ಬೆಂಗಳೂರು: ಕಲ್ಯಾಣ ಕರ್ನಾಟಕದ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾದ ಗುಡುಗು ಸಹಿತ ಮಳೆಯ ಆರ್ಭಟಕ್ಕೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ಜೋಗಿಕಲ್ಲು ನಿವಾಸಿ ಅಕ್ಷತಾ (18) ಬುಧವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ದೌಲತ್‌ಪುರದಲ್ಲಿ ಗಾಳಿಯ ಹೊಡೆತಕ್ಕೆ ಒಂದು ಎಕರೆ ಬಾಳೆ ತೋಟ ನಾಶವಾಗಿದೆ. ತೆಕ್ಕಲಕೋಟೆ ಪಟ್ಟಣದಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ.
ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸಮೀಪದ ಯಾರಜಂತಿ ಗ್ರಾಮದಲ್ಲಿ 40 ವರ್ಷದ ದುರ್ಗಮ್ಮ ಸಾಬಯ್ಯ ಎಂಬ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೇವಿನ ರಾಶಿಗಳಿಗೆ ಟಾರ್ಪಾಲಿನ್ ಹೊದಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮುಂಬೈ ಕರ್ನಾಟಕದ ಹಲವು ಭಾಗಗಳಲ್ಲಿಯೂ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಅವಳಿ ನಗರದ ಜನತೆಗೆ ಕೊಂಚ ಆರಾಮ ಸಿಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಬುಧವಾರ ನಸುಕಿನ ಜಾವ ಮಳೆಯಾಗಿದೆ. ಅತ್ತಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಕಾಂಪೌಂಡ್ ಗೋಡೆ ಕುಸಿದು ಪಾರ್ಕ್ ಮಾಡಿದ್ದ ಐದು ಕಾರುಗಳು ಜಖಂಗೊಂಡಿವೆ. ರಥಬೀದಿಯ ಚಮ್ಮಾರ ಗಲ್ಲಿಯಲ್ಲಿ ಅರಳಿ ಮರ ಬಿದ್ದು ಎರಡು ಮನೆಗಳ ಹೆಂಚಿನ ಮೇಲ್ಛಾವಣಿ ಹಾನಿಗೊಳಗಾಗಿದೆ. ಅದೃಷ್ಟವಶಾತ್, ಮನೆಯಲ್ಲಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ತಾಲೂಕಿನಲ್ಲಿಯೂ ಎರಡು ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೊಪ್ಪಳದಲ್ಲಿ ಗರಿಷ್ಠ 42.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಬಿಸಿಲಿನ ಝಳ ಮುಂದುವರಿದಿದೆ. ಬುಧವಾರ ರಾಜ್ಯದಲ್ಲೇ ಗರಿಷ್ಠ ತಾಪಮಾನ ಕೊಪ್ಪಳದಲ್ಲಿ 42.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿಯಲ್ಲಿ 40.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಯಚೂರು, ಬಳ್ಳಾರಿ ಮತ್ತು ಬೀದರ್‌ನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದೆ.
