Home ಬ್ರೇಕಿಂಗ್ ಸುದ್ದಿ ಕಾವೇರಿ ಕೂಗಿಗೆ ದನಿಗೂಡಿಸದ ಚಿತ್ರರಂಗ ; ನಾವಿದ್ದರೆ ಮಾತ್ರ ನೀವು ಎಂದು ರೈತರ ಎಚ್ಚರಿಕೆ

ಕಾವೇರಿ ಕೂಗಿಗೆ ದನಿಗೂಡಿಸದ ಚಿತ್ರರಂಗ ; ನಾವಿದ್ದರೆ ಮಾತ್ರ ನೀವು ಎಂದು ರೈತರ ಎಚ್ಚರಿಕೆ

0

ರಾಜ್ಯಾದ್ಯಂತ ಕಾವೇರಿ ನದಿ ನೀರಿನ ವಿಚಾರವಾಗಿ ನಿರಂತರ ಹೋರಾಟ ನಡೆಯುತ್ತಿದೆ. ಇತ್ತ ಸರ್ಕಾರ ಕೂಡಾ ನಿರಂತರವಾಗಿ ಸರ್ವಪಕ್ಷ ಸಭೆಗಳು, ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹ ಸೇರಿದಂತೆ ತಮಿಳುನಾಡಿಗೆ ನೀರು ಬಿಡಲು ತಡೆಯಲು ಅಗತ್ಯ ಕ್ರಮಕ್ಕೆ ಮುಂದಾಗುತ್ತಿದೆ. ಆದರೆ ಕನ್ನಡ ಚಲನಚಿತ್ರ ನಟ ನಟಿಯರು ಮಾತ್ರ ಈ ಬಗ್ಗೆ ದಿವ್ಯ ಮೌನ ವಹಿಸಿರುವುದು ರಾಜ್ಯದ ರೈತರು ಹಾಗೂ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಸಿನೆಮಾಗಳಲ್ಲಿ ಕನ್ನಡ, ಕರ್ನಾಟಕ, ಕಾವೇರಿ ತಾಯಿ, ನದಿ, ನೆಲ, ಜಲ ಎಂದೆಲ್ಲಾ ಪುಂಖಾನುಪುಂಖವಾಗಿ ಡೈಲಾಗ್ ಉದುರಿಸಿ ಸಿನಿರಸಿಕರಿಂದ ಚಪ್ಪಾಳೆ ಗಿಟ್ಟಿಸುವ, ಆ ಮೂಲಕ ತಮ್ಮ ಖಜಾನೆ ತುಂಬಿಸಿಕೊಳ್ಳುವ ನಟರು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಮಂಡ್ಯ ಭಾಗದ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ರೈತರು, ರೈತ ಸಂಘಟನೆಗಳು, ಹಾಗೂ ರಾಜ್ಯದ ಜನತೆ ರೋಷಾವೇಷ ವ್ಯಕ್ತಪಡಿಸುತ್ತಿದ್ದು, ಕಾವೇರಿ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ ಎಂದು ಫೇಸ್ಬುಕ್, ವಾಟ್ಸ್ ಆಪ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

“ಕನ್ನಡ ನಾಡು ನುಡಿ, ನೆಲ ಜಲಕ್ಕೆ ಏನೇ ಧಕ್ಕೆಯಾದರೂ ಡಾ.ರಾಜ್ ಕುಮಾರ್ ಅವರು ಆ ಬಗ್ಗೆ ದನಿ ಎತ್ತುತ್ತಿದ್ದರು. ರಾಜ್ಯದ ಜನತೆಯ ಪರ ನಿಲ್ಲುತ್ತಿದ್ದರು. ಇಂದು ಅವರ ಕೂಗಿಲ್ಲದೆ ಎಷ್ಟೋ ರೈತರು ಹಾಗೂ ಕನ್ನಡದ ಮಕ್ಕಳು ಪರಭಾಷಿಕರ ಒತ್ತಡಕ್ಕೆ ಸಿಲುಕಿ ನಮ್ಮ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ನಮ್ಮ ಕನ್ನಡದ ಯಾವೊಬ್ಬ ನಟರು ಧ್ವನಿ ಎತ್ತದೇ ಇರೋದು ಬಹಳ ನೋವಿನ ಸಂಗತಿ. ನಮ್ಮಿಂದ ನಟರೇ ಒರತು ನಟರಿಂದ ನಾವಲ್ಲ ಅನ್ನೋ ಸತ್ಯವನ್ನು ಅರಿತು ಇಂಥಹ ಚಲನಚಿತ್ರ ನಟರನ್ನು ನಂಬದೆ ಇನ್ನಾದರೂ ಏಳು ಕೋಟಿ ಕನ್ನಡಿಗರು ಈ ದೇಶದ ಬೆನ್ನೆಲುಬು ರೈತರ ಪರವಾಗಿ ನಿಲ್ಲಬೇಕೆಂದು ನಿಮ್ಮಲ್ಲಿ ಕೈಮುಗಿದು ವಿನಂತಿಯನ್ನು ಮಾಡಿಕೊಳ್ಳುತ್ತೇವೆ…. ರೈತ ಉಳಿದರೆ ನಾವೆಲ್ಲ ರೈತನಿಲ್ಲದ ಜಗವಿಲ್ಲ….. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

You cannot copy content of this page

Exit mobile version