Home ಬ್ರೇಕಿಂಗ್ ಸುದ್ದಿ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿದ ನ್ಯಾ. ಹೇಮಾವತಿ

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿದ ನ್ಯಾ. ಹೇಮಾವತಿ

ಹಾಸನ : ಸಮಾಜದ ಕಟ್ಟಕಡೆಯ ಜನರಿಗೆ ಕಾನೂನಿನ ಅರಿವು ಹಾಗೂ ನ್ಯಾಯಸಮ್ಮತ ನೆರವು ದೊರಕಬೇಕು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೇಮಾವತಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಕಾನೂನು ನೆರವು ಎಲ್ಲಿ ಪಡೆಯಬೇಕು ಎಂಬ ಅರಿವು ಸಾಕಷ್ಟು ಇರುವುದಿಲ್ಲ. ವಕೀಲರಿಂದ ಸಲಹೆ ಪಡೆಯಲು ಹಣದ ಕೊರತೆಯಿಂದ ಅನೇಕರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಇಂತಹವರಿಗೆ ಇದೀಗ ಉಚಿತ ಕಾನೂನು ಸಲಹಾ ಕೇಂದ್ರದ ಮೂಲಕ ನೆರವು ಲಭ್ಯವಾಗಲಿದೆ ಎಂದರು.

ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಚ್ಚ ನ್ಯಾಯಾಲಯದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿವೆ. ಕಾನೂನು ಸಲಹೆ ಅಗತ್ಯವಿರುವ ಯಾವುದೇ ವ್ಯಕ್ತಿ ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆಸ್ಪತ್ರೆ ಸೇರಿದಂತೆ ಜನರಿಗೆ ಕಾನೂನು ಅವಶ್ಯಕತೆ ಎದುರಾಗುವ ಎಲ್ಲಾ ಕ್ಷೇತ್ರಗಳಲ್ಲಿ ರಕ್ಷಣೆ ದೊರಕಬೇಕು ಎಂಬ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಿವೃತ್ತ ವಕೀಲರನ್ನು ನೇಮಕ ಮಾಡಲಾಗಿದೆ. ಇಲ್ಲಿ ಯಾರೂ ಯಾವುದೇ ಶುಲ್ಕ ನೀಡಬೇಕಿಲ್ಲ, ಸರ್ಕಾರವೇ ವಕೀಲರಿಗೆ ಗೌರವಧನ ನೀಡುತ್ತದೆ. ಸಾರ್ವಜನಿಕರು ನಿರ್ಭಯವಾಗಿ ಉಚಿತ ಕಾನೂನು ಸಲಹೆ ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಉಚಿತ ಕಾನೂನು ಸಲಹಾ ಕೇಂದ್ರಕ್ಕೆ ವಕೀಲ ತಿಮ್ಮ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದ್ದು, ಯಾವುದೇ ಸಂದರ್ಭದಲ್ಲಿ ವಕೀಲರಿಂದ ಹಣ ಬೇಡಿಕೆ ಬಂದಲ್ಲಿ ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಕೇಂದ್ರದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಮಾತನಾಡಿ, ಕಾನೂನು ಅರಿವು ಅಗತ್ಯವಿರುವ ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರು ಹಾಗೂ ಮಾನಸಿಕವಾಗಿ ನೊಂದವರು ಉಚಿತ ಕಾನೂನು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಉಚಿತ ಕಾನೂನು ಸೇವೆಗಾಗಿ 151000 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ, ನೇರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ವಕೀಲರೊಂದಿಗೆ ಸಮಾಲೋಚನೆ ನಡೆಸಬಹುದು. ಕಂದಾಯ ಹಾಗೂ ವಿವಿಧ ಇಲಾಖಾ ಕೆಲಸಗಳು, ಆಸ್ಪತ್ರೆ ಸಂಬಂಧಿತ ಸಮಸ್ಯೆಗಳು ಮತ್ತು ವಿವಿಧ ನ್ಯಾಯಾಲಯದ ಪ್ರಕರಣಗಳಿಗೆ ಉಚಿತ ಕಾನೂನು ಸಲಹೆ ದೊರೆಯಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರ ವೆಂಕಟೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

You cannot copy content of this page

Exit mobile version