ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ವಿರುದ್ಧದ ಸಮರದಲ್ಲಿ ವಿರೋಧಿಗಳಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಹೈಕೋರ್ಟ್ ನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅರ್ಜಿ ವಜಾ ಬೆನ್ನಲ್ಲೇ ಸುಪ್ರೀಂಕೋರ್ಟ್‌ನಿಂದಲೂ ಸಹ ಈ ವಿಚಾರದಲ್ಲಿ ಅರ್ಜಿ ವಜಾ ಆಗಿದೆ.
ಚಾಮುಂಡೇಶ್ವರಿ ಪೂಜೆ ಮಾಡಲು ಹಿಂದೂಯೇತರ ವ್ಯಕ್ತಿಗೆ ಆಹ್ವಾನ ನೀಡಲಾಗಿದೆ ಎಂದು ಬೆಂಗಳೂರು ನಿವಾಸಿ ಹೆಚ್.ಎಸ್.ಗೌರವ್ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇನ್ನು ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿಮಾಡುವಂತೆ ವಕೀಲರು ಸಿಜೆಐ ಪೀಠಕ್ಕೆ ಮನವಿ ಮಾಡಿದ್ದರು.
ಮನವಿಯನ್ನು ಸ್ವೀಕರಿಸಿದ ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯ ಮೊದಲ ಸುತ್ತಿನಲ್ಲಿಯೇ ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿಕ್ರಮ್ ನಾಥ್ ಮತ್ತು ನ್ಯಾ.ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೆಚ್.ಎಸ್.ಗೌರವ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಈ ಅರ್ಜಿಯನ್ನು ಯಾವ ಆಧಾರದಲ್ಲಿ ಸಲ್ಲಿಸಿದ್ದೀರಿ ಎಂದು ಅರ್ಜಿ ಸಲ್ಲಿಕೆಯ ಔಚಿತ್ಯವನ್ನು ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಪ್ರಶ್ನಿಸಿದ್ದಾರೆ. ಈ ಹಿಂದೆ ಅದೇ ಸಮುದಾಯದ ನಿಸ್ಸಾರ್ ಅಹಮದ್ ಉದ್ಘಾಟನೆ ಮಾಡಿರಲಿಲ್ಲವೇ ಎಂದು ಅರ್ಜಿದಾರರಿಗೆ ಮೂರು ಪ್ರಶ್ನೆ ಎತ್ತಿದ್ದಾರೆ. ಆ ಮೂಲಕ ಬಾನು ಮುಷ್ತಾಕ್ ಆಯ್ಕೆ ವಿರೋಧ ಮಾಡಿದವರಿಗೆ ಮತ್ತೊಮ್ಮೆ ಮುಖಭಂಗವಾಗಿದೆ.