ಗುವಾಹಟಿ: ಅಸ್ಸಾಂ ಸಂಗೀತ ದಿಗ್ಗಜ (Assamese music legend) ಜುಬಿನ್ ಗಾರ್ಗ್ ಅವರು ಇತ್ತೀಚೆಗೆ ನಿಧನರಾಗಿದ್ದು, ಸಿಂಗಾಪುರಕ್ಕೆ ತೆರಳಿದ್ದಾಗ ಅವರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಆದರೆ, ಅವರ ಮರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆದೇಶದ ಮೇರೆಗೆ ಅಧಿಕಾರಿಗಳು ಜುಬಿನ್ ಸಾವಿನ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಪಘಾತ ಸಂಭವಿಸಿದ ಸಮಯದಲ್ಲಿ ಅಲ್ಲಿ ಹಾಜರಿದ್ದವರ ಮೇಲೆ ನಿಗಾ ಇಡಲಾಗಿತ್ತು.
ಈಗಾಗಲೇ ಜುಬಿನ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ, ಈಶಾನ್ಯ ಭಾರತ ಉತ್ಸವದ ಮುಖ್ಯ ಸಂಘಟಕ ಶ್ಯಾಮ್ಕಾನು ಮಹಂತ ಮತ್ತು ಜುಬಿನ್ ಅವರ ಸೋದರಸಂಬಂಧಿ ಸಹಿತ ಹಲವರನ್ನು ಬಂಧಿಸಲಾಗಿತ್ತು.
ಇದೀಗ, ಜುಬಿನ್ ಗಾರ್ಗ್ ಅವರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು (Personal Security Officers) ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ನಂದೀಶ್ವರ್ ಬೋರಾ ಮತ್ತು ಪರೇಶ್ ಬೈಶ್ಯ ಅವರನ್ನು ಹಲವು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಲ್ಲಿ ಭಾರೀ ಪ್ರಮಾಣದ ಆರ್ಥಿಕ ವಹಿವಾಟು ನಡೆದಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಗಾರ್ಗ್ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ಗಾಯಕರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದೆ. ಅವರ ಖಾತೆಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು (₹1 ಕೋಟಿ) ವಹಿವಾಟು ನಡೆದಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಇದರಿಂದಾಗಿ ಗಾರ್ಗ್ ಅವರ ಸಾವಿನಲ್ಲಿ ಅವರ ಪಾತ್ರವಿದೆ ಎಂಬ ಅನುಮಾನದ ಮೇಲೆ ವಿಚಾರಣೆ ನಡೆಸಿದ ನಂತರ ಇಂದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.