ಭಾರತದ ಅಸಲಿ ಬಾಸ್ ಅಂಬಾನಿನಾ? — ಎಲಾನ್ ಮಸ್ಕ್ ಕಿಡಿ; ಆರೋಪ ತಳ್ಳಿಹಾಕಿದ ಕೇಂದ್ರ ಸರ್ಕಾರ!

“ಸ್ಟಾರ್‌ಲಿಂಕ್‌ಗೆ ವಿಶ್ವದ 165 ದೇಶಗಳಲ್ಲಿ ಪರವಾನಗಿ ಇದೆ. ಕಳೆದ ಐದು ವರ್ಷಗಳಿಂದ ಭಾರತ ಸರ್ಕಾರದ ಪ್ರತಿಯೊಂದು ಕಾನೂನು ಮತ್ತು ನಿಬಂಧನೆಗಳನ್ನು ನಾವು ಚಾಚೂತಪ್ಪದೆ ಪಾಲಿಸುತ್ತಿದ್ದೇವೆ. ಹೀಗಿದ್ದರೂ ನಮಗೆ ಭಾರತದಲ್ಲಿ ಏಕೆ ಲೈಸೆನ್ಸ್ ನೀಡುತ್ತಿಲ್ಲ? ಭಾರತದ ನಿಜವಾದ ಬಾಸ್ ಅಂಬಾನಿನಾ?” ಎಂದು ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸ್ಥಳೀಯ ಉದ್ಯಮಿಗಳ ಏಕಸ್ವಾಮ್ಯ ಹಾಗೂ ವ್ಯಾಪಾರ ಹಿತಾಸಕ್ತಿಗಳನ್ನು ಕಾಪಾಡಲು ತಮ್ಮ ಸ್ಯಾಟಲೈಟ್ ಇಂಟರ್ನೆಟ್ ಸೇವೆಗೆ ಬೇಕೆಂದೇ ಅಡ್ಡಿಪಡಿಸಲಾಗುತ್ತಿದೆ ಎಂದು ‘ಎಕ್ಸ್’ (ಟ್ವಿಟರ್) ವೇದಿಕೆಯಲ್ಲಿ ಮಸ್ಕ್ ಸರಣಿ ಪೋಸ್ಟ್ ಮಾಡಿದ್ದಾರೆ. ಭಾರತೀಯರ ಮೇಲೆ ತಮ್ಮ ಹಿಡಿತ ಉಳಿಸಿಕೊಳ್ಳಲು ಕೆಲವೇ ಕೆಲವು ಶ್ರೀಮಂತರು ಪ್ರಯತ್ನಿಸುತ್ತಿದ್ದು, ಇದು ಭಾರತದ ಜನರಿಗೆ ಬಗೆಯುತ್ತಿರುವ ದ್ರೋಹ ಎಂದು ಆಪಾದಿಸಿದ್ದಾರೆ.

ಕೇಂದ್ರ ಸರ್ಕಾರದ ತಿರುಗೇಟು:

ಎಲಾನ್ ಮಸ್ಕ್ ಅವರ ಈ ಆರೋಪಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ (DoT) ಸಂಪೂರ್ಣವಾಗಿ ತಳ್ಳಿಹಾಕಿದೆ. ದೇಶದ ಸ್ಯಾಟಲೈಟ್ ಕಮ್ಯುನಿಕೇಷನ್ ನಿಯಮಗಳು ಅತ್ಯಂತ ಪಾರದರ್ಶಕವಾಗಿದ್ದು, ಯಾರೊಬ್ಬರ ಪರವಾಗಿಯೂ ತಾರತಮ್ಯ ಎಸಗುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ನಾನ್-ಜಿಯೋಸಿಂಕ್ರೋನಸ್ ಆರ್ಬಿಟ್ (NGSO) ವಿಭಾಗದಲ್ಲಿ ಈಗಾಗಲೇ ಮೂರು ಸಂಸ್ಥೆಗಳಿಗೆ ತಾತ್ವಿಕ ಅನುಮತಿ ನೀಡಲಾಗಿದೆ. ಆದರೆ ರಾಷ್ಟ್ರೀಯ ಭದ್ರತೆ, ಬಳಕೆದಾರರ ಸುರಕ್ಷತೆ ಮತ್ತು ಡಾಟಾ ರಕ್ಷಣೆಯ ಮಾನದಂಡಗಳನ್ನು ಪ್ರತಿಯೊಂದು ಸಂಸ್ಥೆಯೂ ಕಡ್ಡಾಯವಾಗಿ ಪೂರೈಸಬೇಕಿದೆ. ಪ್ರಸ್ತುತ ಎಲ್ಲಾ ಮೂರು ಸಂಸ್ಥೆಗಳ ಭದ್ರತಾ ಪರಿಶೀಲನೆಗಳು ಕೇಂದ್ರ ಗೃಹ ಸಚಿವಾಲಯದ ಹಂತದಲ್ಲಿದ್ದು, ಯಾರೊಬ್ಬರಿಗೂ ವಿಶೇಷ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಪ್ರತ್ಯುತ್ತರ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು