ಚೆನ್ನೈ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಭಯೋತ್ಪಾದಕ ಪದ ಬಳಕೆಯ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಭಾರತೀಯ ಚುನಾವಣಾ ಆಯೋಗ ಖರ್ಗೆ ಅವರಿಗೆ ನೋಟಿಸ್ ಜಾರಿ ಮಾಡಿದೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಮೋದಿ ವಿರುದ್ಧ ‘ಮೋದಿ ಭಯೋತ್ಪಾದಕ’ ಎಂಬ ಪದ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಚುನಾವಣಾ ಆಯೋಗಕ್ಕೆ ಔಪಚಾರಿಕ ದೂರು ಸಲ್ಲಿಸಿತು.
ಬಿಜೆಪಿಯ ಹಿರಿಯ ನಾಯಕರುಗಳಾದ ನಿರ್ಮಲಾ ಸೀತಾರಾಮನ್, ಕಿರೇಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್ ಮತ್ತು ಅರುಣ್ ಸಿಂಗ್ ಅವರು ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಖರ್ಗೆ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿಷಯ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಖರ್ಗೆ ಅವರಿಗೆ ನೋಟಿಸ್ ನೀಡಿ, 24 ಗಂಟೆಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಇದಕ್ಕೂ ಮುನ್ನ, ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ತಾವು ಪ್ರಧಾನಿ ಮೋದಿಯನ್ನು ನೇರವಾಗಿ “ಭಯೋತ್ಪಾದಕ” ಎಂದು ಕರೆಯಲಿಲ್ಲ ಎಂದು ತಿಳಿಸಿದ್ದಾರೆ. ತಮ್ಮ ಮಾತಿನ ಅರ್ಥವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ. ಮೋದಿಯವರ ರಾಜಕೀಯ ಶೈಲಿಯನ್ನು ಟೀಕಿಸುವ ಸಂದರ್ಭದಲ್ಲಿ “ಜನರನ್ನು ಭಯಪಡಿಸುವ ರಾಜಕೀಯ” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾಗಿ ಖರ್ಗೆ ಸ್ಪಷ್ಟಪಡಿಸಿದ್ದಾರೆ.
