ಚುನಾವಣಾ ಪ್ರಚಾರಕ್ಕೆ ತೆರೆ: ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ನಾಳೆ ಮತದಾನ

ದೆಹಲಿ: ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಅಬ್ಬರದ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆ ಬಿದ್ದಿದೆ. ಗುರುವಾರ (ಏಪ್ರಿಲ್ 9) ಈ ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು, ಮತದಾರರ ಮನ ಗೆಲ್ಲಲು ರಾಜಕೀಯ ಪಕ್ಷಗಳು ನಡೆಸುತ್ತಿದ್ದ ಬಹಿರಂಗ ಪ್ರಚಾರ ಈಗ ಅಂತ್ಯಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಘಟಾನುಘಟಿ ನಾಯಕರು ಕಳೆದ ಕೆಲವು ವಾರಗಳಿಂದ ಈ ರಾಜ್ಯಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮತಯಾಚಿಸಿದ್ದರು. ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ (LDF) ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದರೆ, ಅಸ್ಸಾಂನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಆರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಇನ್ನೊಂದೆಡೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿ ಸೇರಿದಂತೆ ಉಳಿದ 22 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ನಡೆಸಲು ಭಾರತೀಯ ಚುನಾವಣಾ ಆಯೋಗ ಯೋಜಿಸಿದೆ. ಏಪ್ರಿಲ್ 29 ರಿಂದ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದ್ದು, ಈ ಹಂತದಲ್ಲಿ ಸುಮಾರು 39 ಕೋಟಿ ಮತದಾರರ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ಆಯೋಗ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು