Home ದೇಶ ಇಥನಾಲ್ ಮಿಶ್ರಣ ನೀತಿ ಯಾರ ಹಿತಾಸಕ್ತಿಗೆ?: ಆಹಾರ ಭದ್ರತೆ, ಪರಿಸರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು

ಇಥನಾಲ್ ಮಿಶ್ರಣ ನೀತಿ ಯಾರ ಹಿತಾಸಕ್ತಿಗೆ?: ಆಹಾರ ಭದ್ರತೆ, ಪರಿಸರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು

0

ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಲು, ಕಚ್ಚಾ ತೈಲ ಆಮದನ್ನು ನಿಯಂತ್ರಿಸಲು ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಇಥನಾಲ್-20’ (E-20) ಮಿಶ್ರಣ ನೀತಿಯು ಜನಸಾಮಾನ್ಯರ ಮೇಲೆ, ವಿಶೇಷವಾಗಿ ಬಡವರ ಮೇಲೆ ತೀವ್ರ ಹೊರೆಯಾಗಿ ಪರಿಣಮಿಸುತ್ತಿದೆ. ‘ಇಂಧನ ಭದ್ರತೆ’ ಮತ್ತು ‘ರಾಷ್ಟ್ರೀಯ ಹಿತಾಸಕ್ತಿ’ಯ ಹೆಸರಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಯಿಂದ ಪರಿಸರ, ಆಹಾರ ಭದ್ರತೆ ಮತ್ತು ಆರ್ಥಿಕತೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬ ಗಂಭೀರ ಆಕ್ಷೇಪಗಳು ವ್ಯಕ್ತವಾಗಿವೆ.

ಇಥನಾಲ್ ಉತ್ಪಾದನೆಗೆ ಆಹಾರ ಧಾನ್ಯಗಳ ಬಳಕೆ, ಕೃಷಿ ಭೂಮಿ ಮತ್ತು ಅಂತರ್ಜಲದ ಮೇಲಿನ ಒತ್ತಡ ಹಾಗೂ ವಾಹನಗಳ ಎಂಜಿನ್ ಮೇಲಿನ ಪರಿಣಾಮಗಳು ಪ್ರಮುಖ ಸವಾಲುಗಳಾಗಿವೆ. ಇಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಶೇ. 20 ರಷ್ಟು ಕಡಿಮೆಯಾಗುತ್ತಿದ್ದು, ಎಂಜಿನ್ ಮತ್ತು ಪೈಪ್‌ಗಳು ತುಕ್ಕು ಹಿಡಿಯುತ್ತಿವೆ ಎಂಬ ದೂರುಗಳಿವೆ. ಮಾರುಕಟ್ಟೆಯಲ್ಲಿ ಖಾಸಗಿ ಇಥನಾಲ್ ಉತ್ಪಾದಕರು ಲಾಭ ಗಳಿಸುತ್ತಿದ್ದರೆ, ಸರ್ಕಾರಿ ತೈಲ ಕಂಪನಿಗಳು ಮಾರುಕಟ್ಟೆ ಅಪಾಯಗಳನ್ನು ಭರಿಸುತ್ತಿವೆ; ಅಂತಿಮವಾಗಿ ಸಾಮಾಜಿಕ ಮತ್ತು ಪರಿಸರ ನಷ್ಟವನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ.

ದೇಶದಲ್ಲಿ ಇಥನಾಲ್ ಗುರಿಯನ್ನು ತಲುಪಲು ಸುಮಾರು 80 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಅಗತ್ಯವಿದ್ದು, ಅರಣ್ಯ ಪ್ರದೇಶಗಳ ಮೇಲೆಯೂ ಇದು ಒತ್ತಡ ತರಲಿದೆ. ಅಧಿಕ ಇಳುವರಿಗಾಗಿ ಅತಿಯಾದ ರಸಗೊಬ್ಬರ ಮತ್ತು ಅಂತರ್ಜಲ ಬಳಕೆಯಿಂದ ಪರಿಸರಕ್ಕೆ ಭಾರೀ ಹಾನಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 2025-26ರಲ್ಲಿ ಸರ್ಕಾರಿ ತೈಲ ಕಂಪನಿಗಳು ₹49,577 ಕೋಟಿ ವೆಚ್ಚದಲ್ಲಿ 705.43 ಕೋಟಿ ಲೀಟರ್ ಇಥನಾಲ್ ಖರೀದಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು ₹1.72 ಲಕ್ಷ ಕೋಟಿಗೂ ಅಧಿಕ ಹಣ ವ್ಯಯಿಸಲಾಗಿದೆ.

ಭಾರತೀಯ ಆಹಾರ ನಿಗಮವು (FCI) ರೈತರಿಂದ ಕೆಜಿಗೆ ₹44 ರಂತೆ ಖರೀದಿಸಿದ ಅಕ್ಕಿಯನ್ನು ಇಥನಾಲ್ ಡಿಸ್ಟಿಲರಿಗಳಿಗೆ ಕೆಜಿಗೆ ₹23 ರಂತೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಆಹಾರ ಭದ್ರತೆಗಾಗಿ ಮೀಸಲಿಟ್ಟ ಸಾರ್ವಜನಿಕ ಹಣವು ವಾಹನಗಳ ಇಂಧನ ಸಬ್ಸಿಡಿಯಾಗಿ ಪೋಲಾಗುತ್ತಿದೆ. ಅಲ್ಲದೆ ಮೆಕ್ಕೆಜೋಳವನ್ನು ಇಥನಾಲ್‌ಗೆ ಬಳಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ ಎದುರಾಗುವ ಆತಂಕ ಎದುರಾಗಿದೆ.

You cannot copy content of this page

Exit mobile version