Wednesday, September 4, 2024

ಸತ್ಯ | ನ್ಯಾಯ |ಧರ್ಮ

Fact Check: IC 814 ಸೀರಿಸ್‌ನಲ್ಲಿ ಕಂದಹಾರ್ ಉಗ್ರರಿಗೆ ಹಿಂದೂ ಹೆಸರೇ? ಸತ್ಯ ಏನು?

‘IC 814: ದಿ ಕಂದಹಾರ್ ಹೈಜಾಕ್’ (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.  ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು ‘ಭೋಲಾ’ ಮತ್ತು ‘ಶಂಕರ್’ ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.  

176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು ಹೊರಟಿತ್ತು. ಇದನ್ನು ಐವರು ಪಾಕಿಸ್ತಾನಿ ಉಗ್ರರು ಹೈಜಾಕ್ ಮಾಡಿದರು, ನಂತರ ಬೇರೆ ಬೇರೆ ಸ್ಥಳಗಳಲ್ಲಿ ವಿಮಾನವನ್ನು ಇಳಿಸಿ, ಕೊನೆಗೆ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿದರು. ಏಳು ದಿನಗಳ ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಅಪಹರಣಕಾರರ ಬೇಡಿಕೆಗಳನ್ನು ಭಾಗಶಃ ಒಪ್ಪಿಕೊಂಡಿತು. ಭಾರತದ ಜೈಲಿನಲ್ಲಿದ್ದ ಮೂವರು ಉಗ್ರರಾದ ಮೌಲಾನಾ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಗೊಳಿಸಿದರು. ಕೊನೆಗೆ ಅಪಹರಣಕಾರರು ಜನರನ್ನು ಬಿಡುಗಡೆ ಮಾಡಿದರು. ಈ ಘಟನೆಯನ್ನು ಆಧರಿಸಿ ‘IC 814: ದಿ ಕಂದಹಾರ್ ಹೈಜಾಕ್’ ವೆನ್‌ಸೀರಿಸ್‌ ಪ್ರಸಾರವಾಗಿದೆ. 

ಇದರಲ್ಲಿ ಅನುಭವ್ ಸಿನ್ಹಾ ಅವರು ವಿಮಾನ ಹೈಜಾಕ್‌ ಮಾಡಿದ ಉಗ್ರರನ್ನು ಭೋಲಾ ಮತ್ತು ಶಂಕರ್‌ ಎಂದು ಹೆಸರಿಸಿದ್ದಾರೆ. ಇದು ಉಗ್ರರನ್ನು ‘ವೈಟ್‌ವಾಶ್’‌ ಮಾಡುವ ತಂತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರೂ, ಗೋದಿ ಮಾಧ್ಯಮಗಳೂ ಪ್ರಚಾರ ಮಾಡಿವೆ.

ಕರ್ನಾಟಕದ News18 ಕನ್ನಡ ಎಂಬ ಮಾಧ್ಯಮ ಕೂಡ ಈ ಸುಳ್ಳನ್ನು ಹರಿಯಬಿಟ್ಟಿದೆ. ಪೋಸ್ಟ್‌ ಕಾರ್ಡ್‌ ಸೇರಿದಂತೆ ಕೋಮು ಪ್ರಚೋದಕ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳು ಈ ವಿಚಾರವನ್ನು ತಿರುಚಿ ದ್ವೇಷ ಹೊರಹಾಕಿವೆ.

ಸತ್ಯ ಏನು?

IC 814 ವಿಮಾನವನ್ನು ಅಪಹರಿಸಿದ ಕುರಿತು ಅನೇಕ ಸುದ್ದಿ ವರದಿಗಳನ್ನು ನಾವು Google ನಲ್ಲಿ ನೋಡಬಹುದು. ಇವೆಲ್ಲವೂ ಇಬ್ಬರು ಅಪಹರಣಕಾರರು ಭೋಲಾ ಮತ್ತು ಶಂಕರ್ ಎಂಬ ಕೋಡ್ ಅನ್ನು ಬಳಸಿರುವುದನ್ನು ವರದಿ ಮಾಡಿವೆ. ವಿಮಾನದಲ್ಲಿದ್ದ ಭೋಪಾಲ್‌ನ ದಂಪತಿಗಳ ಅನುಭವದ ಬಗ್ಗೆ ಟೈಮ್‌ ಆಫ್‌ ಇಂಡಿಯಾ ವರದಿಯೊಂದನ್ನು ಡಿಸೆಂಬರ್ 24, 2020 ರಂದು ಪ್ರಕಟಿಸಿದೆ. ಇದರಲ್ಲಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್…” ಎಂದು ಉಗ್ರರು ತಮ್ಮನ್ನು ತಾವು ಪರಸ್ಪರ ಕರೆಸಿಕೊಳ್ಳುತ್ತಿದ್ದರೆಂದೂ, ದುರ್ಗೇಶ್ ಮತ್ತು ರೇಣು ಗೋಯೆಲ್ ಎಂಬ ಈ ದಂಪತಿಗಳಿಗೆ ಅದೊಂದು ದುಸ್ವಪ್ನವಾಗಿ ಕಾಡುತ್ತಿದೆ ಎಂದು ವರದಿ ಹೇಳಿದೆ.

TOI ನ ವರದಿಯಲ್ಲಿ, ಭಯಾನಕತೆಯನ್ನು ವಿವರಿಸುತ್ತಾ, ಗೋಯೆಲ್, “ಭೋಲಾ ಮತ್ತು ಬರ್ಗರ್ ಪ್ರಯಾಣಿಕರನ್ನು ಹೊಡೆಯುತ್ತಿದ್ದರು, ಆದರೆ ಡಾಕ್ಟರ್ ಮತ್ತು ಚೀಫ್‌ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು,” ಎಂದು ಹೇಳಿದ್ದಾರೆ.

ನೇಪಾಳ ಟೈಮ್ಸ್‌ನ ಪತ್ರಿಕೆ ಡಿಸೆಂಬರ್ 31, 2019 ರಂದು ಪ್ರಕಟಿಸಿದ  Remembering  IC814 ಎಂಬ ವರದಿಯಲ್ಲಿ ಆ ವಿಮಾನದಲ್ಲಿದ್ದ ಸಂಜಯ್ ಧಿತಾಲ್, “ಐದು ಅಪಹರಣಕಾರರಲ್ಲಿ ಎಲ್ಲರಿಗೂ ಕೋಡ್ ನೇಮ್‌ಗಳು ಇದ್ದವು: ಮ್ಯಾನೇಜರ್, ಶಂಕರ್, ಭೋಲಾ, ಬರ್ಗರ್ ಮತ್ತು ಡಾಕ್ಟರ್,” ಎಂದು ಹೇಳಿರುವುದು ವರದಿಯಾಗಿದೆ.

ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ  ಮಾರ್ಚ್ 6, 2019 ರಂದು ಪ್ರಕಟವಾದ IC 814 hijack: How Jaish-e-Mohammed chief Masood Azhar’s brother planned Indian Airlines hijack in 1999 ಎಂಬ ವರದಿಯಲ್ಲಿ  ಪ್ರತಿಯೊಬ್ಬ ಅಪಹರಣಕಾರರು ಕೋಡ್ ಹೆಸರನ್ನು ಬಳಸಿರುವುದನ್ನು ಉಲ್ಲೇಖಿಸಲಾಗಿದೆ. 

ಕೋಡ್ ಹೆಸರುಗಳನ್ನು ಬಳಸಿರುವುದನ್ನು IC 814 ರ ಫ್ಲೈಟ್ ಎಂಜಿನಿಯರ್  ಅನಿಲ್ ಕೆ ಜಗ್ಗಿಯಾ ಕೂಡ ದೃಢೀಕರಿಸಿದ್ದಾರೆ  , ಅವರು 2021 ರಲ್ಲಿ ತಮ್ಮ ಅನುಭವವನ್ನು  IC 814 Hijacked: The Inside Story ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಎಲ್ಲಕ್ಕೂ ಮುಖ್ಯವಾಗಿ ಘಟನೆ ಮುಗಿದ ಒಂದು ವಾರದ ನಂತರ ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಅಪಹರಣಕಾರರು ಚೀಫ್‌, ಡಾಕ್ಟರ್‌, ಶಂಕರ್‌ ಮತ್ತು ಬೋಲಾ ಎಂದು ತಮ್ಮನ್ನು ತಾವು ಕರೆಸಿಕೊಳ್ಳುತ್ತಿದ್ದ ಬಗ್ಗೆ ಹೇಳಿದೆ.

ಹೈಜಾಕ್ ಸಮಸ್ಯೆ ಮುಗಿದ ನಂತರ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಆಗಿನ ಗೃಹ ಸಚಿವ ಎಲ್‌ ಕೆ ಅಡ್ವಾಣಿ ಅವರು ಐವರು ಅಪಹರಣಕಾರರನ್ನು ಬಹವಾಲ್‌ಪುರದ ಇಬ್ರಾಹಿಂ ಅಖ್ತರ್ ಅಲಿಯಾಸ್ ಅಥರ್, ಕರಾಚಿಯ ಡಿಫೆನ್ಸ್‌ ಏರಿಯಾದ ನಿವಾಸಿ ಸನ್ನಿ ಅಹ್ಮದ್ ಖಾಜಿ, ಕರಾಚಿಯ ಗುಲ್ಶನ್ ಅಖ್ತರ್ ಕಾಲೋನಿಯ ಮಿಸ್ತ್ರಿ ಜಹೂರ್ ಇಬ್ರಾಹಿಂ, ಸುಕ್ಕೂರ್ ನಗರದ ಶಾಕಿರ್ ಎಂದು ಗುರುತಿಸಿರುವುದಾಗಿ ಹೇಳಿದ್ದಾರೆ. ಮುಂದುವರಿದು, ಮೌಲಾನಾ ಅಜರ್‌ನ ಸಹೋದರ ಎಂದು ಕರೆಸಿಕೊಂಡಿರುವ ಇಬ್ರಾಹಿಂನನ್ನು “ಮುಖ್ಯಸ್ಥ” ಎಂದೂ, ಸಯೀದ್‌ನನ್ನು “ಡಾಕ್ಟರ್” ಎಂದೂ, ಖಾಜಿಯನ್ನು “ಬರ್ಗರ್” ಎಂದೂ, ಇಬ್ರಾಹಿಂನನ್ನು “ಭೋಲಾ” ಎಂದೂ, ಶಾಕಿರ್‌ನನ್ನು “ಶಂಕರ್” ಎಂದು ಎಂದು ಕರೆಯಲಾಗುತ್ತಿತ್ತು, ಅಪಹರಣಕಾರರು ವಿಮಾನದಲ್ಲಿ ಪರಸ್ಪರ ಕರೆಸಿಕೊಳ್ಳಲು ಬಳಸುತ್ತಿದ್ದ ಹೆಸರುಗಳು ಇವು ಎಂದು ಅಡ್ವಾಣಿ ಹೇಳಿದ್ದಾರೆ.

ಇದರಿಂದ ತಿಳಿದು ಬರುವುದು ಏನೆಂದರೆ, IC 814: The Kandahar Hijack ನಲ್ಲಿ ಬಳಸಲಾಗಿರುವ ಭೋಲಾ ಮತ್ತು ಶಂಕರ್‌ ಎಂಬ ಅಪಹರಣಕಾರರ ಹೆಸರು ಸೀರಿಸ್‌ಗೆ ಕಥೆ ರಚಿಸಿದವರ ಸೃಷ್ಟಿಯಲ್ಲ, ಕಥೆಯನ್ನು ಬರೆಯುವಾಗ ನಿಜ ಘಟನೆಯನ್ನು ಅಧ್ಯಯನ ಮಾಡಿ ರಚಿಸಿದ್ದಾರೆ. ಅಪಹರಣಕಾರರು ತಮ್ಮನ್ನು ತಾವು ಈ ಹೆಸರುಗಳಿಂದ ಕರೆಸಿಕೊಂಡ ಬಗ್ಗೆ ಸ್ವತಃ ಆಗ ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರವೇ ದೃಢೀಕರಿಸಿದೆ.

ಈ ವಿಚಾರದಲ್ಲಿ ಯಾವುದೇ ಅಧ್ಯಯನಗಳನ್ನು ಮಾಡದೆ ಗೋದಿ ಮೀಡಿಯಾಗಳು ಮತ್ತು ಬಲಪಂಥೀಯರು ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ಯಾವುದೇ ಹುರುಳಿಲ್ಲ, ಅದು ತಲೆಬುಡವಿಲ್ಲದ ವಾದ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page