ನಾನು ಕಂಡಂತೆ ನಮ್ಮನೆಯ ವ್ಯವಹಾರ ಸುಸ್ಥಿತಿಯಲ್ಲೇ ಇತ್ತು..
ಹೊಲ, ತೋಟ, ತೋಟಕ್ಕೊಂದು ಬಾವಿ, ಬಾವಿಗೊಂದು ಮೋಟ್ರು, ಹಟ್ಟಿತುಂಬ ಆಡುದನ, ನೋಡಿದರೆ ಕಣ್ಣೆಸರಾಗುವಂಥ ಎತ್ತುಗಳು… ಎಲ್ಲವೂ ಇತ್ತು. ಸುಗ್ಗಿಕಾಲದಲ್ಲಿ ಕಣದಲ್ಲಿ ರಾಗಿರಾಶಿಯನ್ನು ನೋಡಲು ಕಣ್ಣು ಸಾಲದಾಗಿದ್ದವು. ಆ ರಾಗಿರಾಶಿಯ ಹಿಂದೆ ಎಷ್ಟೊಂದು ಕೈಗಳ ಶ್ರಮ, ಎಷ್ಟೊಂದು ನಿದ್ದೆಗೆಟ್ಟ ರಾತ್ರಿಗಳು ಇರುತ್ತಿದ್ದವು ಎಂಬುದನ್ನು ನೆನೆಯುತ್ತೇನೆ: ಇನ್ನೇನು ಮಳೆಗಾಲ ಆರಂಭವಾಗುತ್ತಿದೆ ಅನ್ನುವಾಗಲೇ ಕಡ್ಡಿ ಕಡಿದು ಹೊಲ ಹಸನು ಮಾಡಿ, ಉತ್ತಿ ಬಿತ್ತಿ, ಕಳೆ ಕಿತ್ತು, ಕುಂಟೆ ಹೊಡೆದು ಅರಗಿ ಪೈರಿನ ನೆತ್ತಿಯಲ್ಲಿ ಕಾಚಕ್ಕಿ ಕಾಣುವಷ್ಟರಲ್ಲಿ ಆರಂಬಗೆಲಸವನ್ನೇ ನೆಚ್ಚಿಕೊಂಡಿದ್ದ ಜೀವಗಳಿಗೆ ಸಾರ್ಥಕತೆಯ ಭಾವ. ಕಾಚಕ್ಕಿ ತೆನೆಯಾಗಲು ಹೆಚ್ಚು ದಿನ ಬೇಕಿಲ್ಲ, ಅಷ್ಟರಲ್ಲಿ ಒಂದಿಷ್ಟು ಗ್ವಾಳೆಕಟ್ಟುಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂಬುದಾಗಿ ಮಾತಾಡಿಕೊಳ್ಳುದ್ದರು. ಈ ಗ್ವಾಳೆಕಟ್ಟುಗಳನ್ನು ಸಿದ್ಧಪಡಿಸುವುದು ಒಂದು ಬಗೆಯ ಪ್ರಕ್ರಿಯೆ. ಊರಿನ ಮೂರ್ನಾಲ್ಕು ಜನ ಜೊತೆಯಾಗಿ ಚೆನ್ನಾಗಿ ಕುಡ್ಲು ಮಸೆದುಕೊಂಡು ಕಾಡಿಗೆ ಹೋಗಿ ಬಿದಿರ ಗಳಗಳನ್ನು ಕಡಿದು ತಂದು, ಸುತ್ತಿಗೆಯಿಂದ ಚೆಚ್ಚಿ, ಒಂದಿಷ್ಟು ದಿನ ಬಾವಿಯಲ್ಲಿ ಉನಿಯಾಕಿ, ಆಮೇಲೆ ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳುವುದು. ರಾಗಿಯ ಕೊಯ್ಲು ಮುಗಿಸಿ ಇವುಗಳಿಂದಲೇ ಹೊರೆ ಕಟ್ಟುತ್ತಿದ್ದದ್ದು; ಬಿದಿರ ಗ್ವಾಳೆಯಂತೆಯೇ ಕತ್ತಾಳೆ ನಾರುಗಳನ್ನೂ ಬಳಸುವುದು ರೂಢಿ. ಇನ್ನೇನು ಬೆಳೆ ಕೈಗೆ ಬರುತ್ತಿದೆಅನ್ನುವ ಘಟ್ಟದಲ್ಲಿ ಒಂದು ಕಡೆ ನಿರಾಳ ಅನ್ನಿಸಿದರೆ ಇನ್ನೊಂದು ಕಡೆ ಈ ಆನೆ, ಕಾಡುಹಂದಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದು ಹೇಗೆ ಅನ್ನುವ ಆತಂಕ.
ಆ ಸಂದರ್ಭದಲ್ಲಿ ನನಗಾದ ಒಂದೆರಡು ಅನುಭವಗಳನ್ನು ಹಂಚಿಕೊಳ್ಳಬೇಕು. ರಾಗಿಪೈರು ಕಾಚಕ್ಕಿ ಹೊತ್ತು ನಿಲ್ಲುತ್ತಿದ್ದ ಕಾಲ ಬಂತೆಂದರೆ ಆನೆ, ಹಂದಿಗಳು ರಾತ್ರಿಹೊತ್ತು ಒಂದೇ ಸಮನೆ ನಮ್ಮ ಹೊಲಗಳ ಮೇಲೆ ದಾಳಿ ಮಾಡುತ್ತಿದ್ದವು. ಆನೆಗಳು ರಾಗಿಹೊಲವನ್ನು ತುಳಿದು ನಾಶ ಮಾಡಿದರೆ, ಕಾಡಂದಿಗಳು ಕಡ್ಲೆಗದ್ದೆಯನ್ನು ಗುರಿಯಾಗಿಟ್ಟುಕೊಳ್ಳುತ್ತಿದ್ದವು. ರಾತ್ರಿ ಹೊತ್ತು ದಾಳಿ ಮಾಡುತ್ತಿದ್ದ ಈ ಕಾಡಂದಿಗಳು ಎಂಥ ಕಿತಾಪತಿ ಪ್ರಾಣಿಗಳೆಂದರೆ ಕಡ್ಲೆಕಾಯಿಗಿಡವನ್ನು ಅತ್ಲಾಗಿ ಪೂರ್ತಿ ತಿನ್ನುತ್ತಲೂ ಇರಲಿಲ್ಲ. ಇತ್ಲಾಗಿ ಸುಮ್ಮನೂ ಬಿಡುತ್ತಿರಲಿಲ್ಲ. ನೆಲದಲ್ಲಿ ನೆಮ್ಮದಿಯಿಂದಿರುತ್ತಿದ್ದ ಕಡ್ಲೆಕಾಯಿಗಳು ಬುಡ್ಡೆ, ಕಾಯಿ ಸಮೇತ ಹೊರಗೆ ಕಾಣಿಸುವಂತೆ ಮಾಡಿ ಹೊಲವನ್ನೆಲ್ಲ ತುಳಿದು ಪಚಗೆಡಿಸಿ ಬೆಳಗಾಗುವುದರೊಳಗೆ ಕಾಡು ಹೊಕ್ಕಿಬಿಡುತ್ತಿದ್ದವು.
“ಹಂದಿ ಊಟ್ಬುಟ್ಟವೆ… ಹಂದಿ ಊಟ್ಬುಟ್ಟವೆ” ಅಂತ ನಾವೆಲ್ಲ ಬೆಳಗ್ಗೆ ಎದ್ದು ಹೊಲಕ್ಕೆ ಹೋಗಿ ಆಯಾಯ ಕಡ್ಲೆಕಾಯಿ ಗಿಡಗಳನ್ನು ಅವುಗಳ ಮೂಲಸ್ಥಿತಿಗೆ ತರಲು ಪ್ರಯತ್ನಿಸುವುದು. ರಾತ್ರಿಯಾದರೆ ಮತ್ತದೇ ದಾಳಿ, ಮತ್ತದೇ ಹಾವಳಿ. ಈ ಹಾಳಾದ್ದ ಹಂದಿಗಳು ದಿನಾ ಹೀಗೆ ಮಾಡಿದರೆ ಕಡ್ಲೆಕಾಯಿಗಳು ನೆಲದಲ್ಲಿ ಬಲಿಯೋದು ಯಾವಾಗ, ತೂಕ ಸಿಗೋದು ಹೇಗೆ ಅನ್ನುವ ಚಿಂತೆ ತಾತನ ತಲೆಗೆ ತಗುಲಿ “ಲೋ ತಮ್ಮಯ್ಯ, ಆ ಹುಣಸೇಮರದ್ ಮ್ಯಾಲೆ ಒಂದು ಗುಡ್ಲಾಕ್ರೋ. ನಾನು ರಾತ್ರೊತ್ತು ಮನಗಿದ್ದು ಬತ್ತೀನಿ. ಅವ್ನೆಂಡ್ರುನಾ ಕೇವ್ಳ್ಜಾತಿ ಅಂದಿಗೊಳು ಅದ್ಯಂಗ್ಗ್ ಬಂದವೊ ನಾನೂ ನೋಡ್ತೀನಿ” ಅಂತ ಆಜ್ಞೆ ಹೊರಡಿಸುತ್ತಿದ್ದಂತೆಯೇ ಹುಣಸೇಮರದ ಮೇಲೆ ಗುಡ್ಲು ನಿರ್ಮಾಣವಾಯಿತು. ಆ ಹುಣಸೆಮರದ ಬುಡದಲ್ಲೇ ನನ್ನ ತಾತನ ತಾತ ದೊಡ್ಡಮಂಚೇಗೌಡನ ಗೋರಿ ಎಂದು ಕರೆಯಲ್ಪಡುವ ಕಲ್ಗುಡ್ಡೆ ಇರುವುದು. ಪ್ರತಿ ಉಗಾದಿಯಂದು ನಾವು ಆ ಕಲ್ಗುಡ್ಡೆ ಮೇಲೆ ಹೊಸಬಟ್ಟೆ ಮಡಗಿ ಕಡ್ಡಿಹಚ್ಚಿ, ಕೈ ಮುಗಿದು, ನಾಕ್ಕಾಸಿನ ಧೂಪ ಹಾಕಿ ಬರುತ್ತೇವೆ. ಈ ದೊಡ್ಡಮಂಚೇಗೌಡನ ಬಗ್ಗೆ ನಾಲ್ಕು ಸಾಲು ಬರೆದು ಮತ್ತೆ ಆನೆ, ಹಂದಿ, ಗುಡ್ಲು ವಿಷಯಕ್ಕೆ ಬರುತ್ತೇನೆ. ಈ ಗುಡ್ಲು ಹಾಕಿರೋ ಹುಣಸೇಮರ ಏನಿದೆ, ಅಲ್ಲಿಂದ ನಾಲ್ಕು ಮಾರು ನಡೆದರೆ ಕುಂಬಾರದೊಡ್ಡಿಹಳ್ಳ ಎನ್ನುವ ಕಾಡಿನ ನೀರು ಹರಿದುಬರುವ ತೊರೆಯೊಂದಿದೆ. ಆ ತೊರೆಯನ್ನು ದಾಟಿ ಎಡಕ್ಕೆ ತಿರುಗಿ ಮೂರ್ನಾಲ್ಕು ಮೈಲಿ ನಡೆದರೆ ಸುಂಡಘಟ್ಟ/ಬೆಟ್ಟೇಗೌಡನದೊಡ್ಡಿ ಅನ್ನುವ ಊರಿದೆ. ಆ ಊರೇ ಹಿಂದೊಮ್ಮೆ ಈ ದೊಡ್ಡಮಂಚೇಗೌಡನ ಊರಾಗಿತ್ತಂತೆ. ಅಲ್ಲಿ ಯಾವುದೋ ಕೆರೆ ಕಟ್ಟಿಸುವ ವಿಚಾರ ಪ್ರತಿಷ್ಠೆಗೆ ತಿರುಗಿ, ಪ್ರತಿಷ್ಠೆ ವ್ಯಾಜ್ಯಕ್ಕೆ ತಿರುಗಿ ಆಡುದನ, ಹೊಲಮನೆ ಎಲ್ಲ ಸೀದುಬಿಟ್ಟು ಹೊಸದುರ್ಗದಲ್ಲಿ ನೆಲಗೊಳ್ಳುವ ಉದ್ದಿಶ್ಯದಿಂದ ಬುಸುಬುಸನೆ ಉಸುರು ಬಿಡುತ್ತಾ, ಹಣೆಯ ಬೆವರನ್ನು ವಲ್ಲಿಬಟ್ಟೆಯಲ್ಲಿ ಒರೆಸಿಕೊಳ್ಳುತ್ತಾ ಕಾಡಾದಿಯಲ್ಲಿ ದಡದಡನೆ ಬರುತ್ತಿರಲು, ಕುಂಬಾರದೊಡ್ಡಿಹಳ್ಳ ದಾಟಿ ಹುಣಸೇಮರದ ಸಮೀಪಕ್ಕೆ ಆಗಮಿಸಲು ಹತ್ತೇರು ಕಟ್ಟಿ ಹೊಲ ಉಳುತ್ತಿದ್ದ ಹೊಂಬಾಳೇಗೌಡರ ವಂಶಸ್ಥರು ” ಏನ್ ಮಂಚಣ್ಣ, ಎಲ್ಲೋ ಹೋಯ್ತಿದ್ದಿ, ಯಾರ ಮ್ಯಾಲೆ ಆಪಾಟಿ ಕ್ವಾಪ…?” ಅಂದಾಗ ನಡೆದುದ್ದನ್ನೆಲ್ಲ ವಿವರಿಸಿದ ಬಳಿಕ ಅವರ ಸಲಹೆಯಂತೆ ಹೊಸದುರ್ಗಕ್ಕೆ ಹೋಗುವ ಬದಲು ಸುಂಡಘಟ್ಟದಲ್ಲಿದ್ದ ತನ್ನೆಲ್ಲ ಸ್ವತ್ತನ್ನು, ರಾಸನ್ನು ಅವರಿವರಿಗೆ ಮಾರಿ ಕೆಬ್ಬರೆಯಲ್ಲಿ ಹೊಲಮನೆ ಖರೀದಿಸಿ ನೆಲೆಯೂರಿ ಕಡೆಗೆ ಈ ಹುಣಸೇಮರದಡಿಯ ಕಲ್ಗುಡ್ಡೆಯಲ್ಲಿ ಐಕ್ಯನಾದನಂತೆ.
ಹ್ಞಾ, ತಾತನ ಆಜ್ಞಾಪ್ರಕಾರ ಹುಣಸೇಮರದ ಮೇಲೆ ಗುಡ್ಲು ಸಿದ್ಧವಾದ ಬಳಿಕ ರಾತ್ರಿ ಹೊತ್ತು ಹೊಲ ಕಾಯಲು ತಾತನ ಜೊತೆ ನಾನೂ ಹೋಗುತ್ತಿದ್ದೆ. ಗವ್ವೆನ್ನುವ ಕತ್ತಲ ಸೀಳುವಂತೆ ಕರಿಗಂಬಳಿ ಹೊದ್ದು, ಕೈಯಲ್ಲಿ ಲಾಟೀನು ಹಿಡಿದು ತಾತ ಮುಂದೆ ಮುಂದೆ ಬುಸ್ ಬುಸ್ ಅಂತ ಬೀಡಿ ಹೊಗೆ ಬಿಡುತ್ತಾ ಸಾಗುತ್ತಿದ್ದರೆ ನಾನು ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದೆ. ನನಗೆ ಚಳಿಯಾಗದಿರಲೆಂದು ಅವ್ವ ಕಿವಿ ಮುಚ್ಚುವಂತೆ ಕುಲಾವಿ ಹಾಕಿರುತ್ತಿದ್ದಳು. ಆ ಗುಡ್ಲು ಹೇಗಿತ್ತೆಂದರೆ ಕೆಳಕ್ಕೆ ಮರದ ಕವೆಗಳನ್ನು ಕೊಟ್ಟು, ಅವುಗಳ ಮೇಲೆ ಜೋಡಿಸಿಟ್ಟ ಬಿದಿರಗಳಗಳನ್ನು ಉರಿಗಳಿಂದ ಪಟ್ಟಾಗಿ ಬಿಗಿದು, ಮೇಲೆ ತೆಂಗಿನಗರಿ, ಹುಲ್ಲನ್ನು ಹೊದಿಸಿ ಜಾರದಂತೆ ಬಿಗಿಯಾಗಿ ಕಟ್ಟಿ, ಮಲಗಲು ಮೆತ್ತನೆಯ ಹುಲ್ಲು, ಮೇಲೊಂದು ಕಡ್ಡಿಮಂದಲಿಗೆ, ಹಳೆಯಬಟ್ಟೆಯನ್ನು ಚೀಲದಂತೆ ಸೂಜಿನೂಲಿನಿಂದ ಹೊಲೆದು, ಅದರೊಳಗೆ ರಾಗಿಹೊಟ್ಟು ತುಂಬಿ ಅವ್ವ ಸಿದ್ಧಪಡಿಸಿದ್ದ ತಲ್ಮೂಟೆ. ನೆಲದಿಂದ ಗುಡ್ಲು ತಲುಪಲು ಏಣಿಮೆಟ್ಟಿಲು. ಗುಡ್ಲು ನೆಲದ ಮಟ್ಟಕ್ಕಿದ್ದರೆ ಆನೆ ತುಳಿಯುವ ಸಾಧ್ಯತೆ, ಹಂದಿ ದಾಳಿ ಮಾಡುವ ಅವಕಾಶ ಹೆಚ್ಚು. ಆದ್ಧರಿಂದ ಆನೆ ತನ್ನ ಸೊಂಡಿಲನ್ನು ಎಷ್ಟೇ ಉದ್ದ ಮಾಡಿದರೂ ಎಟುಕಬಾರದಷ್ಟು ಎತ್ತರದಲ್ಲಿ, ಮರದ ಕೊಂಬೆಯ ಮೇಲೆ ಗುಡ್ಲು ನಿರ್ಮಿಸುತ್ತಿದ್ದದ್ದು; ಹಂದಿಯೋ, ಆನೆಯೋ ಬಂದರೆ ಗೊತ್ತಾಗಲೀ ಅನ್ನುವ ಉದ್ದಿಶ್ಯದಿಂದಲೂ ಕೂಡ.
ನಾನು ತಾತನೊಟ್ಟಿಗೆ ಅನೇಕ ರಾತ್ರಿಗಳನ್ನು ಆ ಗುಡ್ಲುವಿನಲ್ಲಿ ಕಳೆದ ಅನುಭವಿ. ತಾತ ಪ್ರತಿಬಾರಿ ಗುಡ್ಲುವಿನ ಏಣಿಮೆಟ್ಟಿಲು ಹತ್ತುವಾಗಲೂ ಸುತ್ತಮುತ್ತ ಕಣ್ಣಾಡಿಸುತ್ತಾ “ಬರ್ಲಿ ಇವತ್ತು ಅವ್ನೆಂಡ್ರುನಾ ಕೇವ್ಳ್ಜಾತಿ ಅಂದಿಗೊಳು, ಅವ್ನ್ತಾಯ್ನಾ ಕೇವ್ಳ್ಜಾತಿ ಆನೆಗೊಳು…” ಅನ್ನುತ್ತಲೇ ಗುಡ್ಲು ಸೇರಿಕೊಂಡು, ನನ್ನನ್ನು ಕಂಬಳಿಯೊಳಗೆ ಬೆಚ್ಚಗೆ ಮಲಗಿಸಿಕೊಂಡು ನನಗೆ ನಿದ್ದೆ ಹತ್ತುವ ತನಕ ರಾಮಾಯಣದ ಒಂದು ಭಾಗವನ್ನೋ, ಮಹಾಭಾರತದ ಒಂದು ಭಾಗವನ್ನೋ, ತಾನು ನಾಟಕಕ್ಕೆ ಸೇರಿ ಮಾಡಿದ್ದ ನಕ್ಷತ್ರಿಕನ ಪಾರ್ಟಿನ ಕುರಿತೋ ಹೇಳುವ ರೂಢಿ. ಮಿಕ್ಕಂತೆ ಡಬ್ಬ ಬಡಿಯುತ್ತಾ, ಜೋರಾಗಿ ಕೂಗುತ್ತಾ ತನ್ನ ಡ್ಯೂಟಿ ತಾನು ಮಾಡುತ್ತಿದ್ದ. ಹೀಗೇ ಒಂದಿನ ಸರಿಹೊತ್ತಿನಲ್ಲಿ ಯಾರೋ ಜೋರಾಗಿ ಕೂಗಿಕೊಂಡಂತೆ, ಲಕ್ಷ್ಮಿಪಟಾಸು, ಆನೆಪಟಾಸು ಹೊಡೆದಂತೆ ಅನ್ನಿಸಿ ಕಣ್ಣು ತೆರೆದೆ. ತಾತ “ಹೇಹೇಹೇ … ಓಹೋಹೋ… ಹೇ.. ಹಾ.. ಹಿಡಿಯೋ ಹಿಡಿಯೋ ಹಿಡಿಯೋ .. ಹೊಡೆಯೋ ಹೊಡೆಯೋ ಹೊಡೆಯೋ.. ಬುಡಬ್ಯಾಡ್ರಿ ಅವ್ನ್ ತಾಯ್ನಾ. ಕಿಕಿಕಿಕಿಕಿ… ಹೋಯ್ ಹೋಯ್” ಅಂತ ಕೂಗುತ್ತಾ, ಡಬ್ಬ ಬಡಿಯುತ್ತಾ ತನ್ನ ಡ್ಯೂಟಿಯಲ್ಲಿ ತಲ್ಲೀನನಾಗಿದ್ದ. ತಾತನ ಅಬ್ಬರ ನೋಡಿ ಗಾಬರಿಯಿಂದ ಎದ್ದು ಗುಡ್ಲುವಿನ ಆಚೆ ಇಣುಕಿದೆ. ನಮ್ಮ ಸುತ್ತಮುತ್ತಲ ಹೊಲದ ಗುಡ್ಲುಗಳಲ್ಲಿದ್ದ ಜನರೆಲ್ಲಾ ಕೈಯಲ್ಲಿ ಪಂಜು ಹಿಡಿದು, ಡಬ್ಬ ಬಡಿಯುತ್ತಾ, ಪಟಾಸು ಹೊಡೆಯುತ್ತಾ ಅಬ್ಬರ ಮಾಡುತ್ತಿದ್ದರೆ ಕಡ್ಲೆಗದ್ದೆಗಳನ್ನು ದ್ವಂಸ ಮಾಡಿಯೇ ತೀರಬೇಕೆಂದು ತೀರ್ಮಾನಿಸಿದಂತಿದ್ದ ಕಾಡಂದಿಗಳು ಗೊಟರ್ ಗೊಟರ್ ಗುರ್ ಗುರ್ ಗೊಟರ್ ಎಂದು ಸದ್ದು ಮಾಡುತ್ತಾ ಆ ಮಂದಬೆಳಕಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಾ, ಬಾಲ ಬೀಸುತ್ತಾ, ಕೋರೆಹಲ್ಲು ಪ್ರದರ್ಶಿಸುತ್ತಾ ಕತ್ತಲಲ್ಲಿ ಗುರ್ ಗುರ್ ಅನ್ನುತ್ತಾ ಕಣ್ಮರೆಯಾದವು.
ಕಣಜದ ತುಂಬ ದವಸ, ಮೂಡೆಗಳ ತುಂಬ ಕಾಳು, ವಾಡೆಗಳ ತುಂಬ ಧಾನ್ಯ, ಕೊಟ್ಟಿಗೆ ತುಂಬ ದನಕರುಗಳು, ಹಬ್ಬ ಬಂತೆಂದರೆ ತಾನು ಲೆಕ್ಕದಲ್ಲಿ ಬಟ್ಟೆ ಖರೀದಿ, ಹಸಿರುಮುನಿ, ಕಳದಮುನಿ, ಹೊಸ್ತೊಡಕು, ಗೂಡುನ್ ಸವೆ, ಮಾರ್ಲಮಿ, ದೇವರಸೇವೆ, ಹರಕೆ ಹೆಸರಲ್ಲಿ ಆಗಾಗ ಆಡುಕುರಿ ಬಲಿದಾನ, ಪ್ರತಿ ಗೌರಿಪಾಡ್ಯಕ್ಕೆ ಮನೆದೇವರ ಗುಡಿ ಮುಂದೆ ಅನ್ನದಾನ – ಹೀಗೆಲ್ಲ ತುಂಬಿರುತ್ತಿದ್ದ ಮನೆಯಲ್ಲಿ ಸಣ್ಣದೊಂದು ಆತಂಕದ ಗಾಳಿ ಬೀಸತೊಡಗಿತು. ತಾತನಿಂದ ಅಪ್ಪನ ಕೈಗೆ ಮನೆಯ ಯಜಮಾನಿಕೆಯ ಹೊಣೆ ವರ್ಗಾವಣೆಯಾದ ಮೇಲೆ ಎಲ್ಲವೂ ಹಿಂದಿನಂತೆ ಸುಖದಾಯಕವೂ, ಆಶಾದಾಯಕವೂ, ಸಮೃದ್ಧಿದಾಯಕವೂ ಆಗಿರಲಿಲ್ಲ. ಎಲ್ಲವೂ ಸಲೀಸಾಗೇ ಇದ್ದ ಮನೆಯಲ್ಲಿ ದಿಢೀರನೆ ಆತಂಕದ ಗಾಳಿ ಬೀಸಲು ಅವರಿವರ ಮಾತುಗಳನ್ನು ಕಟ್ಟಿಕೊಂಡು, ಮನೆಗೆ ಬರುವ ಅತಿಥಿಗಳು ಕೊಡುವ ಪುಕ್ಸಟ್ಟೆ ಸಲಹೆಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಅಪ್ಪ ಮಾಡಿಕೊಂಡ ಯಡವಟ್ಟುಗಳು ಹಲವಾರು. ದಿನೇ ದಿನೇ ಸಂಕಷ್ಟಗಳು ಎದುರಾಗತೊಡಗಿದವು. ಕೊಟ್ಟಿಗೆಯ ಆಡುದನ ಒಂದೊಂದಾಗಿ ಕರಗತೊಡಗಿದವು, ಅಣೆಕೊಟ್ಟು ಜೋಡಿಸಿಟ್ಟಿದ್ದ ರಾಗಿಮೂಟೆಗಳನ್ನು ತಲವಾಸೆಗೆ ಅಳೆದದ್ದಾಯಿತು. ಸಾಲ ಏರುತ್ತಾ ಹೋಯಿತು, ನೆಮ್ಮದಿ ಇಳಿಯುತ್ತಾ ಹೋಯಿತು. ತಾತ ರೇಗಾಡತೊಡಗಿದ. ನಮ್ಮ ನಾಯಿ ಹಾಕಿದ್ದ ಐದೂ ಮರಿಗಳನ್ನು ಮಂಕರಿಯಲ್ಲಿ ತುಂಬಿಕೊಂಡು ಹಳ್ಳದ ಮಡುವಿಗೆಸೆಯಲು ಹೋಗಿದ್ದ. ನಮ್ಮನೆಯ ಅಟ್ಟದಲ್ಲಿ ಬೆಕ್ಕುಹಾಕಿದ್ದ ಮರಿಗಳನ್ನು ಹಿಡಿದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬಂದಿದ್ದ. ತಾತನ ಸಿಟ್ಟಿಗೆ ಕಾರಣವಿತ್ತು. ಒಮ್ಮೊಮ್ಮೆ ಬೇಸರದಲ್ಲಿ ” ಮೂರ್ ನೀರ್ ತತ್ತಾರೈದ್ಲೇ” ಅಂತ ಒಂದು ತಪ್ಪಲೆ ನೀರನ್ನು ಅಂತುಕೊಂಡು ಗಟಗಟನೆ ಕುಡಿದು ಹಿಟ್ಟುಣ್ಣದೇ ಹಾಗೆ ಬೆಂಚಿನ ಮೇಲೆ ಮಲಗಿಬಿಡುತ್ತಿದ್ದ; ತಾತನ ಬೇಸರಕ್ಕೂ ಕಾರಣವಿತ್ತು.
ಇದನ್ನೆಲ್ಲ ನೋಡಿ ಅಪ್ಪ ಭಜನೆ, ಭಂಗಿಸೊಪ್ಪು ಇತ್ಯಾದಿಗಳಲ್ಲಿ ತೊಡಗಿಬಿಟ್ಟ. ಧನುರ್ಮಾಸ ತಿಂಗಳಲ್ಲಿ ಕೋಳಿ ಕೂಗುವ ಹೊತ್ತಿಗೆದ್ದು, ಸ್ನಾನ ಮಡಿ ಮಾಡಿಕೊಂಡು, ಪಂಚೆ ಉಟ್ಟುಕೊಂಡು, ವಿಭೂತಿಧಾರಣೆ ಮಾಡಿಕೊಂಡು, ಶಿವಪೂಜೆ ಮುಗಿಸಿಕೊಂಡು ಭಜನೆಮನೆಗೆ ಹೋಗಿ ಒಂದಿಷ್ಟು ಜನರ ಜೊತೆ ಸೇರಿಕೊಂಡು ಭಜನೆ ಮಾಡುವುದರಲ್ಲಿ ನಿರತನಾದ. “ರಾಮಾರಾಮಾ ಎನ್ನಿರೋ.. ಇದೇ ಮಹಾನಾಮ ಪರಮ ರಾಮನಾಮ, ಹಾಡಿರಿ ರಾಗಗಳ ನುಡಿಸಿರಿ ತಾಳಗಳ, ರೇಣುಕಾಚಾರ್ಯ, ಇಂಥಾ ಮಾನವ ಜನ್ಮ…” ಮುಂತಾದ ಹಾಡುಗಳನ್ನು ಹಾರ್ಮೋನಿಯಂ, ದಮ್ಮಡಿ, ಮದ್ದಳೆ, ತಾಳ ನುಡಿಸುತ್ತಾ, ಸೀತಾರಾಮಾಂಜನೇಯಲಕ್ಷ್ಮಣರ ಫೋಟೋ ಮತ್ತು ಗರುಡಗಂಬ ಹಿಡಿದುಕೊಂಡು ಊರುತಿಬ್ಬ ಹಾಡುತ್ತಾ ಬೆಳಕರಿಯುವಷ್ಟರಲ್ಲಿ ಒಂದು ರೌಂಡು ಹಾಕುವ ರೂಢಿ; ನಾನೂ ಅಪ್ಪನೊಡನೆ ಕೆಲವೊಮ್ಮೆ ಹೋಗುತ್ತಿದ್ದೆ. ಧನುರ್ಮಾಸ ಬಿಟ್ಟರೆ ಪ್ರತಿ ಶನಿವಾರ ನಮ್ಮೂರಿನ ಭಜನೆಮನೆಯಲ್ಲಿ ಭಜನೆ ಮಾಡುವ ಅಭ್ಯಾಸವಿರಿಸಿಕೊಂಡಿದ್ದರು. ಎಷ್ಟೋ ದಿನ ಅಪ್ಪ ತಡರಾತ್ರಿಯವರೆಗೆ ಭಜನೆ ಮಾಡಿ, ಭಜನೆಮನೆಯ ಪಡಸಾಲೆಯಲ್ಲೇ ಮಲಗಿದ್ದನ್ನು ಗಮನಿಸಿದ್ದೇನೆ. ಅಪ್ಪನ ಮನಸ್ಸು ತೀವ್ರವಾಗಿ ಅಧ್ಯಾತ್ಮದೆಡೆಗೆ ತುಡಿಯಲಾರಂಭಿಸಿದ ಕಾಲಘಟ್ಟ ಬಹುಷಃ ಅದೇ ಇರಬೇಕು.
(ಮುಂದುವರೆಯುತ್ತದೆ)
-ಹೃದಯಶಿವ