ದಾವಣಗೆರೆ: ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘ ಹಾಗೂ ಕುಣಿಗಲ್‌ನ ಟೆಂಡರ್ ಟುಡೇ ಸಂಸ್ಥೆ ಸಹಯೋಗದಿಂದ ಆಯೋಜಿಸಲಾಗಿರುವ ಅಡಿಕೆ ಕೃಷಿ ಯಂತ್ರ ಮೇಳವು ಸೆಪ್ಟಂಬರ್ 19 ಮತ್ತು 20ರಂದು ನಗರದ ಪಾರ್ವತಮ್ಮ-ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಚ್.ಜಯಣ್ಣ ಮಾತನಾಡಿ, ಈ ಮೇಳದಲ್ಲಿ ಅಡಿಕೆ ಕೃಷಿಗೆ ಸಂಬಂಧಿಸಿದ ಯಂತ್ರಗಳ ಪ್ರದರ್ಶನ, ಹಾಗೂ ವಿಚಾರಗೋಷ್ಠಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚು ರೈತರು ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು. ಏಕೆಂದರೆ ಈ ಮೇಳದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಅಡಿಕೆ ಒಣಗಿಸುವ, ಡ್ರೋಣ್ ಮೂಲಕ ಔಷಧಿ ಸಿಂಪಡಿಸುವ ಯಂತ್ರಗಳ ಪ್ರದರ್ಶನ ನಡೆಯಲಿದೆ. ಈ ಮೂಲಕ ರೈತರು ಅಡಿಕೆ ಕೃಷಿಯಲ್ಲಿನ ನವ ತಾಂತ್ರಿಕತೆ ಅಳವಡಿಸಿಕೊಳ್ಳಲು ಉಪಯುಕ್ತ ಮಾಹಿತಿ ದೊರೆಯಲಿದೆ ಎಂದು ಜಯಣ್ಣ ಅವರು ಹೇಳಿದರು.