ಬೆಂಗಳೂರು : ಅಡಿಕೆ ಎಂಬುದು ಮಲೆನಾಡಿಗರ ಸಾಂಪ್ರದಾಯಿಕ ಬೆಳೆ. ಲೆಕ್ಕದಲ್ಲಿ ವಾಣಿಜ್ಯ ಬೆಳೆ ಅನ್ನಿಸಿಕೊಂಡರೂ ಮಲೆನಾಡಿಗರ ಅಷ್ಟೂ ಆದಾಯದ ಮೂಲ ಇದರಲ್ಲಿದೆ. ಈ ದಿನಗಳಲ್ಲಿ ಸಾಮಾನ್ಯ ಒಬ್ಬ ಕೂಲಿ ಕಾರ್ಮಿಕ ಕೂಡಾ ತನ್ನ ಮನೆ ಹಿತ್ತಲಿನ ಅಲ್ಪಸ್ವಲ್ಪ ಜಾಗದಲ್ಲಿ ಕೂಡ ತನ್ನ ಕೈಲಾದಷ್ಟು ಅಡಿಕೆ ಸಸಿಗಳನ್ನು ಹಾಕಿ ಪಾಲನೆ, ಪೋಷಣೆ ಮಾಡಿಕೊಂಡು ಬಂದಿರುತ್ತಾರೆ. ಆ ಮಟ್ಟಿಗೆ ಅಲ್ಪಸ್ವಲ್ಪ ಖರ್ಚು ವೆಚ್ಚಗಳನ್ನು ನಿಭಾಯಿಸಲೂ ಕೂಡಾ ಅಡಿಕೆ ಸಹಕಾರಿಯಾಗಿದೆ.
ಆದರೆ ಇಂತಹ ಸಂದರ್ಭದಲ್ಲಿ ಮನುಷ್ಯನಿಗೆ ಕೊರೋನಾ ವೈರಸ್ ಬಂದಂತೆ ಅಡಿಕೆ ಮರಗಳಿಗೆ ‘ಎಲೆಚುಕ್ಕೆ ರೋಗ’ದಂತಹ ಮಾರಣಾಂತಿಕ ಖಾಯಿಲೆ ತಗುಲುತ್ತಿದೆ. ನಿರೀಕ್ಷೆಗೂ ಮೀರಿದ ವೇಗದಲ್ಲಿ ಈ ಖಾಯಿಲೆ ಅಡಿಕೆ ತೋಟಗಳಿಗೆ ತಗುಲಿ ಇಲ್ಲಿಯ ರೈತರು ಇನ್ನು ತಲೆ ಎತ್ತಲಾಗದ ಸ್ಥಿತಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ಅರಿತು ಮಲೆನಾಡಿನ ರೈತರ ನೆರವಿಗೆ ಬರಬೇಕಾಗಿದ್ದು ಸರ್ಕಾರದ ಕರ್ತವ್ಯವಾಗಬೇಕಿತ್ತು. ಆದರೆ ಈ ವರೆಗೆ ರೈತರ ನೆರವಿಗೆ ಸರ್ಕಾರ ಬಂದಿಲ್ಲ ಅನ್ನೋದು ಖೇದಕರ.

ಹೋಗಲಿ, ಅಡಿಕೆಗೆ ತಗುಲಿರುವ ಎಲೆಚುಕ್ಕೆ ರೋಗಕ್ಕೆ ಏನಾದರೂ ಔಷಧೀಯ ಪರಿಹಾರ ಏನಾದರೂ ಸರ್ಕಾರದ ಕಡೆಯಿಂದ ಇದೆಯೇ? ಸಂಶೋಧನೆ ಮೂಲಕ ಸರ್ಕಾರ ರೋಗಕ್ಕೆ ಪ್ರಮುಖ ಕಾರಣವನ್ನು ಏನಾದರೂ ಹುಡುಕಿದೆಯೇ? ಅದೂ ಇಲ್ಲ. ಹೋಗಲಿ, ತೋಟಗಾರಿಕೆ ಇಲಾಖೆ ಕಡೆಯಿಂದ ಪರ್ಯಾಯ ಬೆಳೆಗೆ ಏನಾದರೂ ಮಾರ್ಗದರ್ಶನ ನಡೆದಿದೆಯೇ? ಆದೂ ಇಲ್ಲ. ಹಾಗಾದರೆ ಸರ್ಕಾರವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಏನು ಮಾಡಿದ್ದಾರೆ.
ಹೇಳ್ತೀವಿ ಕೇಳಿ. ಮಾನ್ಯ ಗೃಹ ಸಚಿವರು, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ ಆರಗ ಜ್ಞಾನೇಂದ್ರ ಅವರು ಎಲೆಚುಕ್ಕೆ ರೋಗ ಹರಡದಂತೆ ತಡೆಗಟ್ಟಲು ಮತ್ತು ಮಲೆನಾಡು ಭಾಗದ ಜನರ ಗ್ರಹಚಾರ ದೋಷ ಪರಿಹಾರಾರ್ಥವಾಗಿ ‘ಓಂ ನಮಃ ಶಿವಾಯ’ ಸಾಮೂಹಿಕ ಮಂತ್ರೋಚ್ಛಾರಣೆ ಪೂಜಾ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ್ದಾರೆ. ಅವರೇ ಹೇಳುವಂತೆ ‘ಸರ್ಕಾರ ತನ್ನೆಲ್ಲಾ ಕಾರ್ಯ ಮಾಡಿದೆ. ಇನ್ನು ನೊಂದಿರುವ ಜನರ ಮಾನಸಿಕ ನೆಮ್ಮದಿಗಾಗಿ ಈ ಧಾರ್ಮಿಕ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಅಂದ್ರೆ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಅಡಿಕೆ ರೋಗಕ್ಕೆ ತಗುಲಿರುವ ಎಲೆಚುಕ್ಕೆ ರೋಗದ ಶಮನಕ್ಕೆ ಕೈ ಚೆಲ್ಲಿ ಕುಳಿತರೇ?
ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದಂತೆ ಸರ್ಕಾರದ ಕಡೆಯಿಂದ ಈಗಾಗಲೇ 10 ಕೋಟಿ ಮಂಜೂರಾತಿ ಆಗಿದೆ. ಅದರಲ್ಲಿ ಐದು ಕೋಟಿ ಬಿಡುಗಡೆ ಕೂಡಾ ಆಗಿದೆ. ಬಿಡುಗಡೆ ಆಗಿರುವ ಹಣದಲ್ಲಿ ರೈತರಿಗೆ ಔಷಧಿ ಸಿಂಪಡಣೆಗೆ ಸರ್ಕಾರ ನೆರವಾಗಲಿದೆ ಎಂದಿದ್ದಾರೆ. ಪ್ರಶ್ನೆ ಎದ್ದಿರುವುದು ಏನೆಂದರೆ ಗೃಹ ಸಚಿವರೇ ಪ್ರತಿನಿಧಿಸುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಇರುವ ಅಡಿಕೆ ತೋಟಗಳಲ್ಲಿ ಶೇ 60 ರಷ್ಟು ಅಡಿಕೆ ತೋಟ ಬಗರ್ ಹುಕುಂ ವ್ಯಾಪ್ತಿಯಲ್ಲಿ ಬರುವಂತವು. ತೋಟಗಾರಿಕಾ ಇಲಾಖೆ ಕಡೆಯಿಂದ ಬಿಡುಗಡೆ ಆಗುವ ಔಷಧಿಗಳು ಪಹಣಿ ಪತ್ರ ಇಟ್ಟೇ ತಗೆದುಕೊಳ್ಳಬೇಕು. ಹಾಗಾದರೆ ಆ ಶೇ 60 ರಷ್ಟು ತೋಟಗಳ ಕಥೆ ಏನು?
ಇನ್ನೊಂದು ಬಹುಮುಖ್ಯ ಪ್ರಶ್ನೆ ಎಂದರೆ ಅಡಿಕೆ ಮರಕ್ಕೆ ತಗುಲಿರುವ ಎಲೆಚುಕ್ಕೆ ರೋಗಕ್ಕೆ ಸ್ಪಷ್ಟ ಕಾರಣ ಏನು ಎಂದು ಇವತ್ತಿಗೂ ಯಾರಿಗೂ ಮಾಹಿತಿ ಇಲ್ಲ. ಖಾಯಿಲೆ ಏನು ಎಂದೇ ತಿಳಿಯದೇ ಸರ್ಕಾರ ಅಥವಾ ಫರ್ಟಿಲೈಜರ್ ಕಂಪನಿಗಳು ವಿತರಿಸುವ ಔಷಧಿಗಳು ಎಷ್ಟು ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತವೆ? ಈಗಾಗಲೇ ಕೆಲವು ಫರ್ಟಿಲೈಜರ್ ಕಂಪನಿಗಳು ವಿತರಿಸಿರುವ ಔಷಧಿಗಳು ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಔಷಧಿ ಸಿಂಪಡಣೆ ನಂತರ ಒಂದೆರಡು ದಿನ ಕಣ್ಣು ಬಿಡಲಾಗುವುದಿಲ್ಲ, ಚರ್ಮಕ್ಕೆ ದುಷ್ಪರಿಣಾಮ ಬೀರುತ್ತಿವೆ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ. ಜೊತೆಗೆ ಯಾವ ವಿಜ್ಞಾನಿಗಳು ಅಥವಾ ಅಧ್ಯಯನ ಸಂಸ್ಥೆ ಕೂಡಾ ಈ ಔಷಧಿಗಳನ್ನು ಬಳಸಲು ಸೂಚಿಸಿಲ್ಲ. ಎಲೆಚುಕ್ಕೆ ರೋಗದ ಅಧ್ಯಯನ ಕೂಡಾ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಈ ಔಷಧಿಗಳೂ ಎಷ್ಟು ಸೂಕ್ತ ಎಂಬುದು ಪ್ರಶ್ನಾರ್ಹ.
ಇಂತಹ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತುರ್ತು ಸಂಶೋಧನೆಗೆ ಕರೆ ಕೊಟ್ಟು ಅದರ ಮಾಹಿತಿಗಳನ್ನು ಜನರಿಗೆ ತಲುಪಿಸಬೇಕು. ಸ್ವತಃ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಇವರು ಜನರಲ್ಲಿ ಮೂಡಿರುವ ಗೊಂದಲ ಸರಿಪಡಿಸಬೇಕು. ಅದು ಬಿಟ್ಟು ಸಾಮೂಹಿಕ ಮಂತ್ರೋಚ್ಛಾರಣೆ ಎಷ್ಟು ಸರಿ. ‘ಮಂತ್ರದಿಂದ ಮಾವಿನಕಾಯಿ ಉದುರಿಸಲಾಗಲ್ಲ’ ಎಂಬ ಗಾದೆಮಾತು ಇಂತಹ ಜನಪ್ರತಿನಿಧಿಗಳಿಗೆ ಅರ್ಥವಾಗುವುದಾದರೂ ಯಾವಾಗ? ಅಥವಾ ಆರಗ ಜ್ಞಾನೇಂದ್ರ ಸರ್ಕಾರದ ಅಸಮರ್ಥತೆಯನ್ನು ಮರೆಮಾಚಲು ಧಾರ್ಮಿಕ ಆಚರಣೆಯನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆಯೇ? ಎಂಬ ಅನುಮಾನಗಳೂ ದಟ್ಟವಾಗಿವೆ.
‘ಅಡಿಕೆಗೆ ಬಂದ ಮಾರಣಾಂತಿಕ ಎಲೆಚುಕ್ಕೆ ರೋಗ ನಿವಾರಣೆಗೆ ಸಾಮೂಹಿಕ ಮಂತ್ರೋಚ್ಛಾರಣೆ ಜೊತೆಗೆ ಬಿಲ್ವಪತ್ರೆ ಮೂಲಕ ದೇವರಿಗೆ ಅರ್ಪಿಸಲಾಗುತ್ತಂತೆ. ನಂತರ ನಡೆಯುವ ಹೋಮ ಹವನದ ಮೂಲಕ ಸಿಗುವ ಬೂದಿಯನ್ನು ಅಡಿಕೆ ತೋಟಕ್ಕೆ ಹಾಕಿದರೆ ಎಲೆಚುಕ್ಕೆ ರೋಗಕ್ಕೆ ಕಡಿವಾಣ ಹಾಕಬಹುದಂತೆ. ಹಾಗಾದರೆ ಸಂಶೋಧನೆ, ಔಷಧಿ ಸಿಂಪಡಣೆ ಎಲ್ಲವನ್ನೂ ಕೈಬಿಟ್ಟು ತೋಟಕ್ಕೆ ಹೋಮದ ಬೂದಿ ಸಿಂಪಡಿಸಿದರೆ ರೋಗ ನಿವಾರಣೆ ಆಗುತ್ತದೆಯೇ? ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಆರಗ ಜ್ಞಾನೇಂದ್ರ ವೈಜ್ಞಾನಿಕ ಚಿಂತನೆಯನ್ನು ಜನರಲ್ಲಿ ಬಿತ್ತುವುದು ಬಿಟ್ಟು ಧಾರ್ಮಿಕ ಭಾವನೆಗಳ ಮೂಲಕ ಜನರ ದಿಕ್ಕು ತಪ್ಪಿಸುವುದು ಸರಿಯೇ? ಮತ್ತೆ ನಾವೆಲ್ಲಾ ಶಿಲಾಯುಗದತ್ತ ಮುಖ ಮಾಡಬೇಕಾದ ದೌರ್ಭಾಗ್ಯಕ್ಕೆ ಬಂದಿರುವುದು ಮಲೆನಾಡಿಗರ ದುರಂತದ ದಿನಗಳಿವು’ ಎಂದು ಮಲೆನಾಡಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಈ ಭಾಗದ ಕೆಲವು ಮಠಾಧೀಶರು ದೇವರಿಗೆ ಕುಂಕುಮಾರ್ಚನೆ ಮಾಡಿಸಿ ತೋಟಗಳಿಗೆ ಹಾಕಲೂ ಕರೆ ಕೊಟ್ಟಿದ್ದಾರೆ. ವೈಚಾರಿಕತೆ ಮತ್ತು ಧಾರ್ಮಿಕತೆಯ ಸಂಘರ್ಷ ಬಿಟ್ಟು ಇವರೆಲ್ಲ ವಾಸ್ತವಕ್ಕೆ ಬಂದು ಯಾಕೆ ಯೋಚಿಸುತ್ತಿಲ್ಲ. ಮನುಷ್ಯನಲ್ಲಿ ಬೇಧದ ಗುಣಗಳಿಯಬಹುದು. ಆದರೆ ಕಾಯಿಲೆಗಳಿಗೆ ಯಾವ ಬೇಧಗಳೂ ಇಲ್ಲ. ಕೋವಿಡ್ ಸಾಂಕ್ರಾಮಿಕವನ್ನೇ ಉದಾಹರಣೆಗೆ ಇಟ್ಟು ನೋಡಬಹುದು. ಅದೆಷ್ಟೇ ದೊಡ್ಡ ಧಾರ್ಮಿಕ ವ್ಯಕ್ತಿ ಅಥವಾ ಅದೆಷ್ಟೇ ದೊಡ್ಡ ಬುದ್ದಿಜೀವಿಯನ್ನೂ ಸಹ ಕೋವಿಡ್ ಸಾಂಕ್ರಾಮಿಕ ಬಿಡದೇ ಕಾಡಿದ್ದು ಇನ್ನೂ ಯಾರೂ ಮರೆತಿಲ್ಲ. ಅಂದು ಇದೇ ರೀತಿ ಧಾರ್ಮಿಕ ಪೂಜೆ ಪುನಸ್ಕಾರ ಮಾಡಿಕೊಂಡು ಕೂತಿದ್ದರೆ ಕೋವಿಡ್ ವೈರಸ್ ಬಿಡುತ್ತಿತ್ತೇ? ಖಂಡಿತಾ ಇಲ್ಲ.
ಇಂದು ಮಲೆನಾಡಿಗರಿಗೆ ತಗುಲಿರುವ ಸಮಸ್ಯೆ ಕೂಡಾ ಕೋವಿಡ್ ನಷ್ಟೇ ಭಯಾನಕವಾಗಿದೆ. ಇದು ಈ ಭಾಗದ ಜನರ ಬದುಕಿನ ಪ್ರಶ್ನೆ. ಜನಪ್ರತಿನಿಧಿಗಳು ಇನ್ನಾದರೂ ವಾಸ್ತವಕ್ಕೆ ಬಂದು, ಸರ್ಕಾರದ ಮೇಲೆ ಪಕ್ಷಾತೀತವಾಗಿ ಎಲ್ಲರೂ ಒಟ್ಟುಗೂಡಿ ಒತ್ತಡ ಹೇರಿದರೆ ಸಮಸ್ಯೆ ಬಗೆಹರಿಯಬಹುದು. ಅದು ಬಿಟ್ಟು ಜನರ ಧಾರ್ಮಿಕ ಭಾವನೆ ಅಡಿಯಲ್ಲಿ ಇಂತದ್ದೇ ಮಾಡುತ್ತಾ ಕುಳಿತರೆ ನೂರಕ್ಕೆ ನೂರರಷ್ಟು ಮುಂಬರುವ ದಿನಗಳಲ್ಲಿ ಮಲೆನಾಡಿನಲ್ಲಿ ಜನ ಅತ್ಯಂತ ದುರಂತದ ದಿನಗಳನ್ನು ಎದುರು ನೋಡಲಿದ್ದಾರೆ.