Friday, June 14, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಕೇರಳ ಪೊಲೀಸ್‌ FIR

ಬೆಂಗಳೂರು,ಅಕ್ಟೋಬರ್.‌31: ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ, ಕಲಮಸ್ಸೆರಿ ಪುರಸಭೆಯ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಕೂಟದಲ್ಲಿ ಎರಡು ದೊಡ್ಡ ಸ್ಫೋಟಗಳು ಸಂಭವಿಸಿದವು. ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಮಾವೇಶಕ್ಕೆ ರಾಜ್ಯದಾದ್ಯಂತ ಸುಮಾರು 2,500 ಯೆಹೋವನ ಸಾಕ್ಷಿಗಳು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಸ್ಫೋಟಗಳು ಸಂಭವಿಸಿದವು.

ಇದರ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದಂತೆ, ಚಂದ್ರಶೇಖರ್ X ಪೋಸ್ಟ್‌ನಲ್ಲಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವದೆಹಲಿಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, “ಜಿಹಾದ್‌ಗಾಗಿ ಭಯೋತ್ಪಾದಕ ಹಮಾಸ್‌ನ ನೀಡಿದ ಕರೆ ಮುಗ್ಧ ಕ್ರಿಶ್ಚಿಯನ್ನರ ಮೇಲಿನ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿದೆ” ಎಂದು ಟ್ವೀಟ್‌ ಮಾಡಿದ್ದರು.

ಈ ಸ್ಫೋಟ ಸಂಭವಿಸುವ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್ ಗಾಜಾ ಮೇಲಿನ ಇಸ್ರೇಲ್‌ನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಕೋರಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಚಂದ್ರಶೇಖರ್, “ಕೊಳಕು, ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ” ಪಿಣರಾಯ್‌ ವಿಜಯನ್ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನ್ ಮೂಲಭೂತವಾದಿಗಳ ವಿರುದ್ಧ ಸಹಿಷ್ಣುತೆ ತೋರಿದ್ದಾರೆ ಎಂದು ಕಿಡಿಕಾರಿದ್ದರು.

ಅಕ್ಟೋಬರ್ 27 ರಂದು ಮಲಪುರಂನಲ್ಲಿ ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಪ್ಯಾಲಿಸ್ತೇನ್ ಪರ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹಮಾಸ್‌ನ ಮಾಜಿ ಮುಖ್ಯಸ್ಥ ಖಲೀದ್ ಮಶಾಲ್ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು ವರದಿಯಾಗಿತ್ತು.

ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಲ್ಲಿ ಒಂದಾದ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಪ್ಯಾಲೇಸ್ಟಿನಿಯನ್ ಹೋರಾಟಗಾರರನ್ನು ಪ್ರಪಂಚದಾದ್ಯಂತದ ಜನರು ಬೆಂಬಲಿಸಬೇಕು ಎಂದು ಮಶಾಲ್ ಭಾಷಣದಲ್ಲಿ ಹೇಳಿದ್ದರು.

“ಇಸ್ರೇಲ್ ನಮ್ಮ ನಿವಾಸಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಮನೆಗಳನ್ನು ಕೆಡವಲಾಗುತ್ತಿದೆ. ಅವರು ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ನಾಶಪಡಿಸಿದ್ದಾರೆ. ಅವರು ಚರ್ಚುಗಳು, ದೇವಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿಶ್ವಸಂಸ್ಥೆಯ ಕಟ್ಟಡಗಳನ್ನೂ ನಾಶಪಡಿಸುತ್ತಿದ್ದಾರೆ. ಈ ದಾಳಿಯ ಗಾಜಾವನ್ನು ಇಲ್ಲವಾಗಿಸುವುದೇ ಇದರ ಅರ್ಥ, ಮತ್ತು ಅವರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಗಾಜಾದಲ್ಲಿನ ಹೋರಾಟಗಾರರು ಅವರನ್ನು ತಮ್ಮ ಮಿಲಿಟರಿಯಿಂದ ಸೋಲಿಸಿದ್ದಾರೆ,” ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ಯಾಲಿಸ್ತೇನ್ ಹಿತಾಸಕ್ತಿಗಳನ್ನು ಸಮರ್ಥಿಸುವ ಸೋಗಿನಲ್ಲಿ ಸಂಘಟಕರು ಹಮಾಸನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ತನಿಖೆಗೆ ಕರೆ ಆಗ್ರಹಿಸಿತ್ತು.

ಇದಾದ ನಂತರ, ಸೋಮವಾರ, ಪಿಣರಾಯ್‌ ವಿಜಯನ್ ಹಮಾಸ್ ನಾಯಕನ ಭಾಷಣವನ್ನು ಪೊಲೀಸರು ಪರಿಶೀಲಿಸುತ್ತಾರೆ ಮತ್ತು ರಾಜೀವ್‌ ಚಂದ್ರಶೇಖರ್ ಅವರನ್ನು “ಅತ್ಯಂತ ವಿಷಕಾರಿ” ಎಂದು ಟೀಕಿಸಿದ್ದು ಪಿಟಿಐಯಲ್ಲಿ ವರದಿಯಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು