ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಿಂದ ಮಾಧ್ಯಮವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಕೇಂದ್ರ ಸರಕಾರ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.
ಮುಂಬರುವ ಸಂಸತ್ ಅಧಿವೇಶನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ವಿಪಕ್ಷಗಳಿಗೆ ಅದು ಮನವಿ ಮಾಡಿ. ಈ ನಿಟ್ಟಿನಲ್ಲಿ ಎಡಿಟರ್ಸ್ ಗಿಲ್ಡ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮಗಳು ಹೆಚ್ಚುತ್ತಿವೆ ಎಂದು ಮಾಹಿತಿ ನೀಡಲಾಗಿದೆ. ಪತ್ರವು ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನಾಲ್ಕು ಕಾನೂನುಗಳು ಮತ್ತು ಅವುಗಳ ಮಿತಿಗಳನ್ನು ವಿವರಿಸಿದೆ.
ಕಳೆದ ವರ್ಷ ಸರ್ಕಾರ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯನ್ನು ತಂದಿತು. ಅದರ ಹಲವು ನಿಬಂಧನೆಗಳು ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತವೆ. ಕಳೆದ ವರ್ಷ ತಂದ ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ ಪತ್ರಿಕಾ ಸ್ವಾತಂತ್ರ್ಯಕ್ಕೂ ಸವಾಲಾಗಿದೆ. ಮಾಧ್ಯಮಗಳನ್ನು ನಿಗ್ರಹಿಸಲು ಮತ್ತು ಅವುಗಳನ್ನು ತನ್ನ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಸರ್ಕಾರವು ಈಗಾಗಲೇ ಹಲವಾರು ಶಾಸನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಕೆಲವು ಸಂಸತ್ತಿನ ಅನುಮೋದನೆಯನ್ನೂ ಪಡೆದಿವೆ. ಕಾನೂನುಗಳ ರಚನೆ ಮತ್ತು ಅನುಮೋದನೆಯಲ್ಲಿ, ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸಲಾಗಿಲ್ಲ. ಅವುಗಳನ್ನು ಸಂಸತ್ತಿನಲ್ಲಿ ಪರಿಶೀಲಿಸಿಲ್ಲ. ಕಾನೂನುಗಳ ನಿಯಮಗಳು ಅಸ್ಪಷ್ಟವಾಗಿವೆ. ಅವುಗಳ ವ್ಯಾಪ್ತಿಯನ್ನು ಬಹಳವಾಗಿ ವಿಸ್ತರಿಸಲಾಗಿದೆ.
ಕಾನೂನುಬದ್ಧವಾಗಿ ಪತ್ರಿಕೋದ್ಯಮ ಚಟುವಟಿಕೆಗಳನ್ನು ನಿರ್ಬಂಧಿಸಲು ಈ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಈ ನಿಯಮಗಳು ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತವೆ. ಅವರು ತೆಗೆದುಕೊಳ್ಳುವ ಕ್ರಮಗಳು ಪತ್ರಿಕೋದ್ಯಮ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಎಡಿಟರ್ಸ್ ಗಿಲ್ಡ್ ಪತ್ರದಲ್ಲಿ ವಿವರಿಸಿದೆ.
ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಎಡಿಟರ್ಸ್ ಗಿಲ್ಡ್ ಅಭಿಪ್ರಾಯಪಟ್ಟಿದೆ. ಪತ್ರಿಕಾ ಸಂಸ್ಥೆಗಳು, ವಿರೋಧ ಪಕ್ಷಗಳು ಮತ್ತು ಪತ್ರಕರ್ತರು 2021ರ ಐಟಿ ನಿಯಮಗಳಿಗೆ ಮಾಡಿದ ತಿದ್ದುಪಡಿಗಳ ಬಗ್ಗೆ ವಿಶೇಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿದ್ದುಪಡಿಗಳನ್ನು ಈಗಾಗಲೇ ಎಡಿಟರ್ಸ್ ಗಿಲ್ಡ್, ನ್ಯೂಸ್ ಬ್ರಾಡ್‌ಕಾಸ್ಟ್ ಮತ್ತು ಡಿಜಿಟಲ್ ಅಸೋಸಿಯೇಷನ್ ಮತ್ತು ಹಾಸ್ಯನಟ ಕುನಾಲ್ ಕಮ್ರಾ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ತಿದ್ದುಪಡಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿವೆ ಎಂದು ಆರೋಪಿಸಲಾಗಿದೆ.