ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮನಿರ್ದೇಶನದ ಮೂಲಕ ಮೂವರ ಹೆಸರನ್ನು ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಗೆ ರವಾನಿಸಿದ ಹಿನ್ನೆಲೆಯಲ್ಲಿ, ಉಮಾಶ್ರೀ ಸೇರಿದಂತೆ ಮೂವರ ಹೆಸರಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ ಹಾಗೂ ಸಮಾಜಸೇವೆ ಕೋಟಾದಡಿ ನಿವೃತ್ತ ಇ.ಡಿ. ಅಧಿಕಾರಿ ಸುಧಾಮ ದಾಸ್ ಅವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಪಕ್ಷ ಹೆಸರನ್ನು ಅಂತಿಮಗೊಳಿಸಿತ್ತು.
ಉಮಾಶ್ರೀ ಹೊರತಾಗಿ ಎಂ.ಆರ್.ಸೀತಾರಾಮ್ ಹಾಗೂ ಸುಧಾಮದಾಸ್ ಅವರ ಆಯ್ಕೆಗೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳೇ ಇವರಿಬ್ಬರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿ, ಹೈಕಮಾಂಡ್ ಗೆ ಪತ್ರ ಕೂಡಾ ಬರೆದಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಸಚಿವರಾದ ಕೆ.ಹೆಚ್.ಮುನಿಯಪ್ಪ ಹಾಗೂ ಹೆಚ್.ಸಿ.ಮಹದೇವಪ್ಪ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರ ಕಡೆಯಿಂದಲೂ ಎಂ.ಆರ್.ಸೀತಾರಾಮ್ ಹಾಗೂ ಸುಧಾಮದಾಸ್ ಅವರ ಹೆಸರು ಅಂತಿಮಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು ಇವರಿಬ್ಬರ ಹೆಸರನ್ನು ಅಂಗೀಕರಿಸಿದ್ದಾರೆ.
ಹೀಗಾಗಿ ವಿಧಾನಪರಿಷತ್ ನ ನಾಮ ನಿರ್ದೇಶಿಸಿತ ಸದಸ್ಯರಾಗಿ ಮಾಜಿ ಸಚಿವೆ ಉಮಾಶ್ರೀ, ಎಂ ಆರ್ ಸೀತಾರಾಮ್ ಹಾಗೂ ಸುಧಾಮ್ ದಾಸ್ ಆಯ್ಕೆಯಾದಂತೆ ಆಗಿದೆ.