Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಬೆಂಗಳೂರಿನಲ್ಲಿ ಮರ್ಯಾದಾಗೇಡು ಹ* ತ್ಯೆ ; ಪ್ರೇಮ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಅತಿಥಿಯಾದ ತಂದೆ

ಬೆಂಗಳೂರಿನಲ್ಲಿ ಮರ್ಯಾದಾಗೇಡು ಹ* ತ್ಯೆ ; ಪ್ರೇಮ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಅತಿಥಿಯಾದ ತಂದೆ

0

ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ ವ್ಯಾಪ್ತಿಯ ಸೋಮನಾಥಪುರದಲ್ಲಿ 17 ವರ್ಷದ ಮಗಳನ್ನು ತನ್ನ ತಂದೆಯೇ ಮಚ್ಚಿನಿಂದ ಕೊಲೆ ಮಾಡಿದ ಪ್ರಕರಣ ಭಾನುವಾರ ತಡರಾತ್ರಿ ಬೆಳಕಿಗೆ ಬಂದಿದೆ. ಈ ಕೊಲೆಯ ಹಿನ್ನೆಲೆಯಲ್ಲಿ ಇದೊಂದು ಮರ್ಯಾದಾಗೇಡು ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿ ತಂದೆಯನ್ನು ಪರಪ್ಪನ ಅಗ್ರಹಾರದ ಠಾಣೆಯಲ್ಲಿ ಬಂಧಿಸಲಾಗಿದೆ. ಆರೋಪಿ ತಂದೆ ಮತ್ತು ಕೊಲೆಯಾದ ಮಗಳು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ನಿವಾಸಿಯಾಗಿದ್ದು, ಶನಿವಾರದಂದು ಕೊಲೆ ಆದ ಬಗ್ಗೆ ಮಾಹಿತಿ ಲಭ್ಯವಾಗಿದೆ‌.

ಕೊಲೆಯಾದ ಬಾಲಕಿ 17 ವರ್ಷದ ಅಪ್ರಾಪ್ತಳಾಗಿದ್ದು, ಹೆಚ್.ಡಿ.ಕೋಟೆಯ ಯುವಕನ ಜೊತೆಗೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಕುಟುಂಬಸ್ಥರು ಸಾಕಷ್ಟು ಬಾರಿ ಮಗಳಿಗೆ ಹಾಗೂ ಯುವಕನಿಗೆ ಬುದ್ಧಿವಾದ ಹೇಳಿದರೂ ಇಬ್ಬರೂ ತಮ್ಮ ಪ್ರೇಮ ಪ್ರಸಂಗವನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.

ಅಷ್ಟೆ ಅಲ್ಲದೆ ಇಬ್ಬರೂ ಹೆಚ್.ಡಿ.ಕೋಟೆ ಭಾಗದಲ್ಲಿ ನಿರಂತರವಾಗಿ ಓಡಾಡಿಕೊಂಡು ಇರುವ ಬಗ್ಗೆ ಮೇಲಿಂದ ಮೇಲೆ ಆಪ್ತರು ತಂದೆಗೆ ಹೇಳಿದ್ದಾರೆ. ಇದರಿಂದ ಬೇಸತ್ತ ತಂದೆ, ಪರಪ್ಪನ ಅಗ್ರಹಾರ ಬಳಿಯ ನಾಗನಾಥಪುರದ ಡಾಕ್ಟರ್ ಬಡಾವಣೆಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗಿದ್ದರು. ಸಂಬಂಧಿ ಮನೆಯಲ್ಲಿದ್ದಾಗಲೂ ಬಾಲಕಿ, ಯುವಕನಿಗೆ ಕರೆ ಮಾಡುತ್ತಿದ್ದಳು’ ಎಂದು ಮೂಲಗಳು ತಿಳಿಸಿವೆ.

ಸಂಬಂಧಿ ಮನೆಯಲ್ಲಿ ಉಳಿದುಕೊಂಡಿದ್ದ ಬಾಲಕಿಯನ್ನು ಸಂಪರ್ಕಿಸಿದ್ದ ಯುವಕ, ಮನೆ ಬಿಟ್ಟು ಹೋಗೋಣವೆಂದು ಹೇಳಿದ್ದ. ಅದರಂತೆ ಅ. 14ರಂದು ಬೆಂಗಳೂರಿಗೆ ಬಂದಿದ್ದ ಯುವಕ, ಬಾಲಕಿ ಕರೆದುಕೊಂಡು ಹೋಗಿದ್ದ. ಬಾಲಕಿ ನಾಪತ್ತೆಯಾದ ಬಗ್ಗೆ ಸಂಬಂಧಿಕರು, ಠಾಣೆಗೆ ದೂರು ನೀಡಿದ್ದರು.

ತನಿಖೆ ನಡೆಸಿದ್ದ ಪೊಲೀಸರು, ಅ. 20 ರಂದು ಬಾಲಕಿಯನ್ನು ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದರು. ನಂತರ, ಯುವತಿಯನ್ನು ಸಂಬಂಧಿಕರ ಸುಪರ್ದಿಗೆ ಒ‍ಪ್ಪಿಸಿದ್ದರು. ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದ ಸಂಬಂಧಿಕರು, ತಂದೆಗೆ ವಿಷಯ ತಿಳಿಸಿದ್ದರು.

ವಿಷಯ ತಿಳಿದು ಹೆಚ್.ಡಿ.ಕೋಟೆಯಿಂದ ಬಂದ ತಂದೆ ಮಗಳ ವಿರುದ್ಧ ಕುಪಿತಗೊಂಡಿದ್ದಾನೆ. ನಂತರ ರಾದ್ಧಾಂತ ಎಬ್ಬಿಸಿ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಹಾಗೂ ಮಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿತ್ತು. ಇದೇ ಸಂದರ್ಭದಲ್ಲಿ ತಂದೆ, ಮಚ್ಚಿನಿಂದ ಮಗಳ ದೇಹದ ಹಲವೆಡೆ ಹೊಡೆದಿದ್ದ. ರಕ್ಷಣೆಗೆ ಹೋದ ತಾಯಿ ಹಾಗೂ ಸಂಬಂಧಿಕರ ಮೇಲೂ ಮಚ್ಚು ಬೀಸಿದ್ದ. ತೀವ್ರ ರಕ್ತಸ್ರಾವದಿಂದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಹಾಗೂ ಸಂಬಂಧಿಕರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಘಟನೆ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ಮೂಲದ ತಂದೆಯನ್ನು ಪರಪ್ಪನ ಅಗ್ರಹಾರದ ಪೊಲೀಸರು ಬಂಧಿಸಿದ್ದಾರೆ. ಇದೊಂದು ಅಪ್ರಾಪ್ತ ಬಾಲಕಿಯ ಮರ್ಯಾದಾ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಬಾಲಕಿಯ ಕೌಟುಂಬಿಕ ವಿವರಗಳನ್ನು ಬಹಿರಂಗ ಪಡಿಸಲಾಗದು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

You cannot copy content of this page

Exit mobile version