ಇಥನಾಲ್ ಪೆಟ್ರೋಲ್ ಎಫೆಕ್ಟ್: ಗಗನಕ್ಕೇರಿದ ಕೋಳಿ ಮೊಟ್ಟೆ ಬೆಲೆ

ದೆಹಲಿ: ಇಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಪರಿಣಾಮವಾಗಿ ಈಗಾಗಲೇ ಸಕ್ಕರೆ ಬೆಲೆ ಏರಿಕೆಯಾಗಿದ್ದು, ಇದೀಗ ಕೋಳಿ ಮೊಟ್ಟೆಯ ಬೆಲೆಯೂ ಗಗನಕ್ಕೇರಿದೆ.

ಪ್ರಸ್ತುತ ಫಾರ್ಮ್‌ಗೇಟ್‌ನಲ್ಲಿ ಒಂದು ಮೊಟ್ಟೆಯ ಬೆಲೆ ₹7 ರಷ್ಟಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹8.50 ರಿಂದ ₹9 ರವರೆಗೆ ಮಾರಾಟವಾಗುತ್ತಿದೆ. ಅಂದರೆ ಮೊಟ್ಟೆಯ ಬೆಲೆಯಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಮುಂಬರುವ ಚಳಿಗಾಲದಲ್ಲಿ ಮೊಟ್ಟೆಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದ್ದು, ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಒದಗಿಸುವ ಮೊಟ್ಟೆಯ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇಥನಾಲ್ ಉತ್ಪಾದನೆಗೆ ಕಬ್ಬಿನ ಜೊತೆಗೆ ಮೆಕ್ಕೆಜೋಳವನ್ನೂ (ಜೋಳ) ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮೆಕ್ಕೆಜೋಳ ಬಳಕೆಯಲ್ಲಿ ಭಾರಿ ಹೆಚ್ಚಳ:

ತಜ್ಞರ ಪ್ರಕಾರ, ಕೋಳಿಗಳ ಆಹಾರದಲ್ಲಿ (ಪೌಲ್ಟ್ರಿ ಫೀಡ್) ಶೇ. 50 ರಿಂದ 55ರಷ್ಟು ಮೆಕ್ಕೆಜೋಳ ಮತ್ತು ಉಳಿದ ಭಾಗ ಸೋಯಾಬೀನ್ ಬಳಸಲಾಗುತ್ತದೆ. ಆದರೆ ಪೌಲ್ಟ್ರಿ ಉದ್ಯಮಕ್ಕೆ ಬಳಕೆಯಾಗುತ್ತಿದ್ದ ಮೆಕ್ಕೆಜೋಳವನ್ನು ಇಥನಾಲ್ ಉತ್ಪಾದನಾ ಘಟಕಗಳಿಗೆ ದೊಡ್ಡ ಪ್ರಮಾಣದಲ್ಲಿ ತಿರುಗಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅದರ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಕೋಳಿ ಆಹಾರದ ಬೆಲೆ ಹೆಚ್ಚಾದ ಪರಿಣಾಮವಾಗಿ ಮೊಟ್ಟೆಯ ಬೆಲೆಯೂ ದುಬಾರಿಯಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯ್ ಬಂಭಾನಿಯಾ ಅವರು 2025ರಲ್ಲಿ ಲೋಕಸಭೆಗೆ ನೀಡಿದ ಮಾಹಿತಿಯ ಪ್ರಕಾರ, 2024-25ರಲ್ಲಿ ಇಥನಾಲ್ ಉತ್ಪಾದನೆಗಾಗಿ 125.75 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಬಳಸಲಾಗಿತ್ತು. ಕೇವಲ ಎರಡು ವರ್ಷಗಳಲ್ಲಿ ಇಥನಾಲ್ ತಯಾರಿಕೆಗಾಗಿ ಮೆಕ್ಕೆಜೋಳದ ಬಳಕೆ 8.3 ಲಕ್ಷ ಟನ್‌ಗಳಿಂದ 125.75 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಅಲ್ಲದೆ, 2025-26ನೇ ಸಾಲಿಗೆ ಕೂಡ ಇಥನಾಲ್ ಉತ್ಪಾದನೆಗಾಗಿ 125.78 ಲಕ್ಷ ಟನ್ ಮೆಕ್ಕೆಜೋಳವನ್ನು ನಿಗದಿಪಡಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು