Friday, June 14, 2024

ಸತ್ಯ | ನ್ಯಾಯ |ಧರ್ಮ

“ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!”: ವಂಚನೆಯ ಆಳ-ಅಗಲ

ಮನೆಯಿಂದಲೇ ನೀವು 20,000 ರುಪಾಯಿ ಗಳಿಸಬಹುದು. ಇದು ವರ್ಕ್‌ ಫ್ರೊಂ ಹೋಮ್‌ ಉದ್ಯೋಗ..ಈ ರೀತಿಯ ಮೆಸೆಜ್‌ಗಳು ನಿಮ್ಮ ವಾಟ್ಸಾಪ್‌, ಟೆಲಿಗ್ರಾಮಿಗೆ ಬಂದಿರಬಹುದು. ಆರಂಭದಲ್ಲಿ ಚೆನ್ನಾಗಿ ಸಂವಹನ ನಡೆಸಿ ವಿಶ್ವಾಸವನ್ನು ಗಳಿಸುತ್ತಾರೆ. ಅವರು ಹೇಳಿದಂತೆ ನಡೆದುಕೊಂಡರೆ ಮೋಸ ಖಚಿತ. ಈ ವಂಚನೆಯ ಆಳ-ಅಗಲ ಇಲ್ಲಿದೆ

ಬೆಂಗಳೂರು,ಅಕ್ಟೋಬರ್.‌20: “ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ” ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು “ಆಪರೇಷನ್ ಚಕ್ರ 2”.

ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ ಒಡ್ಡಿ ಜನರಿಗೆ ಹಣದ ವಂಚನೆ ಮಾಡುತ್ತಿದ್ದಾರೆ.  ಈ ಹಣವನ್ನು ನಂತರ ಶೆಲ್ ಕಂಪನಿಗಳ ಮೂಲಕ ಕಳುಹಿಸಿ, ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐ ಪ್ರಕಾರ, ಇದೊಂದು ದೇಶದ ಅತ್ಯಂತ ದೊಡ್ಡ ಸೈಬರ್-ಮನಿ ಲಾಂಡರಿಂಗ್‌ ವಂಚನೆಯ ಜಾಲ.

ಈ ವಾರ ಸಿಬಿಐ “ಆಪರೇಷನ್ ಚಕ್ರ 2” ಎಂಬ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ 76 ಸ್ಥಳಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿಯನ್ನು ನಡೆಸಿದೆ. ಈ ಬಗ್ಗೆ ಅಕ್ಟೋಬರ್‌ 19 ಮತ್ತು ಅಕ್ಟೋಬರ್‌ 20 ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತನಿಖೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.

ಈ ಸಂದರ್ಭದಲ್ಲಿ 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್‌ಗಳು-ಹಾರ್ಡ್ ಡಿಸ್ಕ್‌ಗಳು, ಎರಡು ಸರ್ವರ್‌ಗಳ ಫೋಟೋಗಳು, 33 ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವಾರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ಡಂಪ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಹೆಣೆದಿರುವ ವಂಚನೆಯ ಸಂಕೀರ್ಣ ಜಾಲವನ್ನು ಬೆಳಕಿಗೆ ತಂದಿದೆ.

ಹೂಡಿಕೆ ಮತ್ತು ಉದ್ಯೋಗದ ಆಸೆ ತೋರಿಸಿ ಅಮಾಯಕರನ್ನು ವಂಚಿಸುತ್ತಿರುವ ಈ ಹಗರಣದ ವಿರುದ್ಧ ಸಿಬಿಐನಲ್ಲಿ ಕಳೆದ ವರ್ಷ ಎಫ್‌ಐಆರ್ ದಾಖಲಿಸಲಾಗಿತ್ತು. ಸತತ ಅಧ್ಯಯನಗಳ ನಂತರ ಸಿಬಿಐ ಈ ಜಾಲದ ಒಳಸುಳಿವು, ತಂತ್ರಜ್ಞಾನಗಳ ಬಳಕೆಯನ್ನು ಬೇಧಿಸಿ ದಂಧೆಯನ್ನು ಬಹಿರಂಗಪಡಿಸಿದೆ.

ಈ ದಂಧೆಯಲ್ಲಿ ಹಲವು ವಂಚಕರು ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಿ ಹೂಡಿಕೆ , ಇಲ್ಲವೇ ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ ಹಣವನ್ನು ಸಂಗ್ರಹಿಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ಯುಪಿಐಗಳನ್ನು ಬಳಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ವಿವಿಧ ಬ್ಯಾಂಕ್ ಖಾತೆಗಳು ಮತ್ತು ವಿದೇಶಿ ಮೂಲದ ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿನ ಹಣವನ್ನು ಡ್ರಾ ಮಾಡಲು ವಿವಿಧ ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂಬುದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ, ಈ ಹೆಚ್ಚಿನ ಶೆಲ್‌ ಕಂಪನಿಗಳು ಚೀನಾದ ಜೊತೆಗೆ ಸಂಬಂಧವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ.  

ಸೈಬರ್ ವಂಚನಕರು “ಗೂಗಲ್ ಜಾಹೀರಾತುಗಳು, ಎಸ್‌ಎಂಎಸ್, ಸಿಮ್ ಬಾಕ್ಸ್ ಆಧಾರಿತ ಎಸ್‌ಎಂಎಸ್, ಕ್ಲೌಡ್ ಸೇವೆಗಳು, ಫಿನ್‌ಟೆಕ್ ಕಂಪನಿಗಳು, ಪಾಪ್‌ಅಪ್‌ ಮೆಸೆಜ್‌ಗಳು ಮತ್ತು ಎಪಿಐ” ಗಳನ್ನು ಬಳಸುತ್ತಾರೆ ಎಂಬುದು ತಿಳಿದುಬಂದಿದೆ. ಸಿಬಿಐ ಪ್ರಕಾರ “ಸಾಮಾಜಿಕ ಮಾಧ್ಯಮಗಳು ಮತ್ತು ಜಾಹೀರಾತು ಪೋರ್ಟಲ್‌ಗಳು, ಎನ್‌ಕ್ರಿಪ್ಟ್ ಮಾಡಿದ ಚಾಟ್ ಅಪ್ಲಿಕೇಶನ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಬಳಸಿ ಜನರ ಗಮನ ಸೆಳೆಯುತ್ತಾರೆ.” ಅಲ್ಲದೇ, ವಂಚಕರ ಸರ್ಚ್ ಇಂಜಿನ್‌ನ ಜಾಹೀರಾತು ಟೂಲ್‌ಗಳನ್ನು ಬಳಸುತ್ತಿದ್ದಾರೆ, ಜೊತೆಗೆ ಬೃಹತ್ ಗಾತ್ರದಲ್ಲಿ ಬಲ್ಕ್‌ SMS ಕಳುಹಿಸಲು ರೆಂಟೆಡ್ ಹೆಡರ್‌ಗಳನ್ನು ಬಳಸುತ್ತಿದ್ದಾರೆ.

ವಿದೇಶಿ ಪ್ರಜೆಗಳನ್ನು ವಂಚಿಸಲು ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗೆ ತಾಂತ್ರಿಕ ಬೆಂಬಲ ನೀಡುವವರಂತೆ‌ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ 72 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ದಾಳಿ ನಡೆಸಿದೆ. ಚೀನೀ ಲಿಂಕ್‌ಗಳನ್ನು ಹೊಂದಿರುವ ಕಂಪನಿಗಳ “ಕ್ರಿಪ್ಟೋಕರೆನ್ಸಿ ವಂಚನೆ” ಗೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ.

ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್‌ಐಯು-ಇಂಡಿಯಾ)ದ ಮಾಹಿತಿಯಂತೆ ಆಪರೇಷನ್ ಚಕ್ರ-II ಕ್ರಿಪ್ಟೋ-ಕರೆನ್ಸಿ ವಂಚನೆಯನ್ನು ಭೇದಿಸಿತು. ಈ ವಂಚನೆಯನ್ನು ಭಾರತೀಯರನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದು, ಸುಮಾರು 100 ಕೋಟಿ ರುಪಾಯಿಗೂ ಅಧಿಕ ಹಣ ವಂಚಕರ ಪಾಲಾಗಿದೆ.

ವಂಚಕ ಇದಕ್ಕಾಗಿ ಫೇಕ್ ಕ್ರಿಪ್ಟೋಕರೆನ್ಸಿ ಟೋಕನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.  ಈ ಪ್ರಕರಣದಲ್ಲಿ ಆರೋಪಿಯು ಭಾರತ ಮೂಲದ ಹೆಸರಾಂತ ಅಮೇರಿಕನ್ ಕ್ರಿಪ್ಟೋ ಟೆಕ್ನಾಲಜಿಸ್ಟ್‌ ಒಬ್ಬರ ಫೋಟೋವನ್ನು ಬಳಸಿಕೊಂಡು ವೆಬ್‌ಸೈಟ್ ಮಾಡಿದ್ದಾನೆ. ಗಣಿಗಾರಿಕೆ ಯಂತ್ರಗಳನ್ನು ಖರೀದಿಸಲು ಹೂಡಿಕೆದಾರರ ಹಣವನ್ನು ಬಳಸುತ್ತಾರೆ ಎಂಬಂತೆ ನಂಬಿಸಿ,  ಬಂದ ಲಾಭವನ್ನು ಮುದ್ರಿಸಲಾದ ಕ್ರಿಪ್ಟೋಕರೆನ್ಸಿಗಳ ಮೂಲಕ ವಿತರಿಸಲಾಗಿದೆ.

ಈ ಅಪ್ಲಿಕೇಷನ್‌ ಆಗಸ್ಟ್ 2021 ರವರೆಗೆ ಕಾರ್ಯನಿರ್ವಹಿಸಿತ್ತು. ಈ ಸಮಯದಲ್ಲಿ ಅನೇಕ ಭಾರತೀಯರು ವಿವಿಧ ಗೇಟ್‌ವೇಗಳ ಮೂಲಕ ಹೂಡಿಕೆ ಮಾಡಿದ್ದರು. ಆರಂಭದಲ್ಲಿ, ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ರಿಟರ್ನ್ಸ್ ಕೂಡ ನೀಡಲಾಯಿತು, ಆದರೆ ಆಗಸ್ಟ್ 2021ರ ನಂತರ ಎಲ್ಲಾ ಪಾವತಿಗಳು ಸ್ಥಗಿತಗೊಂಡವು.

Payment aggregator ಸರ್ವಿಸ್‌ಗಳನ್ನು ಬಳಸಿ ಆರೋಪಿಯು ಅಂದಾಜು 168.75 ಕೋಟಿ ರುಪಾಯಿಯ ವಂಚನೆ ನಡೆಸಿದ್ದ. ತನಿಖೆಯ ಸಮಯದಲ್ಲಿ 150 ಖಾತೆಗಳನ್ನು ಪತ್ತೆಮಾಡಲಾಗಿದ್ದು, ಇದರಲ್ಲಿ 46 ಶೆಲ್ ಕಂಪನಿಗಳು, 42 ಮಾಲೀಕತ್ವ ಸಂಸ್ಥೆಗಳು ಮತ್ತು 50 ವೈಯಕ್ತಿಕ ಖಾತೆಗಳು, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು, ಸ್ವೀಕರಿಸಿದ ಹಣವನ್ನು ಲಾಂಡರಿಂಗ್ ಮಾಡಲು ಮತ್ತು ಅಂತಿಮ ಫಲಾನುಭವಿಗಳಿಗೆ ವರ್ಗಾಯಿಸಲು ಮಾರ್ಗಗಳಾಗಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ. ಎರಡು ಖಾಸಗಿ ಕಂಪನಿಗಳು, ಅದರ ನಿರ್ದೇಶಕರು ಸೇರಿದಂತೆ ಅನೇಕರ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಯೋಗದೊಂದಿಗೆ ಆಪರೇಷನ್ ಚಕ್ರ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸಿಬಿಐ ತಿಳಿಸಿವೆ.

ಬೆಂಗಳೂರಿನಲ್ಲಿ ಕೂತು ಸಿಂಗಾಪುರದವರಿಗೆ ವಂಚನೆ!

ಈ ವಂಚಕರ 137 ಶೆಲ್ ಕಂಪನಿಗಳನ್ನು ಸಿಬಿಐ ಗುರುತಿಸಿದ್ದು, ಹೆಚ್ಚಿನ ಸಂಖ್ಯೆಯ ಘಟಕಗಳು ಬೆಂಗಳೂರಿನ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲ್ಪಟ್ಟಿವೆ. ಸಿಬಿಐಯ ತನಿಖೆಯ ನಂತರ ಈ ಕಂಪನಿಗಳ ನಿರ್ದೇಶಕರನ್ನು ಗುರುತಿಸಲಾಗಿದ್ದು, ಹೆಚ್ಚಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಕೆಲವು ನಿರ್ದೇಶಕರು ಬೆಂಗಳೂರು ಮೂಲದ ಪಾವತಿ ವ್ಯಾಪಾರಿಯೊಂದಿಗೆ (ಪೇಮೆಂಟ್‌ ಮರ್ಚೆಂಟ್‌) ಸಂಬಂಧ ಹೊಂದಿದ್ದರು. ವಂಚನೆಯ ಕೇಂದ್ರವಾಗಿರುವ ಈ ವ್ಯಾಪಾರಿ ಸುಮಾರು 16 ವಿಭಿನ್ನ ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುತ್ತಿದ್ದಾನೆ, ಅಲ್ಲಿ ಬೃಹತ್ ಮೊತ್ತ ಅಂದಾಜು 357 ಕೋಟಿ ರುಪಾಯಿಯ ಹಣ ಹರಿದು ಬಂದಿದೆ.

ಈ ಹಣದ ಜಾಡನ್ನು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದಂತೆ ಉದ್ದೇಶಪೂರ್ವಕವಾಗಿ ಹಣ ಜಮೆಯಾದ ನಂತರ ನಂತರ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬೆಂಗಳೂರು, ಕೊಚ್ಚಿನ್ ಮತ್ತು ಗುರ್‌ಗಾಂವ್‌ನಲ್ಲಿ ನಡೆಸಲಾದ ಹುಡುಕಾಟಗಳಿಂದ ಸಿಬಿಐಗೆ ಗಣನೀಯ ಸಂಖ್ಯೆಯ ಪುರಾವೆಗಳನ್ನು ಸಿಕ್ಕಿದ್ದು, ಶೆಲ್ ಕಂಪನಿಗಳ ನಿರ್ದೇಶಕರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ.

ಈ ಆರೋಪಿಗೆ ವಿದೇಶಿ ಪ್ರಜೆಯ ಜತೆಗಿನ ಒಡನಾಟವೂ ಇದ್ದು, ಈ ವಂಚಕ ಘಟಕಗಳ ನಿರ್ದೇಶಕರು ಮತ್ತು ಸಂಪರ್ಕ ಮಾಹಿತಿಯನ್ನು ಬದಲಾಯಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರವೂ ಕಂಡುಬಂದಿದೆ.

ಸಿಂಗಾಪುರದ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಸೈಬರ್ ಆರ್ಥಿಕ ಅಪರಾಧಗಳ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎರಡನೇ ಪ್ರಕರಣವನ್ನು ಸಿಬಿಐ ದಾಖಲಿಸಲಾಗಿದೆ. ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 100 ಭಾರತೀಯ ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಸಿಂಗಾಪುರ ನಾಗರಿಕರ ಮೇಲೆ ನಡೆಸಲಾದ 300 ಕ್ಕೂ ಹೆಚ್ಚು ಸೈಬರ್ ವಂಚನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು INTERPOL ಚಾನೆಲ್‌ಗಳ ಮೂಲಕ ಸಿಂಗಾಪುರ್ ಪೋಲೀಸ್ ಫೋರ್ಸ್‌ ನೀಡಿದೆ.

ಫಿಶಿಂಗ್, ವಿಶಿಂಗ್, ಸ್ಮಿಶಿಂಗ್ ಮತ್ತು ಮೋಸದ ತಂತ್ರಜ್ಞಾನ (phishing, vishing, smishing, & fraudulent tech support) ದಂತಹ ಸೋಷಿಯಲ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಅಪರಾಧಿಗಳು 400 ಸಿಂಗಾಪುರ್ ನಾಗರಿಕರಿಗೆ ವಂಚನೆ ಮಾಡಿದ್ದಾರೆ. ಈ ತಂತ್ರಗಾರಿಕೆಯನ್ನು ಬಳಸಿಕೊಂಡು ವಂಚಕರು ಸಿಂಗಪುರದ ಬ್ಯಾಂಕ್‌ ಖಾತೆಗಳಿಂದ ಭಾರತೀಯ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ 150 ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಪಾಟ್ನಾ, ಕೋಲ್ಕತ್ತಾ, ಲಕ್ನೋ, ವಾರಣಾಸಿ, ಚಂಡೀಗಢ, ಜಲಂಧರ್, ಭೋಪಾಲ್, ಚೆನ್ನೈ, ಕೊಚ್ಚಿ ಮತ್ತು ಮಧುರೈ ಸೇರಿದಂತೆ 35 ಸ್ಥಳಗಳಲ್ಲಿ ಆರೋಪಿಗಳ ಸಮ್ಮುಖದಲ್ಲೇ ಶೋಧ ನಡೆಸಿದಾಗ ಗುರುತಿನ ಪುರಾವೆಗಳಿಗೆ ಸಂಬಂಧಿಸಿದ ದೋಷಾರೋಪಣೆ ದಾಖಲೆಗಳು, ಮೋಸದ ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಇತರ ಸಾಕ್ಷ್ಯಗಳು ಲಭ್ಯವಾಗಿವೆ.

ಹೇಗೆ ಮೋಸ ಮಾಡುತ್ತಾರೆ?

ಸಿಬಿಐ ಮೂಲಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಗೂಗಲ್, ಫೇಸ್‌ಬುಕ್ ಜಾಹೀರಾತುಗಳು, ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತು ಎಸ್‌ಎಂಎಸ್‌ಗಳ ಮೂಲಕ ಸಂಪರ್ಕಿಸಲಾಗುತ್ತದೆ. ಬೇಗ ಹಣ ಗಳಿಸಲು ಅವರಿಗೆ ಉದ್ಯೋಗಗಳನ್ನು ನೀಡುವ ಬರವಸೆ ನೀಡುತ್ತವೆ.

ಸಾಮಾನ್ಯವಾಗಿ ಈ ಮೆಸೆಜ್‌ಗಳು,

“ಸರ್, ಅಮೆಜಾನ್  ಅರೆಕಾಲಿಕ ಉದ್ಯೋಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ನೀವು ದಿನನಿತ್ಯ 3000-10000 ರುಪಾಯಿ ಗಳಿಸಬಹುದು”

“ಆತ್ಮೀಯ ನಾನು ಎಚ್‌ಆರ್‌. ನೀವು ಪಾರ್ಟ್‌ಟೈಮ್‌ ಹಾಗೂ ಫುಲ್‌ ಟೈಮ್ ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ, ಈಗ ನೀವು ದಿನಕ್ಕೆ 20000 ರುಪಾಯಿ ಗಳಿಸಬಹುದು. ಅದಕ್ಕಾಗಿ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ…”.

ಲೇಖಕರ ವೈಯಕ್ತಿಕ ಸಂಭಾಷಣೆ

ಸಾಮಾನ್ಯವಾಗಿ ಇಂತಹ ಮೆಸೆಜ್‌ಗಳ ಜೊತೆಗೆ ವಾಟ್ಸಾಪ್‌ ಅಥವಾ ಟೆಲಿಗ್ರಾಮ್‌ಗಳ ಲಿಂಕ್‌ಗಳು ಇರುತ್ತವೆ. ಇದರ ಮೇಲೆ ಕ್ಲಿಕ್‌ ಮಾಡಿದರೆ, ಅದು ನೇರವಾಗಿ ಚ್ಯಾಟಿಂಗ್‌ಗೆ ಹೋಗುತ್ತದೆ. ಈ ಸಂದರ್ಭದಲ್ಲಿ ವಂಚಕ ಸಂಭಾಷಣೆಯನ್ನು ನಡೆಸಿ, ಹೂಡಿಕೆಯ ವೆಬ್‌ಸೈಟ್‌ ಲಿಂಕ್‌ ಕಳಿಸುತ್ತಾನೆ.

ಇಷ್ಟು ಮಾತ್ರವಲ್ಲದೇ, ಕೆಲವೊಮ್ಮೆ ಚ್ಯಾಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ತಕ್ಷಣವೇ ಲಾಭವನ್ನು ಪಡೆಯುವ ಬಗ್ಗೆ ಜನರಿಗೆ ಹೇಳಲಾಗುತ್ತದೆ. ಜೊತೆಗೆ, ಡಾಕ್ಯುಮೆಂಟ್‌ ಟೈಪ್‌ ಮಾಡುವ, ಯೂಟ್ಯೂಬ್‌ ಚಾನೆಲ್‌ ಲೈಕ್‌ ಮಾಡುವ, ಇ-ಮೇಲ್‌ ಟೈಪ್‌ ಮಾಡುವ ಸಣ್ಣ ಸಣ್ಣ ಕೆಲಸಗಳನ್ನು ನೀಡಲಾಗುತ್ತದೆ. ಇದರಲ್ಲಿ ಕಡ್ಡಾಯದ ಷರತ್ತು ಏನೆಂದರೆ, ವ್ಯಕ್ತಿ ತನ್ನ ಕ್ರೆಡೆನ್ಷಿಯಲ್ಸ್‌ ಪ್ರೂವ್‌ (ವಿಶ್ವಾಸಾರ್ಹತೆ) ಮಾಡಲು ತನ್ನ UPI ವ್ಯಾಲೆಟ್‌ನಲ್ಲಿ ಹಣ ಹಾಕಬೇಕು. ಇದಕ್ಕಾಗಿ ವಂಚಕರ ಸೈಟ್‌ಗಳು ಅನಧಿಕೃತ ಪೇಮೆಂಟ್‌ ಗೇಟ್‌ವೇಗಳನ್ನು ನೀಡುತ್ತಾರೆ.

ಲೇಖಕರ ವೈಯಕ್ತಿಕ ಸಂಭಾಷಣೆ

ಇಂತಹ  ಗೇಟ್‌ವೇಗಳು ಭಾರತದಲ್ಲಿ ಕೆಲಸ ಮಾಡಲು ಯಾವುದೇ ಅಧಿಕಾರ ಹೊಂದಿಲ್ಲ. ಈ ಎಲ್ಲಾ ಪಾವತಿಗಳನ್ನು ಇಂಟರ್ನೆಟ್ ಲಿಂಕ್‌ಗಳನ್ನು ಬಳಸಿಕೊಂಡು UPI ಮೂಲಕ ಮಾಡಲಾಗುತ್ತದೆ.

ಕೆಲವು ಬಾರಿ, ಟೆಲಿಗ್ರಾಮ್‌ಗಳಲ್ಲಿ ಸಂಪರ್ಕಿಸಿ, ಉದ್ಯೋಗದ ಆಮಿಷವನ್ನು ತೋರಿಸಿ ಯೂಟ್ಯೂಬ್‌ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್‌ ಮಾಡುವ ಸಣ್ಣ ಸಣ್ಣ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಸ್ಕ್ರೀನ್‌ಶಾಟ್‌ಗಳನ್ನು ಕಳಿಸಬೇಕು. ಇದಾದ ನಂತರ, ಬೋನಸ್‌ ಹಣಕ್ಕಾಗಿ ಇನ್ನೊಂದು ಟೆಲಿಗ್ರಾಮ್‌ ಲಿಂಕ್‌ ಕಳಿಸುತ್ತಾರೆ. ಆ ಲಿಂಕ್‌ ತೆರೆದು ಮೊದಲಿನ ವ್ಯಕ್ತಿ ನೀಡಿದ ಕೋಡ್‌ ಒಂದನ್ನು ನೀಡಬೇಕು… ಹೀಗೆ ವಂಚಕರು ಇ-ಮೇಲ್, UPI ಮೊದಲಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.

ಈ ರೀತಿಯ ಮೆಸೆಜ್‌ಗಳನ್ನುವಾಟ್ಸಾಪ್‌, ಟೆಲಿಗ್ರಾಮ್‌ ಮೊದಲಾದ ಕಡೆ ಲಿಂಕ್‌ಗಳನ್ನು ಕಳುಹಿಸಲು ಬಳಸುವ‌ ಮೊಬೈಲ್ ಸಂಖ್ಯೆಗಳು ಬೇರೆ ಬೇರೆ ಸ್ಥಳಗಳನ್ನು ಆಧರಿಸಿರುತ್ತವೆ.‌ ಟೆಲಿಗ್ರಾಮಿನಲ್ಲಿ ಯಾವುದೇ ಮೊಬೈಲ್‌ ಸಂಖ್ಯೆ ಇರುವುದಿಲ್ಲ. ವಾಟ್ಸಾಪ್‌ನಲ್ಲಿ ಬಳಸುವ ಸಂಖ್ಯೆಗಳು ಅವುಗಳ ಮೂಲ ಬಳಕೆದಾರರಿಗೆ ತಿಳಿಯದಂತೆ ವಂಚಕರು ಬಳಸುತ್ತಿರುತ್ತಾರೆ.

ಈ ಜಾಲದಲ್ಲಿ ವಂಚಕರು ಕಾಲ್‌ ಸೆಂಟರ್‌ಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಜನರೊಂದಿಗೆ ಸಂಭಾಷನೆ ನಡೆಸುವ ಇವರು, ಉಳಿದ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಿಂದ ವಾಟ್ಸಾಪ್‌, ಟೆಲಿಗ್ರಾಮ್ ಮೂಲಕ ಚಾಟಿಂಗ್‌ ನಡೆಸುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಚಾಟಿಂಗ್‌ ನಡೆಸುವ ಇವರು, ಗೂಗಲ್‌ ಟ್ರಾನ್ಸ್‌ಲೇಷನ್‌ ಕೂಡಾ ಬಳಸುತ್ತಾರೆ.

ಹಣದ ವ್ಯವಹಾರಕ್ಕೆ ವಿದೇಶಿಗರು ಉಪಯೋಗಿಸುವ ಗೇಟ್‌ವೇಗಳನ್ನು ಬಳಸುತ್ತಾರೆ. ಈ ಪೇಮೆಂಟ್‌ ಗೇಟ್‌ವೇಗಳು UPI ಮೂಲಕ ಹಣವನ್ನು ಸ್ವೀಕರಿಸುತ್ತವೆ. ಯುಪಿಐಗಳನ್ನು RazorPay, BharatPe, ಇತ್ಯಾದಿಗಳ ಹಿಂದೆ ಲೇಯರಿಂಗ್ ರಚಿಸಲು ಬಳಸಿ, ದಿನದ ಕೊನೆಯಲ್ಲಿ ವ್ಯವಹಾರವನ್ನು ಮುಗಿಸುತ್ತಾರೆ. ರೇಜರ್ ಪೇ, ಈಸ್ ಬಝ್, ಪೇಟಿಎಂ, ಸ್ಪೀಡಿ ಪೇ, ಇನ್‌ಸ್ಟಂಟ್ ಪೇ, ಕ್ಯಾಶ್ ಫ್ರೀ ಮುಂತಾದ ಫಿನ್‌ಟೆಕ್ ಕಂಪನಿಗಳನ್ನು ಪಾವತಿಗಳಿಗೆ ಬಳಸಲಾಗುತ್ತದೆ.

ಆದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಶೆಲ್ ಕಂಪನಿಗಳು ಮತ್ತು ಬಾಡಿಗೆ ಕಂಪನಿಗಳು ಹೇಗೆ ವ್ಯವಹರಿಸಲು ಸಾಧ್ಯ? ಪಾವತಿಗಳಿಗೆ ಸೇವೆಗಳನ್ನು ಪಡೆಯಲು ನೋಂದಣಿ ಪ್ರಮಾಣಪತ್ರಗಳನ್ನು ಬಳಸಲಾಗುತ್ತದೆ. ಈ ಫಿನ್‌ಟೆಕ್ ಕಂಪನಿಗಳಲ್ಲಿ ಹೆಚ್ಚಿನವು ಮಾನ್ಯತೆ ಪಡೆದಿಲ್ಲ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ನಿಯಂತ್ರಿಸಲ್ಪಡುವುದಿಲ್ಲ.

ನಿಮ್ಮ ಫೋನ್‌ಗೆ ಇಂತಹ ಮೆಸೆಜ್‌ಗಳು ಬಂದರೆ ಅವುಗಳನ್ನು ಬ್ಲಾಕ್‌ ಮಾಡುವುದೇ ಒಳಿತು. ಅವರ ನಿರ್ದೇಶನದಂತೆ ನಾವು ಮುಂದುವರಿಸಿ, ನಮ್ಮೆಲ್ಲಾ ಮಾಹಿತಿಗಳನ್ನು ಅವರಿಗೆ ನೀಡಿದರೆ ಅಥವಾ ಹಣದ ವ್ಯವಹಾರ ನಡೆಸಿದರೆ ಮೋಸ ಖಚಿತ. ಹಣದ ವ್ಯವಹಾರ ಮುಗಿದ ತಕ್ಷಣ ನಾವು ಹಣ ಕಳುಹಿಸಿದ ವ್ಯಕ್ತಿ ಪತ್ತಯೇ ಇರುವುದಿಲ್ಲ!

ಎಚ್ಚರ….

ಲೇಖನ: ಚರಣ್‌ ಐವರ್ನಾಡು, ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು