ನಾಡಿನ ಎಲ್ಲ ಪುಣ್ಯಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಇತ್ಯಾದಿ ಮಾರಾಟ ಮಾಡದಂತೆ ಹಾಗೂ ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜಿಸದಂತೆ ನಿರ್ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚೆಗಷ್ಟೆ ಹಾಸನ ಜಿಲ್ಲೆಯ ಸಕಲೇಶಪುರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಚಿವರು ಧರ್ಮಸ್ಥಳದ ನೇತ್ರಾವತಿ ನದಿಯ ಸ್ನಾನಘಟ್ಟದ ಬಳಿ ಇದ್ದ ಸೋಪು, ಶ್ಯಾಂಪೂ ಪ್ಯಾಕೇಟ್‌ಗಳು ಹಾಗೂ ಬಟ್ಟೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಸಕಲೇಶಪುರ ಬಳಿಯ ಮೂರುಕಣ್ಣು ಗುಡ್ಡದಲ್ಲಿ ರೆಸಾರ್ಟ್‌ಗಳು, ಹೋಂ ಸ್ಟೇಗಳ ನೀರು ನದಿ ಸೇರುತ್ತಿರುವ ಬಗ್ಗೆ ಮಾಹಿತಿ ಪಡೆದು ಆತಂಕ ವ್ಯಕ್ತಪಡಿಸಿದ್ದರು.
ನದಿ ನೀರಿನ ತಪಾಸಣೆಗೂ ಚಿಂತನೆ
ರೆಸಾರ್ಟ್‌ಗಳ ಶೌಚಾಲಯದ ನೀರೂ ನದಿ ಸೇರುತ್ತಿರುವುದರಿಂದ ಪ್ರಸ್ತುತ ಸಂಸ್ಕರಿಸಿಯಾದರೂ ಕುಡಿಯಲು ಯೋಗ್ಯವಾಗಿರುವ ನೀರು ಇನ್ನು ಮುಂದೆ ಸ್ನಾನಕ್ಕೂ ಯೋಗ್ಯವಾಗಿರುವುದೋ ಇಲ್ಲವೋ ಎಂಬ ಆತಂಕವನ್ನೂ ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ. ಜತೆಗೆ ನದಿ ನೀರಿನ ಮಾದರಿಗಳನ್ನು ಪಡೆದು ತಪಾಸಣೆ ಮಾಡಿ ವರದಿ ಸಲ್ಲಿಸುವಂತೆಯೂ ಮೌಖೀಕ ಆದೇಶ ನೀಡಿದ್ದಾರೆ.