ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದು, ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಸಿ ಪಿ ಯೊಗೇಶ್ವರ ತನ್ನ ಬಲ ಪ್ರದರ್ಶನ ತೋರಿಸುವ ಸಲುವಾಗಿ ಚನ್ನಪಟ್ಟಣದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಿದ್ದರು. ಅವರು ತನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರಿಗಾಗಿ ಮಧ್ಯಾಹ್ನ ಶಿಶಿರ ಹೋಂ ಸ್ಟೇಯಲ್ಲಿ ಮಾಂಸಾಹಾರಿ ಔತಣವನ್ನು ಸಿದ್ಧಪಡಿಸಿದ್ದರು.
ಬೆಂಬಲಿಗರು ಮತ್ತು ಕಾರ್ಯಕರ್ತರು ಇನ್ನೇನು ರುಚಿಯಾದ ಊಟಕ್ಕೆ ಕೈಯಿಕ್ಕಬೇಕು ಎನ್ನುವ ಚುನಾವಣಾ ಅಧಿಕಾರಿಗಳು ದಾಳಿ ಮಾಡಿ ಕೈಗೆ ಬಂದ ತುತ್ತನ್ನು ಬಾಯಿಗೆ ಹೋಗದಂತೆ ಮಾಡಿದ್ದಾರೆ.
ಉಪಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಬಿನೋಯ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 500ಕ್ಕೂ ಹೆಚ್ಚು ಜನರಿಗೆ ಸಿದ್ಧವಾಗಿದ್ದ ಬಾಡೂಟವನ್ನು ಸೀಜ್ ಮಾಡಿದ್ದಾರೆ. ಈ ಮೂಲಕ ಚುನಾವಣಾಧಿಕಾರಿಗಳು ಯೋಗೇಶ್ವರ್ ಗೆ ಶಾಕ್ ನೀಡಿದ್ದಾರೆ.
ಈ ನಡುವೆ ಜೆಡಿಎಸ್ – ಬಿಜೆಪಿ ಮಧ್ಯೆ ಟಿಕೆಟ್ ಗೊಂದಲ ಮುಂದುವರೆದಿದ್ದು, ಸಿಪಿ ಯೋಗೇಶ್ವರ್ ಪಕ್ಷ ಟಿಕೆಟ್ ನೀಡದೆ ಹೋದರೆ ಸ್ವತಂತ್ರ ಅಭ್ಯರ್ಥಿಯಾಗಿಯಾದರೂ ಚುನಾವಣೆ ಸ್ಪರ್ಧಿಸಿಯೇ ಸಿದ್ಧ ಎನ್ನುತ್ತಿದ್ದಾರೆ.