ದೆಹಲಿ: ಟೋಲ್ ಸಂಗ್ರಹದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ ಹಾಗೂ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ದೇಶಾದ್ಯಂತ 14 ಟೋಲ್ ಪ್ಲಾಜಾಗಳ ಮೇಲೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ದೆಹಲಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿರುವ ಪ್ರಮುಖ ಟೋಲ್ ಪ್ಲಾಜಾಗಳಲ್ಲಿ ಈ ತಪಾಸಣೆಗಳು ಮುಂದುವರಿದಿವೆ.
2025 ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆಧಾರದ ಮೇಲೆ ಇ.ಡಿ ಅಧಿಕಾರಿಗಳು ಈ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಧಿಕೃತ ವ್ಯವಸ್ಥೆಯನ್ನು ವಂಚಿಸಿ, ಟೋಲ್ ಹಣವನ್ನು ಅಕ್ರಮವಾಗಿ ಲಪಟಾಯಿಸಲು ನಕಲಿ ರಸೀದಿಗಳನ್ನು ಸೃಷ್ಟಿಸುತ್ತಿದ್ದ ಆಘಾತಕಾರಿ ಮಾಹಿತಿ ಡಿಜಿಟಲ್ ಪುರಾವೆಗಳ ಮೂಲಕ ಬಯಲಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.
ನಕಲಿ ರಸೀದಿಗಳನ್ನು ಸಿದ್ಧಪಡಿಸಲು ಖದೀಮರು ಪ್ರತ್ಯೇಕ ತಂತ್ರಾಂಶವನ್ನು (ಸಾಫ್ಟ್‌ವೇರ್) ಬಳಸುತ್ತಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಡಿಜಿಟಲ್ ಸಾಕ್ಷ್ಯಾಧಾರಗಳ ಬೆನ್ನುಬಿದ್ದಿರುವ ಇ.ಡಿ, ತನ್ನ ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ಟೋಲ್ ಪ್ಲಾಜಾಗಳಿಗೆ ವಿಸ್ತರಿಸಿದ್ದು ಪರಿಶೀಲನೆ ಮುಂದುವರಿಸಿದೆ.
