ಬೆಂಗಳೂರಿನ ಮಹಿಳಾ ಸ್ವೀಕಾರ ಕೇಂದ್ರದಲ್ಲಿರುವ ಸುಮಾರು 1,776 ಅನಾಥ ಹಾಗೂ ನಿರ್ಗತಿಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ‘ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿ’ಯು ರಾಜ್ಯ ಲೋಕಾಯುಕ್ತರಿಗೆ ಕಳವಳಕಾರಿ ದೂರು ಸಲ್ಲಿಸಿದ್ದು, ಹತ್ತಾರು ಅಕ್ರಮಗಳನ್ನು ಬಯಲಿಗೆಳೆದಿದೆ. ಸ್ವೀಕಾರ ಕೇಂದ್ರದಲ್ಲಿದ್ದ ಹಲವು ಹೆಣ್ಣು ಮಕ್ಕಳಿಗೆ ಬಲವಂತವಾಗಿ ಗರ್ಭಪಾತ ಮಾಡಿಸಿ ಅನೈತಿಕ ಚಟುವಟಿಕೆಗಳಿಗೆ ಮಾರಾಟ ಮಾಡಲಾಗಿದೆ ಹಾಗೂ ಕೆಲವರನ್ನು ಕೊಲೆ ಮಾಡಿ ವಿದ್ಯುತ್ ಚಿತಾಗಾರದಲ್ಲಿ ಸುಟ್ಟು ಬೂದಿ ಮಾಡಲಾಗಿದೆ ಎಂದು ಸಮಿತಿ ತನ್ನ ದೂರಿನಲ್ಲಿ ಗುರುತರ ಆರೋಪ ಮಾಡಿದೆ.
ಅಷ್ಟೇ ಅಲ್ಲದೆ, ಈ ಸ್ವೀಕಾರ ಕೇಂದ್ರದಲ್ಲಿದ್ದ ಹಲವು ಹೆಣ್ಣು ಮಕ್ಕಳನ್ನು ಮನೆ ಕೆಲಸದ ನೆಪದಲ್ಲಿ ಐಎಎಸ್ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿರುವುದು ದಾಖಲೆಗಳಿಂದ ದೃಢಪಟ್ಟಿದೆ ಎಂದು ಸಮಿತಿ ತಿಳಿಸಿದೆ. ದೂರಿನಲ್ಲಿ ಯಾವುದೇ ಐಎಎಸ್ ಅಧಿಕಾರಿಗಳ ಹೆಸರುಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ಈ ಪ್ರಕರಣಗಳಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಟ್ಟಿಯನ್ನು ಲೋಕಾಯುಕ್ತರಿಗೆ ಹಸ್ತಾಂತರಿಸಲಾಗಿದೆ. ದೂರಿಗೆ ಪುಷ್ಟಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆದೇಶಗಳು, ನಿವಾಸಿಗಳ ನಾಪತ್ತೆ, ಗೃಹ ತನಿಖೆ, ಅಂತ್ಯಕ್ರಿಯೆ ಹಾಗೂ ವರ್ಗಾವಣೆ ಆದೇಶಗಳ ಪ್ರತಿಯನ್ನೊಳಗೊಂಡ ಒಟ್ಟು 33 ಪ್ರಮುಖ ದಾಖಲೆಗಳನ್ನು ಸಮಿತಿಯು ಸಾಕ್ಷ್ಯವಾಗಿ ಒದಗಿಸಿದೆ.
ಈ ದೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆಯ ನಿರ್ದೇಶಕರಾದ ಕೆಎಎಸ್ ಅಧಿಕಾರಿ ಮಹೇಶ್ ಬಾಬು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಚಿವರ ನೇಮಕವಾಗದೇ ಇರುವುದರಿಂದ ಈ ಖಾತೆಯು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿಯಲ್ಲೇ ಇದೆ. ಸಚಿವರ ನೇಮಕವಾದ ಬಳಿಕ ಈ ಸುದೀರ್ಘ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ವರದಿಯು ‘ದಿ ಫೈಲ್’ (The File) ವೆಬ್‌ಸೈಟ್‌ನಲ್ಲಿ ಪ್ರಕಟವಾದ ಜಿ. ಮಹಂತೇಶ್ ಅವರ ವಿಶೇಷ ವರದಿಯನ್ನು ಆಧರಿಸಿದೆ.
