ಮೊದಲೆ ಹಿಂಸೆಕೊಟ್ಟು ನದಿಗೆ ಎಸೆದಿರುವ ಶಂಕೆವ್ಯಕ್ತಪಡಿಸಿದ ತಂದೆ, ಸಂಬಂಧಿಕರು
ಹಾಸನ: ಆಗಾಗ್ಗೆ ಕುಟುಂಬದಲ್ಲಿ ನಡೆಯುತ್ತಿದ್ದ ಕಲಹ ಹಿನ್ನಲೆಯಲ್ಲಿ ಬೇಸೆತ್ತ ಇಂಜಿನಿಯರ್ ಓರ್ವರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶೆಟ್ಟಿಹಳ್ಳಿ ಬಳಿ ಮೂರು ದಿಗಳ ಹಿಂದೆ ನಡೆದು ಬುಧವಾರದಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೊದಲೇ ನನ್ನ ಮಗನಿಗೆ ಹಿಂಸೆ ಕೊಟ್ಟು ನದಿಗೆ ಎಸೆಯಲಾಗಿದೆ ಎಂದು ಮೃತರ ತಂದೆ ಮತ್ತು ಸಂಬಂಧಿಕರು ಇದೆ ವೇಳೆ ಆರೋಪಿಸಿದ್ದಾರೆ.
ನಗರದ ಇಂದಿರಾನಗರ ಬಡಾವಣೆ ನಿವಾಸಿ .ಜಿ.ಜೆ. ಪ್ರಮೋದ್ (೩೫) ಎಂಬುವರೇ ಶೆಟ್ಟಿಹಳ್ಳಿ ಬಳಿಯ ಸೇತುವೆಯಿಂದ ನದಿಗೆ ಹಾರಿ ಮೃತಪಟ್ಟಿರುವುದು ಎಂದು ತಿಳಿದು ಬಂದಿದೆ. ಡಿಸೆಂಬರ್ .೨೯ ರಂದು ಪ್ರಮೋದ್ ಮನೆಯಲ್ಲಿಯೇ ಮೊಬೈಲ್ ಫೋನ್ ಬಿಟ್ಟು ಹೊರ ಹೋಗಿದ್ದರು. ತಡ ರಾತ್ರಿಯಾದರೂ ಮನೆಗೆ ವಾಪಸು ಬಾರದ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಕರೆ ಮಾಡಿ ವಿಚಾರಿಸಿ ಹುಡುಕಾಟ ನಡೆಸಿದರೂ ಮಾಹಿತಿ ಸಿಗದ ಕಾರಣ ಕಾಣೆಯಾಗಿದ್ದ ಹುಡುಗನ ಪೋಷಕರು ಗಾಬರಿಯಿಂದ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲು ಮಾಡಿದ್ದು, ಮೂರು ದಿನದ ನಂತರ ಹೇಮಾವತಿ ನದಿಯ ಸೇತುವೆ ಬಳಿ ಪ್ರಮೋದ್ ಅವರ ಟಿವಿಎಸ್ ಜ್ಯುಪಿಟರ್ (೩. ಏಂ-೧೩-ಇಅ-೩೭೯೧) ವಾಹನ ಕಂಡು ಬಂದಿದ್ದು, ಸ್ಥಳೀಯರು ಇದನ್ನು ನೋಡಿ ಡ್ಯಾಶ್ ಬೋರ್ಡ್ ನಲ್ಲಿದ್ದ ಪಾಸ್‌ಬುಕ್‌ಗಳ ವಿವರ ಪರಿಶೀಲಿಸಿ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕಾಣೆಯಾದ ಪ್ರಮೋದ್ ಶವದ ಹುಡುಕಾಟಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಡಿಸೆಂಬರ್ ೩೦ ರಿಂದಲೇ ಹುಡುಕಾಟ ನಡೆಸಿದ್ದರು. ಜನವರಿ ೧ ರಂದು ಬೆಳಿಗ್ಗಿನ ಸಮಯದಲ್ಲಿ ಪ್ರಮೋದು ಅವರ ಶವವು ನದಿಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವಿಚಾರವಾಗಿ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದೆ ವೇಳೆ ಶವಗಾರದ ಬಳಿ ಬಂದ ಆತನ ಹೆಂಡತಿ ನಂದಿನಿಯನ್ನು ಕಂಡ ಹುಡುಗನ ಸಂಬಂಧಿಕರ ಜೊತೆ ವಾಗ್ವಾದ ಉಂಟಾಗಿ ಎಳೆದಾಡುವ ವೇಳೆ ಪೊಲೀಸರು ತಡೆದು ಆಕೆಯನ್ನು ಆಟೋದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟ ಘಟನೆ ನಡೆಯಿತು. ಈ ವೇಳೆ ನನಗೆ ನನ್ನ ಗಂಡ ಪ್ರಮೋದ್ ಕಿರುಕುಳ ನೀಡುತ್ತಿದ್ದ ಎಂದು ಹೇಳುತ್ತಿದ್ದುದು ಕೇಳಿ ಬಂದಿತು.
ಆತ್ಮಹತ್ಯೆ ಮಾಡಿಕೊಂಡ ಪ್ರಮೋದ್ ಅವರ ತಂದೆ ಜಗದೀಶ್ ಮಾಧ್ಯಮದೊಂದಿಗೆ ಮಾತನಾಡಿ, ನನ್ನ ಮಗ ಬಿಇ ಮಾಡಿ ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದರು. ನಾವು ಮದುವೆ ಮಾಡಿ ಏಳು ವರ್ಷಗಳಾಗಿದ್ದು, ಅಂದಿನಿಂದ ನಮ್ಮ ಮನೆಗೆ ಸೊಸೆ ಬಂದಿರುವುದಿಲ್ಲ. ಆದರೂ ಕೂಡ ನನ್ನ ಮಗ ಮರ್ಯಾದಿಗೆ ಅಂಜುಕೊಂಡು ಮನೆಯಲ್ಲಿ ನಡೆಯುವ ಕಲಹದ ಬಗ್ಗೆ ಏನು ಹೇಳಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಮಗನಿಗೆ ಹೊಡೆದು ಖಾಲಿ ಪೇಪರ್ ಗೆ ಸಹಿ ಹಾಕಿಸಿಕೊಂಡು ಬಂದಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಾಗ ಖಾಲಿ ಪೇಪರ್ ತಂದುಕೊಡುವಂತೆ ಪೊಲೀಸರು ಹೇಳಿದರೂ ಕೂಡ ಕೊಡಲಿಲ್ಲ. ನಂತರ ತಂದುಕೊಡಲಾಯಿತು. ನಂತರ ರಾಜೀ ಮಾತುಕತೆ ನಡೆಸಿ ಹೊಂದಾಣಿಕೆಯಿಂದ ಹೋಗಲು ಬುದ್ದಿವಾದ ಹೇಳೀ ಕಳುಹಿಸಲಾಯಿತು. ನನಗೆ ಪಾನಿಪುರಿ ಕೊಡಿಸಲ್ಲ, ನನಗೆ ತಿಂಡಿ ತಿನಿಸುವುದಿಲ್ಲ ಎಂದು ದೂರು ನೀಡಲಾಗಿತ್ತು. ಕಳೆದ ೮ ತಿಂಗಳ ಹಿ ನನ್ನ ಮಗನಿಗೆ ಹೆಂಡತಿ ಕಡೆಯವರು ಥಳಿಸಿದ್ದಾರೆ ಎಂದು ಮೊಬೈಲ್ ನಲ್ಲಿ ಇದ್ದ ಪೋಟೊ ಪ್ರದರ್ಶಿಸಿ ದೂರಿದರು. ನನ್ನ ಮಗನ ಹೆಂಡತಿ ಶೋಕಿ ಮಾಡಿ ತಿರುಗಬೇಕು ಇಷ್ಟೆ ಅವಳದು. ಜೊತೆಗೆ ನನ್ನ ಮಗನ ಸಂಬಂಧಿಕರ ಜೊತೆ ಯಾರು ಮಾತನಾಡಬಾರದು. ಮಗನ ನೋಡಲು ಮನೆಗೆ ಅಪ್ಪ ಅಮ್ಮ ನೋಡುವಾಗಿಲ್ಲ. ನನ್ನ ಮಗನಿಗೆ ಕಿರುಕುಳ ಕೊಟ್ಟು ಈ ಸಾವಿಗೆ ಅವರೆ ಕಾರಣರು ಎಂದು ಗಂಭೀರವಾಗಿ ಆರೋಪಿಸಿದರು. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಇಲ್ಲವೇ ಹೊಡೆದು ನದಿಗೆ ಎಸೆದಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದರು.