Home ರಾಜ್ಯ ದಕ್ಷಿಣ ಕನ್ನಡ ತಾಯಿಯ ಅಗಲಿಕೆಯಲ್ಲೆ ಪರೀಕ್ಷೆ ಬರೆದಿದ್ದ ದಿಶಾ ಇಂದು ರಾಜ್ಯಕ್ಕೆ ರ‍್ಯಾಂಕ್​​​​​​​

ತಾಯಿಯ ಅಗಲಿಕೆಯಲ್ಲೆ ಪರೀಕ್ಷೆ ಬರೆದಿದ್ದ ದಿಶಾ ಇಂದು ರಾಜ್ಯಕ್ಕೆ ರ‍್ಯಾಂಕ್​​​​​​​

ದಕ್ಷಿಣ ಕನ್ನಡ : ಕರ್ನಾಟಕ ದ್ವಿತೀಯ ಪಿಯುಸಿ (PUC Result) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳ ಸತತ ಪರಿಶ್ರಮದ ಫಲ ಸಿಕ್ಕಿದೆ. ಈ ಬಾರಿ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಆದರೆ ಈ ಅಮೋಘ ಸಾಧನೆಯ ಹಿಂದೆ ನೋವಿನ ಕಥೆಯೊಂದಿದೆ.

 ತಾಯಿ ಕಳೆದುಕೊಂಡ ನೋವಿನಲ್ಲೂ ಪರೀಕ್ಷೆ ಬರೆದಿದ್ದ ದಿಶಾ

 ಪರೀಕ್ಷೆ ನಡೆಯುತ್ತಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡ ದಿಶಾ, ಅತೀವ ದುಃಖದ ನಡುವೆಯೂ ಧೃತಿಗೆಡದೆ ಪರೀಕ್ಷೆ ಬರೆದು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಮೂರು ಪರೀಕ್ಷೆಗಳು ಮುಗಿದ ಬೆನ್ನಲ್ಲೇ ದಿಶಾ ಅವರ ತಾಯಿ ಆಕಸ್ಮಿಕವಾಗಿ ನಿಧನರಾಗಿದ್ದರು. ತಾಯಿಯ ಅಗಲಿಕೆಯಿಂದ ಕಂಗಾಲಾಗಿದ್ದ ದಿಶಾಗೆ ಉಳಿದ ಮೂರು ಪರೀಕ್ಷೆಗಳನ್ನು ಎದುರಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ತನ್ನ ಮಗಳು ದೊಡ್ಡ ಸಾಧನೆ ಮಾಡಬೇಕು ಎಂಬ ತಾಯಿಯ ಆಸೆಯನ್ನು ಈಡೇರಿಸಲು ನಿರ್ಧರಿಸಿದ ದಿಶಾ, ಕಣ್ಣೀರನ್ನು ಎದೆಯಲ್ಲೇ ಅದುಮಿಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹಾಜರಾದರು. ಈ ಕಷ್ಟದ ಸಮಯದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಆಕೆಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಿದ್ದರು.

ತಮ್ಮ ಸಾಧನೆಯ ಬಗ್ಗೆ ಮಾತನಾಡುತ್ತಾ ಭಾವುಕರಾದ ದಿಶಾ, “ಅಮ್ಮ ಯಾವಾಗಲೂ ನನಗೆ ಧೈರ್ಯ ಹೇಳುತ್ತಿದ್ದರು. ಕಷ್ಟಪಟ್ಟು ಓದಿದರೆ ಫಲ ಸಿಕ್ಕೇ ಸಿಗುತ್ತದೆ ಎನ್ನುತ್ತಿದ್ದರು. ಪರೀಕ್ಷೆಯ ಸಂದರ್ಭದಲ್ಲಿ ಅವರ ಮಾತುಗಳೇ ನನಗೆ ಶಕ್ತಿಯಾದವು. ಇಂದು ಅಮ್ಮ ಬದುಕಿದ್ದಿದ್ದರೆ ತುಂಬಾ ಸಂತೋಷಪಡುತ್ತಿದ್ದರು,” ಎಂದು ಕಣ್ಣೀರಿಟ್ಟಿದ್ದಾರೆ. ಮುಂದೆ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸು ಹೊಂದಿರುವ ದಿಶಾ, ಕೇವಲ ಗಂಟೆಗಟ್ಟಲೆ ಓದುವುದಕ್ಕಿಂತ ಓದಿದ್ದನ್ನು ಅರ್ಥೈಸಿಕೊಂಡು ಅಭ್ಯಾಸ ಮಾಡುವುದು ಮುಖ್ಯ ಎಂದು ಕಿವಿಮಾತು ಹೇಳಿದ್ದಾರೆ. ಅಸಾಧಾರಣ ಛಲದ ಮೂಲಕ ಗುರಿ ತಲುಪಿದ ದಿಶಾ ಅವರ ಸಾಧನೆ ಇಂದು ಎಲ್ಲರಿಗೂ ಮಾದರಿಯಾಗಿದೆ.

You cannot copy content of this page

Exit mobile version