2014 ರಲ್ಲಿ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ದಿಢೀರ್ ವಿಚಾರಣೆಗೆ ಒಳಪಡಿಸಿದೆ. ಬೆಂಗಳೂರು ಮತ್ತು ಶಿವಮೊಗ್ಗದ ಕಛೇರಿ ಮತ್ತು ಮನೆ ಮೇಲೆ ಏಕಕಾಲಕ್ಕೆ ಬಂದು ವಿಚಾರಣೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಅಪೇಕ್ಸ್ ಬ್ಯಾಂಕ್ ಗೆಸ್ಟ್ ಹೌಸ್ ನಲ್ಲಿ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳಿಂದ ಮಂಜುನಾಥಗೌಡ ವಿಚಾರಣೆ ನಡೆಯುತ್ತಿದೆ. ಮಂಜುನಾಥ ಗೌಡ ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಮನೆ ಮೇಲೆ ಇಡಿ ದಾಳಿ ಮಾಡಿದೆ.
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಮಾಜಿ ಮ್ಯಾನೇಜರ್ ಶೋಭಾ ನಿವಾಸದ ಮೇಲೆ ಇದೀಗ ಜಾರಿ ನಿರ್ದೇಶನಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 8 ಕ್ಕೂ ಹೆಚ್ಚು ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಯುತ್ತಿದೆ.
ಇದರ ಜೊತೆಗೆ ಬ್ಯಾಂಕಿನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಏಕಕಾಲಕ್ಕೆ ಎರಡು ಕಡೆ ದಾಳಿ ನಡೆಸಿ ಅಧಿಕಾರಿಗಳ ತಂಡ ಇದೀಗ ಪರಿಶೀಲನೆ ನಡೆಸುತ್ತಿದೆ.