Home ಅಂಕಣ ದಿಡೀರ್ ಅಂತ ಅವರನ್ನು ಒಕ್ಕಲೆಬ್ಬಿಸೋದು, ಆ ಕುಟುಂಬಗಳ ಹೊಟ್ಟೆ ಮೇಲೆ ಹೊಡೆದ ಹಾಗೆ..

ದಿಡೀರ್ ಅಂತ ಅವರನ್ನು ಒಕ್ಕಲೆಬ್ಬಿಸೋದು, ಆ ಕುಟುಂಬಗಳ ಹೊಟ್ಟೆ ಮೇಲೆ ಹೊಡೆದ ಹಾಗೆ..

0

“..ತಲೆಮಾರುಗಳಿಂದ ವ್ಯಾಪಾರ ಮಾಡ್ಕೊಂಡು ಸ್ವಾವಲಂಬಿಯಾಗಿ ಬದುಕುತ್ತಿರೋ ಇಂಥ ಬಡ ಜನರನ್ನು ಯಾವುದೇ ಪ್ಲಾನ್ ಇಲ್ಲದೆ ರಸ್ತೆಯಿಂದ ಎತ್ತಿಹಾಕಿದ್ರೆ, ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತವೆ..” ಕುಂತಾಡಿ ನಿತೇಶ್ ಅವರ ಬರಹದಲ್ಲಿ

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ತಂದಿರೋ ಈ “Safe Footpath Campaign” ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ನೋಡಿದ್ರೆ ಒಳ್ಳೆಯದು ಅಂತ ಕಂಡರೂ ಅದರ ಪರಿಣಾಮ ಅಶ್ಟಕ್ಕೇ ಸೀಮಿತವಾಗಿಲ್ಲ. ವರ್ಷಾನುಗಟ್ಟಲೆಯಿಂದ ಅದೇ ಫುಟ್‌ಪಾತ್‌ ನಂಬಿ ಬದುಕುತ್ತಿರೋ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡದೆ, ದಿಢೀರ್ ಅಂತ ಅವರನ್ನ ಒಕ್ಕಲೆಬ್ಬಿಸೋದು ಆ ಕುಟುಂಬಗಳ ಹೊಟ್ಟೆಮೇಲೆ ಹೊಡೆದ ಹಾಗೆ.

ನಮ್ಮ ನಗರದ ರಸ್ತೆಗಳು ಬರೀ ಸಿಂಗಾರಕ್ಕಷ್ಟೇ ಅಲ್ಲ, ಇಲ್ಲಿರೋ ಪ್ರತಿಯೊಬ್ಬ ನಾಗರಿಕನ ಬದುಕಿಗೂ ಆಸರೆಯಾಗಬೇಕು. ತಲೆಮಾರುಗಳಿಂದ ವ್ಯಾಪಾರ ಮಾಡ್ಕೊಂಡು ಸ್ವಾವಲಂಬಿಯಾಗಿ ಬದುಕುತ್ತಿರೋ ಇಂಥ ಬಡ ಜನರನ್ನು ಯಾವುದೇ ಪ್ಲಾನ್ ಇಲ್ಲದೆ ರಸ್ತೆಯಿಂದ ಎತ್ತಿಹಾಕಿದ್ರೆ, ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತವೆ. ನಮ್ಮ ವ್ಯವಸ್ಥೆಯಲ್ಲಿ ಅವರಿಗೆ ಬೇರೆ ಉದ್ಯೋಗ ಸಿಗೋದು ಸುಲಭದ ಮಾತಲ್ಲ. ಹೀಗಿದ್ದಾಗ, ಪರ್ಯಾಯ ಜಾಗ ಕೊಡದೆ ಇವರನ್ನ ಓಡಿಸೋದು ಎಷ್ಟು ಮಟ್ಟಿಗೆ ನ್ಯಾಯ?

ಅಮೆರಿಕ, ಯುರೋಪ್ ತರಹದ ಶ್ರೀಮಂತ ದೇಶಗಳ “ಕ್ಲೀನ್ ಸ್ಟ್ರೀಟ್ಸ್” ಮಾಡೆಲ್ ಅನ್ನು ತಂದು ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಮತ್ತು ಬಡತನ ಇರೋ ದೇಶಕ್ಕೆ ಹಾಗೇ ಅಪ್ಲೈ ಮಾಡೋಕೆ ಆಗಲ್ಲ. ಆ ದೇಶಗಳಲ್ಲಿ ಕೆಲಸ ಇಲ್ಲದವರಿಗೆ ಸರ್ಕಾರದಿಂದ ನಿರುದ್ಯೋಗ ಭತ್ಯೆ, ಸೋಶಿಯಲ್ ಸೆಕ್ಯೂರಿಟಿ ತರಹದ ಸೌಲಭ್ಯಗಳಿರುತ್ತವೆ. ಆದ್ರೆ ನಮ್ಮ ಭಾರತದಲ್ಲಿ ಪರಿಸ್ಥಿತಿಯೇ ಬೇರೆ. ಇಲ್ಲಿರೋ ಕೋಟ್ಯಂತರ ಜನ ಬಡತನದಿಂದ ಬದುಕಲು ಕಂಡುಕೊಂಡಿರೋ ಏಕೈಕ ದಾರಿ ಅಂದ್ರೆ ಈ ಇನ್‌ಫಾರ್ಮಲ್ ಸೆಕ್ಟರ್ ಅಥವಾ ಬೀದಿ ಬದಿ ವ್ಯಾಪಾರ.

ಇವರ್ಯಾರೂ ರಸ್ತೆ ಬ್ಲಾಕ್ ಮಾಡಬೇಕು ಅನ್ನೋ ಹಠಕ್ಕೆ ಇಲ್ಲಿ ಕೂತಿಲ್ಲ, ಬದುಕೋಕೆ ಬೇರೆ ದಾರಿ ಇಲ್ಲದೆ ಕೂತಿದ್ದಾರೆ. ನಮ್ಮ ಸಿಟಿ ಪ್ಲಾನಿಂಗ್ ಮಾಡುವಾಗಲೇ ಈ ಬಡ ಕಾರ್ಮಿಕರನ್ನು ಗಣನೆಗೆ ತಗೊಳ್ಳದೆ ಇರೋದು ಇಷ್ಟೆಲ್ಲಾ ಸಮಸ್ಯೆಗೆ ಕಾರಣ. ಅದಕ್ಕೆ ಒಕ್ಕಲೆಬ್ಬಿಸಲು ಬಂದಿರೋ ಸರ್ಕಾರದ ಪ್ರತಿನಿಧಿ ಕೃಷ್ಣೇ ಬೈರೇಗೌಡರನ್ನ ನಾವು ತರಾಟೆಗೆ ತೆಗೆದುಕೊಳ್ಳಬೇಕು . ಸರ್ಕಾರವನ್ನು ಅಕೌಂಟೆಬಲ್ ಮಾಡಬೇಕು.

(Street vendors do not occupy sidewalks with the intention of causing inconvenience, they do so because city planning has historically failed to integrate informal labor into the urban fabric.) ಇವರಿಗೆ ಒಂದು ಸರಿಯಾದ “ವೆಂಡಿಂಗ್ ಝೋನ್” ಮಾಡಿಕೊಡದೆ ಇವರ ಹೊಟ್ಟೆಪಾಡನ್ನ ಕಿತ್ಕೊಂಡ್ರೆ, ಅದು ಬಡವರ ಶ್ರಮಕ್ಕೆ ಮಾಡೋ ಅಪಮಾನ. ಅಷ್ಟೇ ಅಲ್ಲ, ಇವರಿಂದಾಗಿ ಸಿಟಿಯಲ್ಲಿರೋ ಸಾಮಾನ್ಯ ಜನರಿಗೂ ಕಡಿಮೆ ಬೆಲೆಯಲ್ಲಿ ದಿನಸಿ, ತರಕಾರಿ ಸಿಗ್ತಿದೆ ಅನ್ನೋದನ್ನ ನಾವು ಮರೆಯಬಾರದು.

ಇಂತಹ ಡ್ರೈವ್‌ಗಳು ಬಡವರ ಕಲ್ಯಾಣಕ್ಕಿಂತ ಹೆಚ್ಚಾಗಿ, ಶ್ರೀಮಂತ ಮತ್ತು ಮೇಲ್ ಮಧ್ಯಮ ವರ್ಗದವರನ್ನು ಖುಷಿಪಡಿಸೋ ಪ್ರದರ್ಶನಾತ್ಮಕ ರಾಜಕಾರಣದ ಭಾಗ ಅಷ್ಟೇ. ನಗರದ ನಿಜವಾದ ಟ್ರಾಫಿಕ್ ಸಮಸ್ಯೆಗಳಾದ ಅವೈಜ್ಞಾನಿಕ ರಸ್ತೆ ವಿನ್ಯಾಸಗಳು, ಬಿಲ್ಡರ್‌ಗಳು ಮತ್ತು ದೊಡ್ಡ ಕಾರ್ಪೊರೇಟ್‌ಗಳು ಮಾಡಿರುವ ಬೃಹತ್ ಒತ್ತುವರಿಗಳು ಹಾಗೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನು ಮುಟ್ಟೋಕೆ ಹೋದ್ರೆ ಸರ್ಕಾರ ಹಿಂದೆ-ಮುಂದೆ ಯೋಚನೆ ಮಾಡುತ್ತೆ. ಯಾಕಂದ್ರೆ ಆ ಹೈ-ಫೈ ವರ್ಗವನ್ನು ಎದುರು ಹಾಕಿಕೊಳ್ಳುವುದು ರಾಜಕೀಯವಾಗಿ ಕಷ್ಟ.

ಆದ್ರೆ, ತಮಗೆ ಯಾವುದೇ ಧ್ವನಿ ಇಲ್ಲದ, ಕಾನೂನು ಹೋರಾಟ ಮಾಡಲು ಶಕ್ತಿ ಇಲ್ಲದ ಬೀದಿ ಬದಿ ವ್ಯಾಪಾರಿಗಳನ್ನ ಟಾರ್ಗೆಟ್ ಮಾಡೋದು ಸರ್ಕಾರಕ್ಕೆ ತುಂಬಾ ಈಸಿ. ನಗರವು ಕಣ್ಣಿಗೆ “ಕ್ಲೀನ್” ಆಗಿ ಕಾಣಬೇಕು, ದೊಡ್ಡ ಕಾರುಗಳಲ್ಲಿ ಓಡಾಡುವವರಿಗೆ ರಸ್ತೆಗಳು ಫ್ಯಾನ್ಸಿಯಾಗಿ ಕಾಣಿಸಬೇಕು ಅನ್ನೋ ಒಂದೇ ಕಾರಣಕ್ಕೆ ಇಂತಹ ಕ್ರಮಗಳನ್ನು ನಾವು ಸಮರ್ಥಿಸಿಕೊಂಡು ಇರೋದು ನನಗೆ ಅಸಹ್ಹ್ಯ ಅನ್ನಿಸುತ್ತೆ. ಇಂತಹ ತೋರ್ಪಡಿಕೆಯ ನಿರ್ಧಾರಗಳು ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಅದರಿಂದ ಯಾವುದೇ ರೀತಿಯ constructive ಬದಲಾವಣೆ ಕೂಡ ಸಾಧ್ಯವಿಲ್ಲ.

ನಿಜವಾದ ಪ್ರಗತಿಪರ ಸಿಟಿ ಪ್ಲಾನಿಂಗ್ ಅಂದ್ರೆ ಪಾದಚಾರಿಗಳ ರಕ್ಷಣೆ ಹೆಸರಲ್ಲಿ ವ್ಯಾಪಾರಿಗಳ ಬದುಕನ್ನು ನಾಶ ಮಾಡೋದಲ್ಲ, ಎರಡನ್ನೂ ಬ್ಯಾಲೆನ್ಸ್ ಮಾಡೋದು. ನಮಗೆ ವಾಕಿಂಗ್ ಮಾಡೋಕೆ ಜಾಗನೂ ಬೇಕು, ಬಡವರು ಬದುಕೋಕೆ ದಾರಿನೂ ಬೇಕು. ದಿಢೀರ್ ಅಂತ ಕ್ಲಿಯರ್ ಮಾಡೋ ಬದಲು, ಸರ್ಕಾರ 2014ರ “ಬೀದಿ ಬದಿ ವ್ಯಾಪಾರಿಗಳ ಕಾಯ್ದೆ”ಯನ್ನು ಸರಿಯಾಗಿ ಜಾರಿಗೆ ತರಬೇಕು. ಮೊದಲು ಎಲ್ಲರ ಸರ್ವೆ ನಡೆಸಿ, ಅವರಿಗೆ ವೆಂಡಿಂಗ್ ಸರ್ಟಿಫಿಕೇಟ್ ಕೊಟ್ಟು, “ಟೌನ್ ವೆಂಡಿಂಗ್ ಕಮಿಟಿ”ಗಳ ಮೂಲಕ ವ್ಯವಸ್ಥಿತವಾದ ಜಾಗ ಮಾಡಿಕೊಡಬೇಕು.

ಬಡವರನ್ನು ಸೈಡಿಗೆ ತಳ್ಳಿ ರೋಡ್ ಕ್ಲೀನ್ ಮಾಡೋದ್ರಲ್ಲಿ ಏನ್ನನ್ನೂ ಸಾಧಿಸಿದಂತಲ್ಲ. ಬದಲಾಗಿ, ಪಾದಚಾರಿಗಳಿಗೂ ತೊಂದರೆಯಾಗದಂತೆ, ವ್ಯಾಪಾರಿಗಳಿಗೂ ಜಾಗ ಸಿಗುವಂತೆ ಫುಟ್‌ಪಾತ್‌ಗಳನ್ನು ಅಗಲಗೊಳಿಸಿ ಮ್ಯಾನೇಜ್ ಮಾಡೋದೇ ನಿಜವಾದ ಪರಿಹಾರ. ಬೆಂಗಳೂರು ಎಷ್ಟು ಸುಂದರವಾಗಿದೆ ಅನ್ನೋದರ ಜೊತೆಗೆ, ಇಲ್ಲಿನ ಅತ್ಯಂತ ಬಡ ಪ್ರಜೆ ಎಷ್ಟು ನೆಮ್ಮದಿಯಿಂದ ಬದುಕುತ್ತಿದ್ದಾನೆ ಅನ್ನೋದರ ಮೇಲೆ ನಮ್ಮ ಸಿಟಿಯ ಯೋಗ್ಯತೆ ನಿರ್ಧಾರ ಆಗುತ್ತೆ ಅಲ್ಲವಾ?

You cannot copy content of this page

Exit mobile version