Home ಅಂಕಣ ಎಂಟು ವರ್ಷಗಳೇ ಕಳೆಯಿತು ಗೌರಿಯನ್ನು ಕಳೆದುಕೊಂಡು

ಎಂಟು ವರ್ಷಗಳೇ ಕಳೆಯಿತು ಗೌರಿಯನ್ನು ಕಳೆದುಕೊಂಡು

0

“ಗೌರಿಯ ಕೊಲೆ , ಕೊಲೆಗೆ ಕಾರಣವಾದ ವಿಷಯಗಳು ಈಗಲೂ ಇಷ್ಟು ವರ್ಷಗಳ ನಂತರವೂ ಧಗಧಗನೆ ಉರಿಯುತ್ತಿದೆ. ಅಂದರೆ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಗೌರಿಯ ಲೋಕದಲ್ಲಿ ನ್ಯಾಯ , ಅನ್ಯಾಯದ ವಿಷಯಗಳು ಅದ್ಯಾವ ಪರಿ ಆಕ್ರಮಿಸಿದ್ದವು ಎಂಬುದನ್ನು…” ರಾಜೇಶ್ವರಿ ಬೋಗಯ್ಯ ಅವರ ಬರಹದಲ್ಲಿ

ಗೌರಿಯ ಕೊಲೆ , ಕೊಲೆಗೆ ಕಾರಣವಾದ ವಿಷಯಗಳು ಈಗಲೂ ಇಷ್ಟು ವರ್ಷಗಳ ನಂತರವೂ ಧಗಧಗನೆ ಉರಿಯುತ್ತಿದೆ. ಅಂದರೆ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಗೌರಿಯ ಲೋಕದಲ್ಲಿ ನ್ಯಾಯ , ಅನ್ಯಾಯದ ವಿಷಯಗಳು ಅದ್ಯಾವ ಪರಿ ಆಕ್ರಮಿಸಿದ್ದವು ಎಂಬುದನ್ನು. ಗೌರಿ ಇದ್ದಾಗಲೂ , ಕೊಲೆಯಾಗಿ ಜೀವ ಕಳೆದುಕೊಂಡರೂ ಅವರು ಎತ್ತಿದ್ದ ಪ್ರಶ್ನೆಗಳು ಈಗಲೂ ಗೋರಿಯಿಂದ ಎದ್ದೆದ್ದು ಬರ್ತಿದಾವೆ. ಇದೀಗ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕಥೆ ದಿನಕ್ಕೊಂದು ತಿರುವ ಪಡೆಯುತ್ತಿರುವ ಸಂದರ್ಭದಲ್ಲಿ ಅಂದೇ ಲೇಖನವನ್ನು ಬರೆದು ಗಟ್ಟಿಗಿತ್ತಿ ಎನ್ನಿಸಿಕೊಂಡಿದ್ದರು. ಬದುಕಿದ್ದಿದ್ದರೆ ದೊಡ್ಡ ಆಂದೋಳನ ನಡೆಯುತ್ತಿದ್ದುದ್ದು ನೂರಕ್ಕೆ ನೂರು ಸತ್ಯ.
ದಿನದಿನವೂ ಆತಂಕಕ್ಕಿಡಾಗುವ ಘಟನೆಗಳು  ಸಮಸ್ಯೆಗಳು ಅಣಬೆ ಎದ್ದಂತೆ ಹುಟ್ಟುವಾಗೆಲ್ಲ ಈಗ ಗೌರಿಯ ತಂದೆಯೋ , ಗೌರಿಯೋ ಇದ್ದಿದ್ದರೆ ಹೇಗೆ ಗುಡುಗುತ್ತಿದ್ದರು ಎಂಬುದನ್ನು ಎಲ್ಲರೂ ಮಾತನ್ನಾಡುವರು. ಆ ಮಾತುಗಳಲ್ಲೇ ಹೋರಾಟಕ್ಕಿಳಿದ ಸಮಾಧಾನದಿಂದ ನಿಶ್ಚಿಂತೆಯಿಂದ ಇರುವರು.

ಇರಲಿ ಇವೆಲ್ಲ…
ಗೌರಿ ಎಂಬ ಬೆಂಕಿ ಚೆಂಡು ಕೊಲೆಯಾಗಿ ನಮ್ಮ ಕರುಳಿಗೆಲ್ಲ ಕೊಳ್ಳಿ ಎಟ್ಟುಕೊಂಡು ಎಂಟು ವರ್ಷಗಳೇ ಉರುಳಿದೆ. ಗೌರಿಯಷ್ಟು ಕೆಲಸದ ಬಗೆಗಿನ ನಿಷ್ಠೆಯನ್ನು ನಾವು ಆವಾಹಿಸಿಕೊಳ್ಳಲಾಗದೆ ಸ್ವಾರ್ಥಿಗಳಾಗಿದ್ದೇವೆ. ಅಪರೂಪಕ್ಕೆ ಹುಟ್ಟಿದವರಿಂದ ಮಾತ್ರ ವಿಸ್ಮಯಗಳು ಜರುಗುವುದು.

ನನ್ನ ಮತ್ತು ಗೌರಿಯ ಗೆಳೆತನ ಬೆಳಗಿನ ಬೆಚ್ಚಗಿನ ಬಿಸಿಲಿನಂತೆ  . ಎಂದಿಗೂ ಹಿತವಾದ ಅನುಭವ.

ಆತುರಕ್ಕುಟ್ಟಿದ್ದ ಆಂಜನೇಯಿ ಎಂದರೆ ಅದು ಗೌರಿಯೇ. ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ. ಅವರ ಸ್ಪೀಡ್ ನನ್ನ ಸಾವಧಾನ ಹೊಂದಿಕೆಯೇ ಆಗ್ತಿರಲಿಲ್ಲ.ಆದರೂ ಪಳಗಿಸಿದರು ನನ್ನನ್ನು.ಅವರ ವೃತ್ತಿಯೂ ಪಾದರಸವನ್ನೇ ಕುಡಿಸಿದ್ದರಿಂದ ಕೆಲಸದ ಮಧ್ಯೆಯೇ ಜೀವನದ ಜಂಜಾಟವನ್ನು ತೂಗಿಸಿಕೊಂಡಿದ್ದರು.

ಕನ್ನಡ ಚೆನ್ನಾಗೇ ಮಾತನಾಡುತ್ತಿದ್ದರೂ ತಡವರಿಸಿಕೊಂಡು ಮಾತನಾಡುತ್ತಿದ್ದುದ್ದರಿಂದ ನನಗದು ತಮಾಷೆ ಎನ್ನಿಸುತ್ತಿತ್ತು.ಪತ್ರಿಕೆಯಲ್ಲಿ ಎಲ್ಲರ ಮೇಲೂ ಬರೆದು ಕೋಪ ಪ್ರದರ್ಶಿಸುತ್ತಿದ್ದರೂ , ಪ್ರತೀ ಫೋನಿನ ಮಾತುಕತೆಯಲ್ಲಿ ಜಗಳವೇ ಫ್ರಾಧಾನ್ಯವಾಗಿದ್ದರೂ ನನ್ನೊಂದಿಗೆ ಮಾತ್ರ ತಂಗಿಯಂತಹ‌ ಪ್ರೀತಿ ತೋರಿದ್ದಿದೆ. ನನ್ನೊಂದಿಗೆ ಎಂದಾದರೂ , ಒಂದಾದರು ಆಡಿದವರಲ್ಲ , ಅಂದವರಲ್ಲ. ನಾನೇ ಅವರ ಕೋಪದಿಂದ ಮುದುಡಿಹೊಗಿರುತ್ತಿದ್ದೆ. ತಕ್ಷಣ ಅದನ್ನರಿತ ಗೌರಿ ಏನಾದರೂ ಸಿಹಿಯಾಗಿ ಮಾತನ್ನಾಡಿ ವಾತಾವರಣವನ್ನು ಹಗುರಾಗಿಸುತ್ತಿದ್ದರು.

ಲಿಂಗಾಯಿತ ಧರ್ಮದ ವಿಷಯದಲ್ಲಿ ( ಇಂದಿಗೂ ಪ್ರಚಲಿತ ) ಆತುರಕ್ಕೆ ಬಿದ್ದ ಗೌರಿ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಾತನಾಡಿದ್ದೇ ದುರಂತಕ್ಕೆ ನಾಂದಿಯಾಯಿತು. ಅದೇನು ಮಾತನಾಡದ ವಿಷಯವೇನಾಗಿರಲಿಲ್ಲ. ಗೌರಿಯನ್ನು ಕೊಂದಾಕ್ಷಣ ಲಿಂಗಾಯತ ಧರ್ಮದ ವಿಷಯ ಸ್ತಬ್ದವಾಗುಳಿಯಲಿಲ್ಲ. ಅವರು ಕೊಲೆಗೀಡಾಗಿದ್ದಕ್ಕೆ ನಾವು ಸ್ತಬ್ದರಾಗಿದ್ದೆವು.

ಇತ್ತೀಚಿನ ರಾಷ್ಟ್ರದ , ರಾಜ್ಯದ ಹಲವಾರು ವಿಷಯಗಳಿಗೆ ರಾಜಕೀಯ ನಾಯಕರು , ಸಾಹಿತಿಗಳು , ವಿಚಾರವಂತರು ನೀರಸವಾಗಿ ತಮಗೂ ಈ ಪ್ರಪಂಚದ ವಿದ್ಯಮಾನಗಳಿಗು ಏನೇನೂ ಸಂಬಂಧವಿಲ್ಲದಂತೆ ಬದುಕುತ್ತಿರುವುದನ್ನು ಗೌರಿ ಏನಾದರೂ ಕಂಡಿದ್ದರೆ ಚಾಟಿ ಬೀಸುತ್ತಿದ್ದುದ್ದು ಖಂಡಿತ.

ಗೌರಿಯ ನ್ಯಾಯದ ದಾರಿಯನ್ನು ನಾವ್ಯಾರೂ ಪ್ರಾಮಾಣಿಕವಾಗಿ ತುಳಿದಿಲ್ಲವಾದರೂ ವರುಷಕ್ಕೊಮ್ಮೆ ಪರಿಶುದ್ದರಾಗಿ ಅವರನ್ನು ನೆನಪಿಸಿಕೊಂಡು ಒಂದೊಂದು ಲೇಖನವನ್ನು ಬರೆದು ಸುಮ್ಮನಾಗುವುದೇ ಸುಲಭದ ದಾರಿ ಎಂದು ಸಾಗುತ್ತಿರುವ  ಸ್ವಾರ್ಥಿಗಳು ನಾವು.

ಈ ಮೊದಲೆಲ್ಲ ಗೌರಿ ನನಗೆ ಕಾಣುಸುತ್ತಿದ್ದದ್ದು ಸೂರ್ಯಕಾಂತಿಯ ಹೂವಿನಂತೆ. ಆದರೆ ಬದಲಾವಣೆ ಜಗದ ನಿಯಮದಲ್ಲಿ ಅಪಾರ ನಂಬಿಕೆಯಿರುವ ನನಗೆ ನನ್ನ ಆಲೋಚನೆಗಳು ಬದಲಾಗಿ ಗೌರಿ ಇತ್ತೀಚೆಗೆ  ಕೆಂಡ ಸಂಪಿಗೆಯಂತೆ ತೋರುತ್ತಿದ್ದಾರೆ…ಘಾಟು ಘಾಟು!!

You cannot copy content of this page

Exit mobile version