು ಇಂದು ಬೆಳಗ್ಗೆ 9.30ಕ್ಕೆ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೂ ಭೇಟಿ ನೀಡಿ ಮಾಹಿತಿ ಪಡೆಯಲಿದೆ. ಮಧ್ಯಾಹ್ನ 2.45ಕ್ಕೆ ವಿಧಾನಸೌಧದ ಕೊಠಡಿಯಲ್ಲಿ ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಸಂಕ್ಷಿಪ್ತ ವಿವರ ಪಡೆದು, ಆ ಬಳಿಕ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ತೆರಳಲಿದೆ.
ಸತತ ನಾಲ್ಕು ದಿನಗಳ ಕಾಲ ಕೇಂದ್ರ ಸರ್ಕಾರದಿಂದ ಆಗಮಿಸಿದಂತ 3 ಬರ ಅಧ್ಯಯನ ತಂಡದ ಅಧಿಕಾರಿಗಳು, ಕರ್ನಾಟಕದ ಬರ ಪರಿಸ್ಥಿತಿ ಅವಲೋಕಿಸಿ, ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಆ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರ ನಿರ್ವಹಣೆಗಾಗಿ ಪರಿಹಾರದ ಹಣವನ್ನು ಬಿಡುಗಡೆ ಮಾಡೋ ಸಾಧ್ಯತೆ ಇದೆ.