Home ಬೆಂಗಳೂರು ಕೆರೆ ಒತ್ತುವರಿ ಮಾಡಿದರೆ ನಿಮ್ಮ ಮೇಲೆ ಬೀಳುತ್ತೆ ಕ್ರಿಮಿನಲ್ ಕೇಸ್ – ಈಶ್ವರ್ ಖಂಡ್ರೆ

ಕೆರೆ ಒತ್ತುವರಿ ಮಾಡಿದರೆ ನಿಮ್ಮ ಮೇಲೆ ಬೀಳುತ್ತೆ ಕ್ರಿಮಿನಲ್ ಕೇಸ್ – ಈಶ್ವರ್ ಖಂಡ್ರೆ

0

ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಒತ್ತುವರಿ ಮಾಡಿದ್ದರೆ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಇನ್ನು ಮುಂದೆ ಹೊಸದಾಗಿ ಕೆರೆ ಒತ್ತುವರಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 32,504 ಕೆರೆಗಳಿದ್ದು, ಈ ಪೈಕಿ 11,498 ಕೆರೆಗಳು ಒತ್ತುವರಿಗೆ ಒಳಗಾಗಿದ್ದವು. ಈಗಾಗಲೇ 6,670 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 4,828 ಕೆರೆಗಳಿಗೆ ಸೇರಿದ 11,671 ಎಕರೆ ಒತ್ತುವರಿ ತೆರವುಗೊಳಿಸಬೇಕಿದೆ ಎಂದು ತಿಳಿಸಿದರು.

ಉಳಿದ ಕೆರೆಗಳ ಒತ್ತುವರಿ ತೆರವು ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಗಳನ್ನು ಹೊಸದಾಗಿ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಅಂತರ್ಜಲ ಕುಸಿತ ಗಂಭೀರ ಸಮಸ್ಯೆ:

ರಾಜ್ಯದ ಹಲವು ಭಾಗಗಳಲ್ಲಿ ಭೂಮಿಯೊಳಗೆ ಹೆಬ್ಬಂಡೆ ಮತ್ತು ಲ್ಯಾಟರೈಟ್ ಪದರಗಳಿರುವುದರಿಂದ ಮಳೆನೀರು ಸಮರ್ಪಕವಾಗಿ ಇಂಗದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರ ಜೊತೆಗೆ ಅಂತರ್ಜಲದ ಅತಿಯಾದ ಬಳಕೆಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಖಂಡ್ರೆ ಹೇಳಿದರು.

ಮುಂದಿನ ದಿನಗಳಲ್ಲಿ ಕೆರೆ, ಕಟ್ಟೆ, ಸರೋವರ ಮತ್ತು ನದಿಗಳಂತಹ ಮೇಲ್ಮೈ ಜಲಮೂಲಗಳ ಸಂರಕ್ಷಣೆ ಅತ್ಯಂತ ಅಗತ್ಯ. ಅವುಗಳನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಜಲಮೂಲಗಳ ಸಂರಕ್ಷಣೆಗೆ ರಾಷ್ಟ್ರೀಯ ಯೋಜನೆಗೆ ಒತ್ತಾಯ:

ದೆಹಲಿಯಲ್ಲಿ ಜಲಶಕ್ತಿ ಸಚಿವಾಲಯ ಆಯೋಜಿಸಿದ್ದ ಎರಡು ದಿನಗಳ ಸುಸ್ಥಿರ ಜಲ ಕುರಿತ ಶೃಂಗಸಭೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ ಖಂಡ್ರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕರ್ನಾಟಕದಲ್ಲಿ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿರುವುದಾಗಿ ಹೇಳಿದರು.

ಕೆರೆ, ಸರೋವರ ಮತ್ತು ನದಿಗಳು ತ್ಯಾಜ್ಯದಿಂದ ಕಲುಷಿತಗೊಳ್ಳದಂತೆ ಹಾಗೂ ಒತ್ತುವರಿಯಾಗದಂತೆ ಸಂರಕ್ಷಿಸಲು ರಾಷ್ಟ್ರಮಟ್ಟದಲ್ಲಿ ಸಮಗ್ರ ಯೋಜನೆ ರೂಪಿಸಬೇಕು ಎಂದು ಶೃಂಗಸಭೆಯಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.

You cannot copy content of this page

Exit mobile version