Home ರಾಜ್ಯ ತುಮಕೂರು ತುಮಕೂರು: ಕಾಂಗ್ರೆಸ್ ಭವನಕ್ಕೆ ಅಗ್ಗದ ದರದಲ್ಲಿ 2 ಎಕರೆ ಭೂಮಿ ಮಂಜೂರು – ಸರ್ಕಾರಕ್ಕೆ ಹೈಕೋರ್ಟ್...

ತುಮಕೂರು: ಕಾಂಗ್ರೆಸ್ ಭವನಕ್ಕೆ ಅಗ್ಗದ ದರದಲ್ಲಿ 2 ಎಕರೆ ಭೂಮಿ ಮಂಜೂರು – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

0

ಬೆಂಗಳೂರು: ತುಮಕೂರಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಾರುಕಟ್ಟೆ ಮಾರ್ಗಸೂಚಿ ದರದ ಕೇವಲ ಶೇ. 5ರಷ್ಟು ಬೆಲೆಗೆ ಎರಡು ಎಕರೆ ಭೂಮಿ ಮಂಜೂರು ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ತುಮಕೂರು ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರೂ ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ತುಮಕೂರು ನಗರ ಪಾಲಿಕೆಗೂ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ. ತುಮಕೂರಿನ ಉದ್ಯಮಿ ಎನ್.ಎನ್. ಗೋಪಾಲಕೃಷ್ಣ ಈ ಪಿಐಎಲ್ ದಾಖಲಿಸಿದ್ದಾರೆ.

ಅರ್ಜಿದಾರರ ಆರೋಪಗಳೇನು?

ಮರಳೂರು ಗ್ರಾಮದ ಸರ್ವೆ ನಂ. 87/1 ಮತ್ತು 87/2ರಲ್ಲಿರುವ ತಲಾ ಎರಡು ಎಕರೆ ಭೂಮಿಯನ್ನು 1942ರಲ್ಲಿ ಮೈಸೂರು ಮಹಾರಾಜರು ತುಮಕೂರು ಪುರಸಭೆಯ ಬಳಕೆಗೆಂದು ಮೀಸಲಿಟ್ಟಿದ್ದರು. 2023ರ ಜುಲೈ 11ರಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಕಾಂಗ್ರೆಸ್ ಪಕ್ಷದ ಕೆಲವು ಪದಾಧಿಕಾರಿಗಳು ‘ರಾಜೀವ್ ಗಾಂಧಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟನ್ನು ನೋಂದಾಯಿಸಿದ್ದರು.

ಟ್ರಸ್ಟ್ ಒಂದು ಎಕರೆ ಭೂಮಿಗೆ ಮನವಿ ಸಲ್ಲಿಸಿತ್ತು. ಆದರೆ, ಸರ್ಕಾರ ಅದಕ್ಕಿಂತ ಭಿನ್ನವಾಗಿ, ಅರ್ಜಿ ಸಲ್ಲಿಸಿದ ಟ್ರಸ್ಟ್‌ಗೆ ಬದಲಾಗಿ ‘ಕಾಂಗ್ರೆಸ್ ಭವನ ಟ್ರಸ್ಟ್’ಗೆ ಎರಡು ಎಕರೆ ಭೂಮಿಯನ್ನು ಮಾರ್ಗಸೂಚಿ ದರದ ಕೇವಲ ಶೇ. 5ರಷ್ಟು ಬೆಲೆಗೆ ಮಂಜೂರು ಮಾಡಲು 2025ರ ಮೇ 22ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು.

ಕಾನೂನು ತೊಡಕುಗಳು:

ಸಂಪುಟದ ನಿರ್ಧಾರದಂತೆ 2025ರ ಮೇ 27ರಂದು ಸರ್ಕಾರಿ ಆದೇಶ ಹೊರಡಿಸಲಾಯಿತು. ಆದರೆ, ದಾಖಲೆಗಳ ಪ್ರಕಾರ ‘ಕಾಂಗ್ರೆಸ್ ಭವನ ಟ್ರಸ್ಟ್’ ಅಸ್ತಿತ್ವಕ್ಕೆ ಬಂದಿದ್ದೇ 2025ರ ಆಗಸ್ಟ್ 8ರಂದು. ಸಂಪುಟ ಅನುಮೋದನೆ ನೀಡಿದ ಎರಡೂವರೆ ತಿಂಗಳ ನಂತರ ಟ್ರಸ್ಟ್ ನೋಂದಣಿಯಾಗಿದೆ. “1942ರಿಂದ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖಾಸಗಿ ಉದ್ದೇಶಕ್ಕೆ ನೀಡಿರುವುದು ಸರ್ಕಾರಕ್ಕೆ ಸುಮಾರು 22.60 ಕೋಟಿ ರೂಪಾಯಿ ನಷ್ಟ ಉಂಟುಮಾಡಿದೆ.

ಸಾರ್ವಜನಿಕ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ” ಎಂದು ಅರ್ಜಿದಾರರು ದೂರಿದ್ದು, ಸರ್ಕಾರಿ ಆದೇಶ ಮತ್ತು ಮಂಜೂರಾತಿ ಪತ್ರವನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.

You cannot copy content of this page

Exit mobile version