ದೆಹಲಿ: ತಲಾಕ್-ಎ-ಹಸನ್ ಮತ್ತು ನ್ಯಾಯಾಲಯದ ಹೊರಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಪದ್ಧತಿಯನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲೆ ನವೆಂಬರ್ 19 ಮತ್ತು 20ರಂದು ಅಂತಿಮ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಿದೆ.
ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ತಲಾಕ್-ಎ-ಹಸನ್ ಎಂದರೆ, ಪತಿಯು ಒಂದು ತಿಂಗಳಿಗೆ ಒಂದು ಬಾರಿ, ಸತತ ಮೂರು ತಿಂಗಳು ತಲಾಕ್ ಹೇಳಿದಾಗ ವಿಚ್ಛೇದನ ನೀಡಿದಂತಾಗುತ್ತದೆ. ಇದು ಅಸಂವಿಧಾನಿಕ ಎಂದು ಗಾಜಿಯಾಬಾದ್‌ನ ಬೆನಜೀರ್ ಹೀನಾ ಎಂಬ ಮಹಿಳೆ ಸಲ್ಲಿಸಿದ ಅರ್ಜಿಯೊಂದಿಗೆ ಒಟ್ಟು 9 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಲಿಂಗ ಮತ್ತು ಧರ್ಮದ ಭೇದವಿಲ್ಲದೆ ಎಲ್ಲ ನಾಗರಿಕರಿಗೂ ಒಂದೇ ರೀತಿಯ ವಿಚ್ಛೇದನ ಪದ್ಧತಿ ಜಾರಿಗೆ ತರುವಂತೆ ಕೇಂದ್ರಕ್ಕೆ ಆದೇಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ವಿಚಾರವಾಗಿ ಕೇಂದ್ರ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಕೋರಿದೆ.
ಈ ಹಿಂದೆ ತ್ರಿವಳಿ ತಲಾಖ್ ಪ್ರಕರಣದಲ್ಲಿ ನ್ಯಾಯಾಲಯದ ಹೊರಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಪದ್ಧತಿಗಳನ್ನು ಕೇಂದ್ರ ಸರ್ಕಾರ ವಿರೋಧಿಸಿತ್ತು ಎಂದು ಕೇಂದ್ರದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ವಿವರಿಸಿದರು.