ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಬಾಲಕಿಯನ್ನು ಅಪಹರಿಸಿ ಅತ್ಯಾಚಾರ, ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್ ಎಂಬ ಹೆಸರಿನವ ಎಂದು ಆತನ ಆಧಾರ್ ಕಾರ್ಡ್ ಪರಿಶೀಲನೆ ನಂತರ ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದರು. ಬಿಹಾರ ಮೂಲದ ರಿತೇಶ್ ಕುಮಾರ್ ಇರುವ ಜಾಗ ಪತ್ತೆಯಾಗಿತ್ತು. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದರು.
ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ಬಾಲಕಿ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದು ಹೊರೆಗೆ ಮಗು ಆಟವಾಡುತ್ತಿತ್ತು. ಇದನ್ನು ಗಮನಿಸಿದ ರಿತೇಶ್ ಕುಮಾರ್ ಚಾಕಲೇಟ್ ಕೊಡುವ ಆಸೆ ತೋರಿಸಿ ಬಾಲಕಿಯನ್ನು ಅಪಹರಿಸಿದ್ದ.
ಆರೋಪಿ ರಿತೇಶ್ ಕುಮಾರ್ ಬಿಹಾರದ ಪಾಟ್ನಾ ಮೂಲದವನು. ಕಳೆದ ಕೆಲವು ವರ್ಷಗಳಿಂದ ಈತ ಮನೆಯಿಂದ ಹೊರಗಡೆ ಇದ್ದು, ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿಕೊಂಡು ಇದೀಗ ಹುಬ್ಬಳ್ಳಿಗೆ ಕಳೆದ 2-3 ತಿಂಗಳ ಹಿಂದೆ ಬಂದಿರುವುದಾಗಿ ತಿಳಿಸಿದ್ದಾನೆ. ಇನ್ನು ವಾಸ ಎಲ್ಲಿ ಎಂದು ಕೇಳಿದಾಗ ತಾರಿಹಾಳ್ ಬ್ರಿಡ್ಜ್ ಕೆಳಗೆ ಎಂದು ಹೇಳಿದ್ದ.
ವಿಚಾರಣೆ ವೇಳೆ ಕೆಲವೇ ಕೆಲವು ಮಾಹಿತಿ ತಿಳಿಸಿದ ಈತ ಪೊಲೀಸರಿಗೆ ಸ್ಪಂದಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ತಾರಿಹಾಳ ಬಳಿ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ.
ಅಶೋಕನಗರದ ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಆತನ ಕಾಲಿಗೆ ಹಾಗೂ ಬೆನ್ನಿಗೆ ಗುಂಡು ತಗುಲಿದೆ’ ಎಂದು ಘಟನೆ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಗಾಯಗೊಂಡಿದ್ದ ಅವನನ್ನು ತಕ್ಷಣ ಕೆಎಂಸಿ-ಆರ್‌ಐ ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲಿ ಮೃತಪಟ್ಟಿದ್ದ. ಪೊಲೀಸ್ ಸಿಬ್ಬಂದಿ ಯಶವಂತ ಮೊರಬ ಮತ್ತು ವೀರೇಶ ಅವರೂ ಘಟನೆಯಲ್ಲಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.