ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಗಂಗಾ ನದಿಯ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಲುಷಿತ ಗಂಗೆಯಲ್ಲಿ ಯಾರು ಸ್ನಾನ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ತಾನು ಆ ನದಿಯಲ್ಲಿ ಸ್ನಾನ ಮಾಡುವುದಿಲ್ಲ ಎಂದ ಅವರು, ಜನರು ಮೂಢನಂಬಿಕೆಗಳಿಂದ ಹೊರಬರಬೇಕೆಂದು ಕರೆ ನೀಡಿದರು. ಮಾರ್ಚ್ 8ರಂದು ಪಕ್ಷದ 19ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ರಾಜ್ ಠಾಕ್ರೆ ಮಾತನಾಡಿದರು.
ಪಕ್ಷದ ನಾಯಕ ಬಾಳ್ ನಂದಗಾಂವ್ಕರ್ ಅವರು ಇತ್ತೀಚೆಗೆ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಿಂದ ಪವಿತ್ರ ಗಂಗಾ ನೀರನ್ನು ತಂದಿರುವುದಾಗಿ ಹೇಳಿದರು. ನಾನು ಆ ನೀರನ್ನು ಕುಡಿಯಲಿಲ್ಲ. “ಕರೋನಾದಿಂದಾಗಿ ಜನರು ಎರಡು ವರ್ಷಗಳ ಕಾಲ ಮಾಸ್ಕ್ ಧರಿಸಿದ್ದರು. ಅವರೇ ಈಗ ಅಲ್ಲಿಗೆ ಹೋಗಿ ಸ್ನಾನ ಮಾಡುತ್ತಿದ್ದಾರೆ. ಆ ಗಂಗೆಯಲ್ಲಿ ಯಾರು ಪವಿತ್ರ ಸ್ನಾನ ಮಾಡುತ್ತಾರೆ?” ಎಂದು ಅವರು ಕೇಳಿದರು.
ಯಾವ ನಂಬಿಕೆಗೂ ಒಂದಷ್ಟು ಅರ್ಥವಿರಬೇಕು ಎಂದು ರಾಜ್ ಠಾಕ್ರೆ ಹೇಳಿದರು. ‘ನದಿಗಳನ್ನು ತಾಯಿಗೆ ಹೋಲಿಸುವ ನಮ್ಮ ದೇಶದ ಯಾವ ನದಿಯೂ ಶುದ್ಧವಾಗಿಲ್ಲ. ಆದರೆ ವಿದೇಶಗಳಲ್ಲಿ ನದಿಯನ್ನು ತಾಯಿ ಎಂದು ಕರೆಯುವುದಿಲ್ಲ. ಆದರೆ ಅಲ್ಲಿನ ನದಿಗಳು ಸಂಪೂರ್ಣವಾಗಿ ಸ್ವಚ್ಛವಾಗಿರುತ್ತದೆ. ನಮ್ಮ ಎಲ್ಲಾ ನದಿಗಳು ಕಲುಷಿತಗೊಂಡಿವೆ. ಅಲ್ಲೇ ಸ್ನಾನ ಮಾಡುತ್ತಾರೆ, ಅಲ್ಲೇ ಬಟ್ಟೆ ಒಗೆಯುತ್ತಾರೆ” ಎಂದು ಅವರು ಟೀಕಿಸಿದರು.
ಮತ್ತೊಂದೆಡೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕಾಲದಿಂದಲೂ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಬಗ್ಗೆ ಮಾತು ಕೇಳಿ ಬರುತ್ತಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಆದರೆ, ದುರದೃಷ್ಟವಶಾತ್ ಅದು ಆಗುತ್ತಿಲ್ಲ ಎಂದು ಅವರು ಟೀಕಿಸಿದರು. “ಜನರು ಈ ನಂಬಿಕೆ ಮತ್ತು ಮೂಢನಂಬಿಕೆಯಿಂದ ಹೊರಬರಬೇಕು. ಅವರು ತಮ್ಮ ಬುದ್ಧಿಯನ್ನು ಸರಿಯಾಗಿ ಬಳಸಬೇಕು” ಎಂದು ಅವರು ಹೇಳಿದರು.