ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಹಣವನ್ನು ಬಳಸಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಲವು ಪಕ್ಷಗಳು ಯತ್ನಿಸುತ್ತಿವೆ. ಇದರಿಂದಾಗಿ ಮೂಟೆಗಟ್ಟಲೆ ಹಣ ಸಾಗಣೆಯಾಗುತ್ತಿದೆ.
ಇದನ್ನು ತಡೆಯಲು ಕೇಂದ್ರ ಚುನಾವಣಾ ಆಯೋಗ ಕ್ರಮಕೈಗೊಳ್ಳುತ್ತಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ಎರಡು ಲೋಕಸಭಾ ಸ್ಥಾನಗಳು ಮತ್ತು ಉಪಚುನಾವಣೆ ನಡೆಯಲಿರುವ 48 ವಿಧಾನಸಭಾ ಸ್ಥಾನಗಳ ವ್ಯಾಪ್ತಿಯಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಇದರ ಭಾಗವಾಗಿ ನ.6ರವರೆಗೆ ಒಟ್ಟು ರೂ.558.67 ಕೋಟಿ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬಹಿರಂಗಪಡಿಸಿದೆ.
ವಶಪಡಿಸಿಕೊಂಡ ಹಣದಲ್ಲಿ ರೂ.92.47 ಕೋಟಿ ನಗದು, ರೂ.52.76 ಕೋಟಿ ಮೌಲ್ಯದ ಮದ್ಯ, ರೂ.68.22 ಕೋಟಿ ಮೌಲ್ಯದ ಡ್ರಗ್ಸ್, ರೂ.104.18 ಕೋಟಿ ಮೌಲ್ಯದ ಚಿನ್ನಾಭರಣಗಳು, ರೂ.241.02 ಕೋಟಿ ಮೌಲ್ಯದ ಉಚಿತ ವಸ್ತುಗಳು ಮತ್ತು ಇತರ ವಸ್ತುಗಳು ಸೇರಿವೆ.
ಹಲವು ರಾಜ್ಯಗಳಲ್ಲಿ ಒಟ್ಟು 558.67 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 280 ಕೋಟಿ ರೂ.ಗಳನ್ನು ಜಾರ್ಖಂಡ್ ಒಂದರಲ್ಲೇ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಬಾರಿ ವಶಪಡಿಸಿಕೊಂಡ ಮೊತ್ತವು 2019ರ ವಿಧಾನಸಭಾ ಚುನಾವಣೆಯ 3.5 ಪಟ್ಟು ಹೆಚ್ಚು ಎಂದು ಅದು ಹೇಳಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದರೆ, ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನ ನವೆಂಬರ್ 13ರಂದು ಮತ್ತು ಎರಡನೇ ಹಂತದ ಮತದಾನ ನವೆಂಬರ್ 20ರಂದು ನಡೆಯಲಿದೆ. ನವೆಂಬರ್ 23ರಂದು ಎರಡೂ ರಾಜ್ಯಗಳ ಮತ ಎಣಿಕೆ ನಡೆಯಲಿದೆ.