Home ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ಡಿಸೆಂಬರ್‌ನಲ್ಲಿ ಚುನಾವಣೆ 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ಡಿಸೆಂಬರ್‌ನಲ್ಲಿ ಚುನಾವಣೆ 

0

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ಡಿಸೆಂಬರ್‌ನಲ್ಲಿ ಚುನಾವಣೆ (Election) ನಡೆಯುವ ಸಾಧ್ಯತೆಯಿದ್ದು, ಆಕಾಂಕ್ಷಿಗಳ ನಡುವೆ ಈಗಾಗಲೇ ಸ್ಪರ್ಧೆ ಬಿರುಸಾಗಿದೆ. ಚುನಾವಣಾ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಪ್ರಮುಖ ಅಭ್ಯರ್ಥಿಗಳು (Candidates) ಈಗಿನಿಂದಲೇ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪ್ರಸ್ತುತ ಕಸಾಪ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ನವೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದ್ದು, ವರ್ಷಾಂತ್ಯದಲ್ಲೇ ಮತದಾನ ನಡೆಯುವ ನಿರೀಕ್ಷೆಯಿದೆ. ಪರಿಷತ್ತಿನ ಬೈಲಾ ತಿದ್ದುಪಡಿಯ ನಂತರ ಅಧಿಕಾರಾವಧಿಯನ್ನು ಮೂರರಿಂದ ಐದು ವರ್ಷಕ್ಕೆ ವಿಸ್ತರಿಸಲಾಗಿದ್ದು, ಇದು ವಿಸ್ಕೃತ ಅವಧಿಯ ನಂತರ ನಡೆಯುತ್ತಿರುವ ಎರಡನೇ ಚುನಾವಣೆಯಾಗಿದೆ. ಈ ಬಾರಿಯ ಚುನಾವಣೆಗೆ ಹಿರಿಯ ಐಎಎಸ್ ಅಧಿಕಾರಿ ಎ.ಬಿ. ಬಸವರಾಜು ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಸಾಪದ ಕೇಂದ್ರ ಸಮಿತಿಯ ಜೊತೆಗೆ 31 ಜಿಲ್ಲಾ ಹಾಗೂ 6 ಗಡಿನಾಡು ಘಟಕಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಅಧ್ಯಕ್ಷೀಯ ಪಟ್ಟಕ್ಕಾಗಿ ಈ ಬಾರಿ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಸಾಹಿತ್ಯ ಪರಿಷತ್ತಿನ ಪುನರುಜ್ಜಿವನ ಹಾಗೂ ಉನ್ನತ ಸ್ಥಾನಕ್ಕೆ ಮಹಿಳಾ ಪ್ರಾತಿನಿಧ್ಯದ ಆಶಯದೊಂದಿಗೆ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ. ಅವರೊಂದಿಗೆ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಹಾಗೂ ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರು ಪ್ರಮುಖ ಆಕಾಂಕ್ಷಿಗಳಾಗಿ ಮುಂಚೂಣಿಯಲ್ಲಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಸಾಪ ಸದಸ್ಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಪ್ರಸ್ತುತ ಪರಿಷತ್ತಿನ ಸದಸ್ಯರ ಸಂಖ್ಯೆ 4.35 ಲಕ್ಷಕ್ಕೆ ತಲುಪಿದೆ. ಆದರೆ ನಿಯಮಗಳ ಪ್ರಕಾರ ಚುನಾವಣೆ ಘೋಷಣೆಯಾದ ದಿನದಿಂದ ಮೂರು ವರ್ಷಗಳ ಮುಂಚಿತವಾಗಿ ಸದಸ್ಯತ್ವ ಪಡೆದವರಿಗೆ ಮಾತ್ರ ಮತದಾನದ ಹಕ್ಕಿರುತ್ತದೆ. ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಕರಡು ಪಟ್ಟಿ ಸಿದ್ಧಗೊಂಡ ನಂತರ ಸುಮಾರು 3.45 ಲಕ್ಷದಿಂದ 3.50 ಲಕ್ಷ ಸದಸ್ಯರು ಅಂತಿಮವಾಗಿ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ಆಡಳಿತಾಧಿಕಾರಿ ಕೆ.ಎ. ದಯಾನಂದ್ ತಿಳಿಸಿದ್ದಾರೆ. 2021ರ ಚುನಾವಣೆಯಲ್ಲಿ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 3.10 ಲಕ್ಷ ಮತದಾರರಿದ್ದರು. ಈ ಬಾರಿ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಚುನಾವಣಾ ಕಣ ಮತ್ತಷ್ಟು ಕಾವು ಪಡೆದುಕೊಂಡಿದೆ.

You cannot copy content of this page

Exit mobile version