Home ದೇಶ ಚಾಮರಾಜನಗರದಲ್ಲಿ ರೈತ ಮುಖಂಡರ ಮೇಲೆ ಬಿಜೆಪಿ ಗುಂಡಾಗಳಿಂದ ದಾಳಿ

ಚಾಮರಾಜನಗರದಲ್ಲಿ ರೈತ ಮುಖಂಡರ ಮೇಲೆ ಬಿಜೆಪಿ ಗುಂಡಾಗಳಿಂದ ದಾಳಿ

0

  • ಬಡಗಲಪುರ ನಾಗೇಂದ್ರ ಹಾಗೂ ಮಹೇಶ್ ಪ್ರಭು ಮೇಲೆ ಹಲ್ಲೆ
  • ಚುರುಕು ಮುಟ್ಟಿಸಿರುವ ರೈತ ಸಂಕಲ್ಪ ಅಭಿಯಾನ
  • ಅಭಿಯಾನವನ್ನು ತೀವ್ರಗೊಳಿಸಲು ರೈತ ಮುಖಂಡರ ತೀರ್ಮಾನ

ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯ ರೈತ ಸಂಘದ ಕಡೆಯಿಂದ “ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ – ರೈತ ಸಮುದಾಯವನ್ನು ಉಳಿಸಿ” ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಲಾಗಿತ್ತು. ಏಪ್ರಿಲ್ 17ರಂದು ಚಾಮರಾಜನಗರದ ಅಮೃತ ಭೂಮಿಯಲ್ಲಿರುವ ಪ್ರೊ. ನಂಜುಂಡಸ್ವಾಮಿಯವರ ಸಮಾಧಿ ಬಳಿ ರೈತ ಸಂಕಲ್ಪ ಸ್ವೀಕರಿಸಿ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು.

ರಾಜ್ಯದ 130 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ರೈತ ಕಾರ್ಯಕರ್ತರು “ರೈತರ ಸಾಲ ಮನ್ನಾ ಮಾಡದ, ರೈತರ ಬೆಳೆಗೆ ಎಂ ಎಸ್ ಪಿ ನೀಡದ, ಬರದಿಂದ ರೈತರು ಕಂಗೆಟ್ಟಿದ್ದರೂ ಬಿಡಿಗಾಸ ಪರಿಹಾರ ನೀಡದ ಕೇಂದ್ರದ ಬಿಜೆಪಿ ಮತ್ತು ಮೈತ್ರಿ ಪಕ್ಷಗಳಿಗೆ ಮತ ನೀಡುವುದಿಲ್ಲ” ಎಂಬ ಪ್ರತಿಜ್ಞೆ ಸ್ವೀಕರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತರ ಈ ಅಭಿಯಾನ ರೈತವಿರೋಧಿ, ಕಾರ್ಪೋರೇಟ್ ಸಾಕು ನಾಯಿಯಾಗಿರುವ ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ರೈತ ಸಂಘ ತಿಳಿಸಿದೆ.

ಇದೇ ಉದ್ದೇಶದಿಂದ ಇಂದು ಚಾಮರಾಜನಗರದ ಬೀದಿಗಳಲ್ಲಿ ಪ್ರಚಾರ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಚಾರ ಬಿರುಸಿನಿಂದ ನಡೆದು, ಅದನ್ನು ಮುಕ್ತಾಯಗೊಳಿಸಿಕೊಂಡು ರೈತ ಸಂಘದ ಕಛೇರಿಗೆ ಮುಖಂಡರು ಹಿಂದುರುಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿರುವ ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ, ರೈತ ಸಂಘದ ಮುಖಂಡರಾದ ಮಹೇಶ್ ಪ್ರಭು ಅವರ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿ ಪಕ್ಷದ ಮುಖಂಡರು ಅಕ್ಷರಶಃ ಗೂಂಡಾ ಪ್ರವೃತ್ತಿ ಮೆರೆದಿದ್ದಾರೆ. ಈ ಗುಂಡಾಗಿರಿಯನ್ನು ಎಲ್ಲಾ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಬೇಕೆಂದು ರೈತ ಸಂಘ ಮನವಿ ಮಾಡಿದೆ.

ಬಿಜೆಪಿ ಪಕ್ಷದ ಈ ಗೂಂಡಾ ಪ್ರವೃತ್ತಿಯ ಕಾರಣಕ್ಕೆ ಅಭಿಯಾನವನ್ನು ನಾವು ಮತ್ತಷ್ಟು ಬಿರುಸುಗೊಳಿಸುತ್ತೇವೆ. ಈ ಬಾರಿ ರೈತರೆಲ್ಲರೂ ಕೂಡಿ ಈ ದ್ರೋಹಿ ಪಕ್ಷಗಳಿಗೆ ಸರಿಯಾದ ರೀತಿಯಲ್ಲಿ ಓಟಿನ ಏಟನ್ನು ನೀಡುತ್ತೇವೆ. ಎರಡನೇ ಸುತ್ತಿನ ಮತದಾನ ನಡೆಯಲಿರುವ ಉತ್ತರ ಭಾಗದ ಕ್ಷೇತ್ರಗಳಲ್ಲೂ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸುತ್ತೇವೆ. ರೈತಕುಲದ ಈ ಹೋರಾಟಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

You cannot copy content of this page

Exit mobile version