ನವದೆಹಲಿ : ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಕ್ಕಳ ಕಳ್ಳಸಾಗಣೆ (Child Trafficking) ಜಾಲಗಳ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ರಾಜ್ಯಗಳ ಗೃಹ ಕಾರ್ಯದರ್ಶಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವ ನ್ಯಾಯಾಲಯ, ಕೂಡಲೇ ಸಂಘಟಿತ ಕ್ರಮಕ್ಕೆ ಮುಂದಾಗುವಂತೆ ನಿರ್ದೇಶನ ನೀಡಿದೆ.
ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ರಾಜ್ಯಗಳ ವಿಳಂಬ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿತು. ದೇಶಾದ್ಯಂತ ಮಕ್ಕಳ ಕಳ್ಳಸಾಗಣೆ ಜಾಲಗಳು ಸಕ್ರಿಯವಾಗಿವೆ. ನೀವು ಈಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋಗಲಿದೆ ಎಂದು ನ್ಯಾಯಪೀಠವು ಗಂಭೀರ ಎಚ್ಚರಿಕೆ ನೀಡಿದೆ.
ಮಕ್ಕಳ ಕಳ್ಳಸಾಗಣೆಯನ್ನು ಕೇವಲ ಸಾಮಾನ್ಯ ಅಪರಾಧವೆಂದು ಪರಿಗಣಿಸಬೇಡಿ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಇದನ್ನು ಬುಡ ಸಮೇತ ಕಿತ್ತೊಗೆಯಲು ರಾಜ್ಯ ಗೃಹ ಇಲಾಖೆಗಳು ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು, ಪೊಲೀಸ್ ಮತ್ತು ಇತರ ತನಿಖಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಉನ್ನತ ನ್ಯಾಯಾಲಯವಾಗಿ ನಾವು ಕೇವಲ ಮೇಲ್ವಿಚಾರಣೆ ಮಾಡಬಹುದು, ಆದರೆ ತಳಮಟ್ಟದಲ್ಲಿ ಕೆಲಸ ಮಾಡಬೇಕಾದವರು ನೀವೇ ಎಂದು ಪೀಠವು ಸ್ಪಷ್ಟಪಡಿಸಿದೆ. ಕಾಣೆಯಾದ ಮಕ್ಕಳ ಪತ್ತೆ ಮತ್ತು ಕಳ್ಳಸಾಗಣೆಯಾದ ಮಕ್ಕಳ ರಕ್ಷಣೆಯ ಬಗ್ಗೆ ನಿಖರವಾದ ದತ್ತಾಂಶ ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಮಕ್ಕಳ ಕಳ್ಳಸಾಗಣೆ ಕೇವಲ ಒಂದು ರಾಜ್ಯದ ಗಡಿಯೊಳಗೆ ಸೀಮಿತವಾಗಿಲ್ಲ. ಇದು ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕ್ರಿಮಿನಲ್ ಗ್ಯಾಂಗ್‌ಗಳ ಕೃತ್ಯವಾಗಿದೆ. ಆದ್ದರಿಂದ, ಗೃಹ ಕಾರ್ಯದರ್ಶಿಗಳು ಈ ವಿಷಯವನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಇತರ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ನ್ಯಾಯಾಲಯ ಹೇಳಿದೆ. ಈಗಾಗಲೇ ಹಲವು ರಾಜ್ಯಗಳು ಈ ವಿಷಯದಲ್ಲಿ ವರದಿ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ನಿಗದಿಪಡಿಸಿದೆ. ಅಷ್ಟರೊಳಗೆ ಕಳ್ಳಸಾಗಣೆ ತಡೆಗೆ ರೂಪಿಸಲಾಗಿರುವ ಕ್ರಿಯಾ ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುವಂತೆ ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಕೀತು ಮಾಡಿದೆ.
